Advertisement

ಶಿರಹಟ್ಟಿ:ಭಕ್ತರ ಕಾಮಧೇನು ಶ್ರೀಮಂತಗಡ ಹೊಳಲಮದೇವಿ ಜಾತ್ರೋತ್ಸವ

02:31 PM Feb 04, 2023 | Team Udayavani |

ಶಿರಹಟ್ಟಿ: ತಾಲೂಕಿನ ಶ್ರೀಮಂತಗಡ ಶ್ರೀ ಹೊಳಲಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ.5ರ ರವಿವಾರ ಭಾರತ ಹುಣ್ಣಿವೆ ದಿನ ಮಹಾರಥೋತ್ಸವ ಮತ್ತು ಫೆ.6 ರ ಸೋಮವಾರ ಸಂಜೆ 5ಗಂಟೆಗೆ ಕಡುಬಿನ ಕಾಳಗ ಜರುಗಲಿದೆ.

Advertisement

ರಾಜ್ಯದ ಇತಿಹಾಸದ ಪುಟಗಳಲ್ಲಿ ಶ್ರೀಮಂತಗಡ ಶ್ರೀ ಹೊಳಲಮ್ಮದೇವಿ ವಿಜೃಂಭಿಸಿದ ಮಾಹಿತಿ ಸ್ಪಲ್ಪ ಮಟ್ಟಿಗೆ ಕಾಣಸಿಗುತ್ತಿದೆ. ತನ್ನದೇ ಆದ ಭವ್ಯ ಪರಂಪರೆ ಹೊಂದಿರುವ ನಾಡು ಶ್ರೀಮಂತಗಡ. ಅನೇಕ ಮಹತ್ವದ ಇತಿಹಾಸಗಳು ಬೆಳಕಿಗೆ ಬಾರದೇ ಕಾಲಗರ್ಭದಲ್ಲಿ ಹೂತು ಹೋಗಿವೆ. ಅದರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಿಹಾಳದ ಕ್ಷೇತ್ರ ಹೊಳಲಮ್ಮನ ಗುಡ್ಡವೂ ಒಂದು.

ಶಿವಾಜಿ ಮಹಾರಾಜರಿಗೆ ತನ್ನ ಸೀಮೆಯ ಗಡವೆಂದು ಪ್ರಸಿದ್ಧಿಯಾಗಿತ್ತು. ಹಿಂದೆ ಕಪಿಲ ಮಹರ್ಷಿಗಳು ತಪಗೈದ ಸ್ಥಳ. ಇಂತಹ ಮಹತ್ವದ ಇತಿಹಾಸಗಳನ್ನು ಹುಡುಕಿ ಬೆಳಕಿಗೆ ತರುವ ಪ್ರಯತ್ನವನ್ನು ಪ್ರಾಚ್ಯ ಇಲಾಖೆ ಮಾಡುತ್ತಿದೆ. ಅದರೂ ಸಾಕಷ್ಟು ಬೆಳವಣಿಗೆಯಾಗುತ್ತಿದೆ. ಸರಕಾರದ ಪ್ರತಿನಿಧಿಗಳು ಇಂತಹ ಐತಿಹಾಸಿಕ ಕ್ಷೇತ್ರಗಳ ಅಭಿವೃದ್ಧಿ ಮಾಡಬೇಕಾಗಿದೆ ಎಂಬ ಮಾತುಗಳು ಜನರಿಂದ ಕೇಳಿಬರುತ್ತಿವೆ.

ಕೋಟೆ ಸ್ಥಾಪನೆ: ಶ್ರೀಮಂತಗಡದಲ್ಲಿ ಸುಮಾರು 500 ವರ್ಷಗಳ ಹಿಂದೆ 25ಎಕರೆಯಲ್ಲಿ ಕೋಟೆ ಕಟ್ಟಿರುವುದಾಗಿ ಇತಿಹಾಸದಿಂದ ತಿಳಿದುಬರುತ್ತದೆ. ಸದ್ಯ ಸಂಬಂಧಪಟ್ಟ ಇಲಾಖೆಯವರು ಕೋಟೆಯ ಬಗ್ಗೆ ಗಮನ ಹರಿಸಿ ಅಭಿವೃದ್ಧಿ ಮಾಡುತ್ತಿದ್ದಾರೆ.

ಛತ್ರಪತಿ ಶಿವಾಜಿಗೆ ಖಡ್ಗ ಧಾರಣೆ: ದೇವಿ ಛತ್ರಪತಿ ಶಿವಾಜಿ ಮಹಾರಾಜರಿಗೆ ದುಷ್ಟರ ನಿಗ್ರಹ ಮತ್ತು ಶಿಷ್ಟರ ಪರಿಪಾಲನೆಗೋಸ್ಕರ ಖಡ್ಗ ಧಾರಣೆ ಮಾಡಿರುವ ಚಿತ್ರ ದೇವಸ್ಥಾನದ ಮಹಾದ್ವಾರದಲ್ಲಿ ವಿಜೃಂಭಿಸುತ್ತದೆ.

