Advertisement

ಡಿ.13ಕ್ಕೆ ನಮ್ಮನೆ ಹಬ್ಬಕ್ಕೆ ದಶಮಾನೋತ್ಸವ, ‘ವಂಶೀವಿಲಾಸ’ಲೋಕಾರ್ಪಣೆ

06:30 PM Nov 30, 2021 | Team Udayavani |

ಶಿರಸಿ: ಸಾಧಕರಿಗೆ ಸಮ್ಮಾನ, ‘ವಂಶೀವಿಲಾಸ’ ವಿಶ್ವಶಾಂತಿ ಸರಣಿಯ ಏಳನೇ ಯಕ್ಷನೃತ್ಯ ರೂಪಕದ ಲೋಕಾರ್ಪಣೆ, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಡಿಸೆಂಬರ್ 13ರಂದು ಸಂಜೆ 4:30ರಿಂದ ತಾಲೂಕಿನ ಬೆಟ್ಟಕೊಪ್ಪದಲ್ಲಿ ‘ನಮ್ಮನೆ ಹಬ್ಬ’ ನಡೆಯಲಿದೆ ಎಂದು ವಿಶ್ವಶಾಂತಿ ಸೇವಾ ಟ್ರಸ್ಟನ ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ, ಉಪಾಧ್ಯಕ್ಷ ರಮೇಶ ಹೆಗಡೆ ಹಳೇಕಾನಗೋಡ ತಿಳಿಸಿದ್ದಾರೆ.

Advertisement

ನಮ್ಮನೆ ಹಬ್ಬದ ದಶಮಾನೋತ್ಸವ ಸಮಾರಂಭಕ್ಕೆ ಸಂಜೆ 5:40ಕ್ಕೆ ಹೆಸರಾಂತ ಚಿತ್ರನಟಿ ತಾರಾ ಚಾಲನೆ ನೀಡಲಿದ್ದಾರೆ. ಅತಿಥಿಗಳಾಗಿ ವಿ.ಉಮಾಕಾಂತ ಭಟ್ಟ ಕೆರೇಕೈ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ವಿಜಯ ಕರ್ನಾಟಕ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೇಮನೆ, ದಿ.ಎಂ.ಎ.ಹೆಗಡೆ ಅವರ ಪುತ್ರ ವಿನಾಯಕ ಹೆಗಡೆ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಕಾರ್ಯಕ್ರಮ ನಡೆಸುತ್ತಿರುವ ವಿಶ್ವಶಾಂತಿ ಸೇವಾ ಟ್ರಸ್ಟನ ಅಧ್ಯಕ್ಷೆ, ಸಾಹಿತಿ ಭುವನೇಶ್ವರಿ ಹೆಗಡೆ ವಹಿಸಿಕೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಜೀವ ಜಲ ಸಂರಕ್ಷಣಾ ಕಾರ್ಯದಲ್ಲಿ ಮುಂಚೂಣಿಯಾಗಿ ತೊಡಗಿಕೊಂಡ ಶ್ರೀನಿವಾಸ ಹೆಬ್ಬಾರ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಅವರಿಗೆ ನಮ್ಮನೆ ಪ್ರಶಸ್ತಿ, ಯುವ ಕಲಾವಿದ ಕು. ವಿಭವ ಮಂಗಳೂರು ಅವರಿಗೆ ನಮ್ಮನೆ ಯುವ ಪುರಸ್ಕಾರ ಪ್ರದಾನವಾಗಲಿದೆ.

ಇಳಿಹೊತ್ತು ೪:೩೦ಕ್ಕೆ ಕು. ನಯನ ಬಳಸಗೋಡು ಯೋಗ ಪ್ರದರ್ಶನ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ,  4:40ಕ್ಕೆ ಕು. ಅಖಿಲಾ ನಾಗರಾಜ್ ಹೆಗಡೆ ಶಿರನಾಲರಿಂದ ಮುರುಳಿ ನಾದೋತ್ಸವ, ೫:೦೫ರಿಂದ ಸಾಗರದ ಶಿಶಿರ ವಿಘ್ನೇಶರಿಂದ ಭಕ್ತಿ ಭಾವಗೀತೋತ್ಸವ ನಡೆಯಲಿದೆ. ತಬಲಾದಲ್ಲಿ ಗಣೇಶ ಗುಂಡ್ಕಲ್, ಹಾರ್ಮೋನಿಯಂನಲ್ಲಿ ಪ್ರಕಾಶ ಹೆಗಡೆ ಯಡಹಳ್ಳಿ ಸಹಕಾರ ನೀಡಲಿದ್ದಾರೆ.

ಇದೇ ವೇದಿಕೆಯಲ್ಲಿ ಸಂಜೆ 7:15 ಕ್ಕೆ ದಿ. ಎಂ.ಎ.ಹೆಗಡೆ ಅವರು ರಚಿಸಿದ ವಿ.ಉಮಾಕಾಂತ ಭಟ್ಟ‌ ಕೆರೇಕೈ ನಿರ್ದೇಶಿಸಿದ ವಿಶ್ವಶಾಂತಿ ಸಂದೇಶ ಸರಣಿಯ ಏಳನೇ  ಯಕ್ಷ ನೃತ್ಯ ರೂಪಕವು ಪ್ರಥಮ ಪ್ರದರ್ಶನ ಕಾಣಲಿದೆ.  ಕು.ತುಳಸಿ ಹೆಗಡೆ ಸುಮಾರು ಒಂದುಕಾಲು ಗಂಟೆಗಳ ಕಾಲ ರಂಗದಲ್ಲಿ ಭಗವಾನ್ ಶ್ರೀ ಕೃಷ್ಣನ ಪ್ರೇಮಾಮೃತವನ್ನು ‘ವಂಶೀವಿಲಾಸ’ ಮೂಲಕ ಪ್ರಥಮವಾಗಿ ಪ್ರದರ್ಶನ ನೀಡಲಿದ್ದಾಳೆ‌. ಈ ರೂಪಕದ ಮೂಲ ಕಲ್ಪನೆ ಹಳೇಕಾನಗೋಡಿನ ರಮೇಶ ಹೆಗಡೆ ಅವರದ್ದಾಗಿದೆ. ಬಡಗಿನ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಶಂಕರ ಭಾಗವತ್ ಹಾಗೂ ಚಂಡೆಯಲ್ಲಿ ವಿಘ್ನೇಶ್ವರ ಗೌಡ, ಪ್ರಸಾದನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕಾರ ನೀಡಲಿದ್ದಾರೆ.

Advertisement

ನರ್ತನ ಸಲಹೆಯನ್ನು ಹಿರಿಯ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ ನೀಡಿದ್ದು, ಹಿನ್ನೆಲೆ ಧ್ವನಿಯನ್ನು ಡಾ. ಶ್ರೀಪಾದ ಭಟ್ಟ ಒದಗಿಸಿದ್ದಾರೆ. ಯಕ್ಷಗಾನದ ಔಪಚಾರಿಕ ಶಿಕ್ಷಣವನ್ನು ಜಿ.ಎಸ್.ಭಟ್ಟ ಪಂಚಲಿಂಗ ನೀಡಿದ್ದಾರೆ. ಗಾಯತ್ರೀ ರಾಘವೇಂದ್ರ ನಿರ್ವಹಣೆ ಮಾಡುತ್ತಿದ್ದಾರೆ. ಧ್ವನಿ ಗ್ರಹಣವನ್ನು ಉದಯ ಪೂಜಾರಿ ನಡೆಸಿದ್ದಾರೆ ಎಂದು ಪ್ರಕಟನೆಯಯಲ್ಲಿ  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next