ಮಂಗಳೂರು: ಬಹು ನಿರೀಕ್ಷೆಯ ಹಾಗೂ ದಶಕದಿಂದಲೇ ಪ್ರಸ್ತಾವದಲ್ಲಿದ್ದ ಶಿರಾಡಿ ಘಾಟಿ ಸುರಂಗ ಮಾರ್ಗ ಹೆದ್ದಾರಿ ಯೋಜನೆಯನ್ನು ಕೇಂದ್ರ ಸರಕಾರ ಕೈಬಿಡುವ ಸೂಚನೆಗಳು ಗೋಚರಿಸಿವೆ. ಈ ಯೋಜನೆಯು ದೊಡ್ಡ ಮೊತ್ತವನ್ನು ಬಯಸುತ್ತದೆ ಹಾಗೂ ಅನೇಕ ಸವಾಲುಗಳಿಂದ ಕೂಡಿರುವ ಕಾರಣ ಕಾರ್ಯಸಾಧುವಲ್ಲ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ.
ಲೋಕಸಭೆಯಲ್ಲಿ ಗುರುವಾರ ಸಂಸದ ನಳಿನ್ ಕುಮಾರ್ ಕಟೀಲು ಅವರ ಚುಕ್ಕಿ ಗುರುತಿಲ್ಲದ ಪ್ರಶ್ನೆಗೆ ಕೇಂದ್ರ ಹೆದ್ದಾರಿ, ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿಯವರು ನೀಡಿರುವ ಉತ್ತರದಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಲಾಗಿದೆ.
ಮಂಗಳೂರಿಗೆ ಫೆಬ್ರವರಿಯಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸಕ್ಕಾಗಿ ಆಗಮಿಸಿದ್ದ ಗಡ್ಕರಿಯವರು 6 ಲೇನ್‌ನ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳುತ್ತೇವೆ, ಇದಕ್ಕಾಗಿ 14 ಸಾವಿರ ಕೋಟಿ ರೂ.ನ ಯೋಜನೆ ಸಿದ್ಧವಾಗಿದೆ ಎಂದು ತಿಳಿಸಿದ್ದರು.
ಚತುಷ್ಪಥವಾಗಿ ಮೇಲ್ದರ್ಜೆಗೆ:
Related Articles
ಶಿರಾಡಿ ಭಾಗದಲ್ಲಿ ಸಂಚಾರ ದಟ್ಟಣೆ ಸುಗಮ ಗೊಳಿಸಲೋಸುಗ ಈಗಿರುವ 2-ಪಥ ಹೆದ್ದಾರಿಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲಾಗುತ್ತದೆ, ಇದಕ್ಕಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸಾಧ್ಯತಾ ವರದಿ (ಡಿಪಿಆರ್) ತಯಾರಿಕೆ ತಜ್ಞರನ್ನು ನೇಮಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಮಂಗಳೂರು ಹಾಗೂ ಬೆಂಗಳೂರು ಮಧ್ಯೆ ಸರಕು ಸಾಗಣೆ ಹಾಗೂ ಜನರ ಸಂಚಾರವನ್ನು ಸುಗಮಗೊಳಿಸುವ ದೃಷ್ಟಿಯಿಂದ ಈ ಯೋಜನೆ ಬಹಳ ಮಹತ್ವದ್ದು ಎಂದು ಈ ಭಾಗದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪ್ರತಿನಿಧಿಗಳು ಹಿಂದಿನಿಂದಲೂ ಪ್ರತಿಪಾದಿಸಿದ್ದರು.
ಸುರಂಗ ಯೋಜನೆಯ ಮರ್ಮ:
ಯೋಜನಾ ಸ್ಥಳದ ಭೂ-ತಾಂತ್ರಿಕ ಪರೀಕ್ಷೆಗಳನ್ನು ಆಸ್ಟ್ರಿಯಾ ಮೂಲದ ