ಶಿರಸಿ: ಮಂತ್ರಿ ಸ್ಥಾನಕ್ಕಾಗಿ ಯಾವುದೇ ಕಾರಣಕ್ಕೂ ಬಯೋಡಾಟಾ ಹಿಡಿದು ಮನೆ ಮನೆಗೆ ಓಡಾಟ ಮಾಡುವುದಿಲ್ಲ. ಒಳ್ಳೆಯ ಸರಕಾರ ಕೊಡಬೇಕಿದ್ದರೆ ಒಳ್ಳೆಯ ಮಂತ್ರಿ ಇರಬೇಕು ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ಶಾಸಕ ಬಸವರಾಜ ಪಾಟಿಲ ಯತ್ನಾಳ ಹೇಳಿದರು.
ಅವರು ಗೋಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು ಯಡಿಯೂರಪ್ಪ ಅವರ ಸರಕಾರದಲ್ಲಿ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಬೇಡಿಕೆ ಯಾಕೆ ಇಡಬೇಕು. ಅರ್ಹತೆ, ಯೋಗ್ಯತೆ, ನಮ್ಮದೇ ಕಾರ್ಯಶೈಲಿಯ ಬಗ್ಗೆ ನಮ್ಮ ಪಕ್ಷದ ಹೈ ಕಮಾಂಡ್‌ಗೂ ಗೊತ್ತಿದೆ. ತೀರ್ಮಾನ ಮುಖ್ಯಮಂತ್ರಿಗಳಿಗೆ, ಹೈ ಕಮಾಂಡ್‌ಗೆ ಬಿಟ್ಟದ್ದು ಎಂದರು.
ಮೂರುವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಗಳು. ಕೇಂದ್ರದವರಿಗೂ, ತೊಂದರೆ ಕೊಡುವವರಿಗೂ ಕರ್ನಾಟಕದಲ್ಲಿ ಇವರ ನೇತೃತ್ವ ಎಂಬುದನ್ನು ಮತದಾರರೂ ಸಾಬೀತು ಮಾಡಿದ್ದಾರೆ. ಮಹಾರಾಷ್ಟ್ರದ ಬಳಿಕ ಕೇಂದ್ರದವರೂ ತೊಂದರೆ ಕೊಡೋದಿಲ್ಲ. ಸ್ಥಳೀಯ ನಾಯಕತ್ವ, ರಾಜ್ಯ ನಾಯಕತ್ವಕ್ಕೆ ಮಹತ್ವ ಕೊಡಬೇಕು ಎಂಬುದು ಗೊತ್ತಾಗಿದೆ. ದಿಢೀರ್ ಸಾಹಸ ಮಾಡುವುದಿಲ್ಲ ಎಂದರು.
ಏಸಿ ರೂಮಿನಲಿ ಕುಳಿತರೆ ಏನೂ ಆಗದು. ಜನರ ಜೊತೆ ಸ್ಪಂದನೆ ಇಟ್ಟುಕೊಳ್ಳಬೇಕು. ಕಳೆದ ಉಪ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರು ಬಂದರೆ ಹತ್ತು ಜನ ಕೂಡ ಸೇರಿರಲಿಲ್ಲ. ಜನ ಸೇರಿ ಅವರು ಸ್ಟಾರ್ ಪ್ರಚಾರಕರಾಗಬೇಕು. ಅವರನ್ನು ಜನ ಸ್ಟಾರ್ ಮಾಡುತ್ತಾರೆ. ಈ ಘಟನೆಗಳು ಗಂಭೀರ ನೋವಾಗಿದೆ. ಯತ್ನಾಳರ ಮುಗಿ ಬೀಳುತ್ತಿದ್ದಾರೆ ಎಂಬುದೂ ಗೊತ್ತಾಗಿದೆ ಎಂದೂ ಹೇಳಿದರು.
