Advertisement

ಸಾವಿರ ವರ್ಷದ ಹಿಂದಿನ ಭೂದಾನದ ಶಾಸನ ಪತ್ತೆ

12:53 PM Nov 18, 2019 | Naveen |

ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ಹಿರೇಜಂಬೂರಿನ ಪಕ್ಕದಲ್ಲಿರುವ ದಾಸನಪುರದಲ್ಲಿ ಒಂದು ಸಾವಿರ ವರ್ಷಗಳ ಹಿಂದಿನ ಪ್ರಾಚೀನ ವಿದ್ಯಾಲಯಕ್ಕೆ ಭೂಮಿ ದಾನದ ಶಾಸನ ಇತ್ತೀಚಿಗೆ ಪತ್ತೆಯಾಗಿದೆ.

Advertisement

ದಾಸನಪುರದ ರಾಜಣ್ಣ ಅವರ ಮನೆಯ ಹಿಂಭಾಗದಲ್ಲಿ ಇದು ಪತ್ತೆಯಾಗಿದ್ದು ಇದರ ಕಾಲವು ಕ್ರಿ.ಶ.1058 ಆಗಿದೆ ಎಂದು ಹೇಳಲಾಗುತ್ತಿದೆ. ಇದರ ರಕ್ಷಣೆಯ ಉದ್ದೇಶದಿಂದ ಮನೆ ಮಾಲೀಕರು ಸಿಮೆಂಟಿನ ಅಡಿಪಾಯ ಹಾಕಿ ಸಂರಕ್ಷಿಸಿದ್ದಾರೆ.

ಪ್ರಾದೇಶಿಕ ಇತಿಹಾಸ ಅಧ್ಯಯನಕಾರ ರಮೇಶ ಬಿ. ಹಿರೇಜಂಬೂರು ಶಾಸನ ಪತ್ತೆ ಹಚ್ಚಿ ಪತ್ರಿಕೆಗೆ ವಿವರವಾದ ಮಾಹಿತಿ ನೀಡಿದ್ದಾರೆ.

ಹಿನ್ನೆಲೆ: ದಾಸನಪುರದ ಶಾಸನದ ಮಾಹಿತಿಯು ಪಕ್ಕದ ಹಿರೇಜಂಬೂರಿನ ಶ್ರೀ ವೀರಭದ್ರೇಶ್ವರ ದೇವಾಲಯದ ಬಲಭಾಗದಲ್ಲಿ ನಿಲ್ಲಿಸಲಾದ ಶಾಸನಕ್ಕೆ ಪೂರಕವಾಗಿದ್ದು ಹಿರೇಜಂಬೂರಿನ ಶಾಸನವು ಅಲ್ಲಿನ ಒಂದು ವಿದ್ಯಾಲಯದ ವಿಶಿಷ್ಟತೆಯ ಕುರಿತು ವಿವರಿಸುತ್ತದೆ. ಮೊದಲಿನ ಏಳು ಸಾಲುಗಳಲ್ಲಿ ಆ ವಿದ್ಯಾಲಯದ ಉಪಾಧ್ಯಾಯರಾದ “ಶ್ರೀ ಕೇಶವೋಜ’ರ ವಿದ್ವತ್ತನ್ನು ವರ್ಣಿಸುತ್ತದೆ. ಅವರು ವೇದ, ವೇದಾಂತ, ಆಗಮ, ಪಂಚ ವ್ಯಾಕರಣಗಳಲ್ಲಿ ಅಪಾರ ಜ್ಞಾನ ಉಳ್ಳವರಾಗಿದ್ದರು. ಅವರನ್ನು ಉಕ§ ಶೋಡಶಿ , ವಾಜಪೇಯಾತಿ, ಸಪ್ತ ಸೋಮ ಸಮಸ್ತ ಎಂದು ಹೊಗಳಲಾಗಿದೆ. ಶ್ರೀ ಕೇಶವೋಜರು ಅತ್ರೇಯ ಗೋತ್ರದವರಾಗಿದ್ದು ಜಂಬೂರಿನಲ್ಲಿ ಅವರ ಜೊತೆ ಸಾವಿರ ಮಹಾಜನರು ವಾಸವಾಗಿದ್ದರು ಎಂದು ತಿಳಿಸುತ್ತದೆ.

