ಶಿರಸಿ: ಬಂಗಾರದ ಗಟ್ಟಿ ಕಳ್ಳತನ ನಡೆಸಿ, ಪರಾರಿಯಾದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಮೋಹನ್ ಬಿಂದು ರೋಮ್(30) ಬಂಧಿತ ಆರೋಪಿ. ಈತ ಸಿಂಪಿಗಲ್ಲಿಯಲ್ಲಿ ಅಭಿಜಿತ್ ಸುಬ್ರಹ್ಮಣ್ಯ ಶೇಟ್ ಎಂಬುವವರ ಬಳಿ ಬಂಗಾರದ ಕೆಲಸ ಮಾಡಿಕೊಂಡಿದ್ದನು. ಇವರು ವೈಯಕ್ತಿಕ ಕೆಲಸದ ನಿಮಿತ್ತ ಹೊರಗಡೆ ಹೋದ ವೇಳೆ1.25 ಲಕ್ಷ ರೂ. ಮೌಲ್ಯದ 23 ಗ್ರಾಂ ತೂಕದ ಬಂಗಾರದ ಗಟ್ಟಿ ಕಳ್ಳತನ ನಡೆಸಿ, ಪರಾರಿಯಾಗಿದ್ದನು ಎಂದು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಬಂಗಾರದ ಗಟ್ಟಿ ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧಿಕ್ಷಕ ಜೈಕುಮಾರ, ಡಿ.ಎಸ್.ಪಿ ಕೆ.ಎಲ್. ಗಣೇಶ, ಸಿ.ಪಿ.ಐ ರಾಮಚಂದ್ರ ನಾಯಕ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಗಳಾದ ರಾಜಕುಮಾರ.ಎಸ್. ಉಕ್ಕಲಿ, ರತ್ನಾ ಕುರಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ನಾಗಪ್ಪ ಲಮಾಣಿ, ಪ್ರಶಾಂತ ಪಾವಸ್ಕರ, ಮಧುಕರ ಗಾಂವಕರ, ಸದ್ದಾಂ ಹುಸೇನ್ ಬಿ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಮಟ್ಕಾ ದಂಧೆ ; ಓರ್ವನ ಬಂಧನ
ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಗರದ ಶ್ರದ್ಧಾನಂದಗಲ್ಲಿಯಲ್ಲಿ ನಡೆದಿದೆ.
ಶಿರಸಿ ತಾಲೂಕಿನ ಹುಸರಿ ಕಾನಕೊಪ್ಪದ ಕುಮಾರ ಮಂಜುನಾಥ ದೇವಾಡಿಗ(31) ಬಂಧಿತ ಆರೋಪಿ. ಈತ ಶ್ರದ್ಧಾನಂದಗಲ್ಲಿಯ ಪಾನ್ ಶಾಪ್ ನಲ್ಲಿ ಮಟಕಾ ಜುಗಾರಾಟ ನಡೆಸುತ್ತಿದ್ದಾಗ ಪಿ.ಎಸ್.ಐ ರಾಜಕುಮಾರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, 810 ರೂ. ನಗದು ಸೇರಿ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.