ರಾಜ್ಯಾಧ್ಯಕ್ಷರು ಬಹಳ ಒಳ್ಳೆಯವರು. ಮುಗ್ಧರು. ಒಮ್ಮೊಮ್ಮೆ ಅದೂ ದುರುಪಯೋಗ ಆಗುತ್ತದೆ ಎಂದೂ ಮಾರ್ಮಿಕವಾಗಿ ನುಡಿದ ಅವರು, ಉತ್ತರ ಕರ್ನಾಟಕಕ್ಕೆ ಅನೇಕ ಮೂಲಭೂತ ಸೌಲಭ್ಯಗಳು ಅಗತ್ಯವಾಗಿದೆ. ಪ್ರವಾಹದ ಪರಿಣಾಮದಿಂದ ಅನೇಕ ಶಾಶ್ವತ ಕೆಲಸಗಳೂ ಆಗಬೇಕಿದೆ. ಮುಖ್ಯಮಂತ್ರಿಗಳೂ ಉತ್ತರ ಕರ್ನಾಟಕಕ್ಕೂ ಆದ್ಯತೆ ನೀಡುವುದಾಗಿ ಹೇಳಿದ್ದರೆ. ಉತ್ತರ ಕರ್ನಾಟಕ ಕೂಡ ಇಂದು ಬಿಜೆಪಿಯ ಭದ್ರಕೋಟೆ. ದೇವೇಗೌಡರ ಭದ್ರಕೊಟೆ ಕೆ.ಆರ್. ಪೇಟೆಯಲ್ಲೂ ಬಿಜೆಪಿ ಬಂದಿದೆ.
ಬೀದರ್‌ದಿಂದ ಚಾಮರಾಜನಗರ, ಕೊಡಗಿನಿಂದ ಕೋಲಾರ ತನಕ ಸಂಪೂರ್ಣ ಕರ್ನಾಟಕ ಬಿಜೆಪಿ ಆಗಿದೆ ಎಂದರು. ಉತ್ತರ ಕರ್ನಾಟಕ, ಸರಕಾರದಲ್ಲಿ ಈ ಎರಡರ ಆಯ್ಕೆ ಬಂದರೆ ನಾನು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರವಾಹ ಪೀಡಿತರಿಗೆ ನೆರವಾಗಲು ಕೇಂದ್ರದ ವಿರುದ್ಧನೂ ಧ್ವನಿ ಎತ್ತಿ ಆಗ್ರಹಿಸಿದ್ದೇನೆ.
ಅಗತ್ಯ ಬಿದ್ದರೆ ವಿಧಾನ ಸಭೆ, ಹೊರಗೂ ಧ್ವನಿ ಎತ್ತುತ್ತೇನೆ. 40 ಸಾವಿರ ಕೋಟಿ ರೂ. ಸಾವಿರದ 1200 ಕೋಟಿ ಮಾತ್ರ ಕಳಿಸಿದ್ದಾರೆ. ಸರಕಾರ ವರದಿ ಕಳಿಸಿದ ಬಳಿಕ ಎರಡು ಹಾಗೂ ಮೂರನೇ ಕಂತು ಹಣ ಬರಬಹುದು ಎಂದ ಅವರು, ಎರಡನೇ ಕಂತು ಮೂರನೇ ಕಂತು ಕೊಡುತ್ತಾರೆ ಎಂಬ ವಿಶ್ವಾಸವಿದೆ. ಸರಕಾರ ನೆರೆಯ ಹಾನಿಗೆ, ಸಾಲ ಮನ್ನಾ, ನೀರಾವರಿ ಯೋಜನೆ ಸೇರಿದಂತೆ ಅನೇಕ ಕಾರ್ಯಗಳು ಆಗಬೇಕಿದೆ ಎಂದರು.
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಅವರು ಅಂದು ಆಡಿದ ಮಾತುಗಳು ಚುನಾವಣೆಗೆ ಮಾತ್ರ ಸೀಮಿತವಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದೂ ಹೇಳಿದರು.