ಇಂತಹ ಮಹಾ ಶಿಕ್ಷಕರಿದ್ದ ಈ ವಿದ್ಯಾಲಯದ ಮಾಣಿಗಳಿಗೆ , ಉಪಾಧ್ಯಾಯರಿಗೆ ಹಾಗೂ ವಿವಿಧ ಸೇವೆಗಳಿಗೆ ಈ ಕೆಳಗಿನಂತೆ ದಾನ ನೀಡಲಾಗಿದೆ. ಇದನ್ನು ರಕ್ಷಿಸದವರಿಗೆ ಅನಂತ ಪುಣ್ಯವು ಹಾಗೂ ನಾಶ ಮಾಡಿದವರಿಗೆ ಮಲದಲ್ಲಿ ಕ್ರಿಮಿಯಾಗಿ ಜನಿಸುವ ಶಾಪ ಇದೆ ಎಂದು ಖಂಡರಿಸಲಾಗಿದೆ.

Advertisement

ಈ ಶಾಸನವನ್ನು ಹಿರೇಜಂಬೂರಿನ ಮೂಲ ದಾನಶಾಸನದ ಶೈಲಿಯಲ್ಲೇ ರಚಿಸಲಾಗಿದ್ದು ಒಂದೇ ದಿನ ಎರಡೂ ಶಾಸನಗಳನ್ನು ನೆಡಲಾಗಿದೆ. ಈ ಶಾಸನದ ರಚನೆಕಾರ ನಾಗದಾಸಯ್ಯನಾಗಿದ್ದಾನೆ. ಅಗ್ಗಿಷ್ಟಕ್ಕೆ ದಾನ ನೀಡಿದ ಮೂವತ್ತು ಕಮ್ಮ ಭೂಮಿಯು ಈಗ ದೊರೆತಿರುವ ಶಾಸನದ ಸ್ಥಳವೇ ಆಗಿದ್ದು, ಸುಮಾರು ಸಾವಿರ ವರುಷಗಳ ಹಿಂದೆ ಈಗಿನ ದಾಸನಪುರ ಜಂಬೂರಿನ ವಿದ್ಯಾಲಯದ ದಾನ ಭೂಮಿಯಾಗಿತ್ತು ಎಂಬುದು ಇದರಿಂದ ತಿಳಿಯುತ್ತದೆ.

ಹಿರೇಜಂಬೂರಿನ ಶಾಸನದಲ್ಲಿ ಉಲ್ಲೇಖೀತವಾದ ಕೇಶವೋಜ ಉಪಾಧ್ಯಾಯರ ವಿವರಣೆ ದಾಸನಪುರದ ಶಾಸನದಲ್ಲಿಯೂ ಮುಂದುವರಿದಿದ್ದು ಇದರ ಕಾಲವೂ ಕ್ರಿ.ಶ. 1058 ಆಗಿದೆ. ಆದರೆ ದಾನ ನೀಡಿದ ಮೂವತ್ತು ಕಮ್ಮ ಭೂಮಿ ಯಾವುದೆಂದು ಇದುವರೆಗೂ ತಿಳಿದಿರಲಿಲ್ಲ. ಈ ಶಾಸನದ ಪತ್ತೆಯಿಂದಾಗಿ ದಾನ ನೀಡಿದ ಭೂಮಿಯನ್ನು ಗುರುತಿಸಲು ಸಾದ್ಯವಾಗಿದೆ.
ರಮೇಶ್‌ ಬಿ., ಹಿರೇಜಂಬೂರು,
ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next