Advertisement

ಶ್ರೀಮಂತಗಡ ಆಳಿದ ಅರಸರು: ಛತ್ರಪತಿ ಶಿವಾಜಿ ಮಹಾರಾಜರು, ಆನೆಗುಂದಿ ಆಳರಸರು, ವಿಜಯನಗರದ ಕೃಷ್ಣದೇವರಾಯರು, ರಣದುಲ್‌ ಖಾನ ಮುಂತಾದ ಅರಸರು ಇಲ್ಲಿ ರಾಜ್ಯಭಾರ ಮಾಡಿದ್ದು ಇತಿಹಾಸದಿಂದ ತಿಳಿದು ಬರುತ್ತದೆ.

ಗರ್ಭಗುಡಿಯಲ್ಲಿ ದೇವಿ ವೈಭವ!: ಗರ್ಭಗುಡಿಯೊಳಗೆ ಪ್ರವೇಶಿಸಿದಾಗ ಹೊಳಲಮ್ಮದೇವಿಯನ್ನು ಕಣ್ತುಂಬ ನೋಡಿದಾಗ ಕಪ್ಪು ದಿವ್ಯ ಏಕಶಿಲೆಯಲ್ಲಿ ಶೋಭಿಸುತ್ತಿರುವ ಹೊಳಲಮ್ಮನದು ಚಾಮುಂಡಿ ಅವತಾರವಾಗಿದೆ. ಅಷ್ಟ ಭುಜಗಳನ್ನು ಹೊಂದಿದ್ದು, ಶಂಖು, ಬಿಲ್ಲು, ದಿವ್ಯಾಸ್ತ್ರ, ತ್ರಿಶೂಲ, ಚಕ್ರ, ಗಧೆ, ಖಡ್ಗ, ಒಂದು ಕೈಯಲ್ಲಿ ರಾಕ್ಷಸನ ಚೆಂಡನ್ನು ಹಿಡಿದು ಮಹಿಷಾಸುರ ಮರ್ದಿನಿ ಅವತಾರದಲ್ಲಿದ್ದಾಳೆ. ಮಹಿಷಾಸುರನನ್ನು ತ್ರಿಶೂಲದಿಂದ ಸಂಹಾರ ಮಾಡುತ್ತಿರುವ ಸಿಂಹವಾಹಿನಿಯಾದ ದಿವ್ಯಮೂರ್ತಿಯಿದೆ.

ಭಕ್ತರಲ್ಲಿ ಭಕ್ತಿ ರಸವನ್ನುಂಟು ಮಾಡುತ್ತದೆ. ಹೊಳಲಮ್ಮನ ದರ್ಶನದಿಂದ ಮಾತ್ರ ಮನಃಶಾಂತಿ ನೆಲೆಸುತ್ತದೆ. ಇಂತಹ ಪವಿತ್ರ ಸ್ಥಳದಲ್ಲಿ ಹೊಳಲಮ್ಮ ದೇವಿ ನೆಲೆನಿಂತು ಭಕ್ತರ ಬಯಕೆಗಳನ್ನು ಈಡೇರಿಸುವ ಕಾಮಧೇನು ಕಲ್ಪವೃಕ್ಷವಾಗಿದ್ದಾಳೆ. ದೇವಸ್ಥಾನದ ಸುತ್ತಮುತ್ತಲೂ ಕರಡಿಗುಡ್ಡ, ಸಂತ ರಾಮದಾಸರ ಮಂದಿರ, ಬಟ್ಟಲು ಬಾವಿ, ಬನ್ನಿ ಮುಡಿಯುವ ಸ್ಥಳ, ಬರಮದೇವರು, ದ್ವಾರಬಾಗಿಲು, ಮದ್ದಿನ ಹೊಂಡ, ಮುಸುರೆ ಹೊಂಡ, ಸ್ನಾನದ ಹೊಂಡ, ಆನೆ ಹೆಜ್ಜೆ ಹೊಂಡ, ಆನೆ ಹೊಂಡ, ಈಶ್ವರ ದೇವಸ್ಥಾನ, ರೇಣುಕಾಚಾರ್ಯ ದೇವಸ್ಥಾನ, ಮಾತಂಗೆಮ್ಮನ ಗುಡಿ, ಸಿಡಿ ಆಡುವ ಕಟ್ಟಿ, ಯೋಗ ಸಿದ್ದಿ ಸ್ಥಳ ಹೀಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ.

ಇಂತಹ ಇತಿಹಾಸ, ಪರಂಪರೆಯ ಜಾಗೃತ ಸ್ಥಳವಾಗಿರುವ ಶ್ರೀಮಂತಗಡದ ಆದಿಶಕ್ತಿ ಜಗನ್ಮಾತೆ ಶ್ರೀ ಹೊಳಲಮ್ಮದೇವಿ ಜಾತ್ರಾ ಮಹೋತ್ಸವ, ಮಹಾರಥೋತ್ಸವ ಫೆ.5ರಂದು ಅಪಾರ ಭಕ್ತಸಾಗರದ ಮಧ್ಯೆ ಜರುಗಲಿದೆ. ಫೆ. 6 ರಂದು ಕಡುಬಿನ ಕಾಳಗ ಬಹು ವಿಜೃಂಭಣೆಯಿಂದ ಜರುಗಲಿದೆ.

*ಪ್ರಕಾಶ ಶಿ. ಮೇಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next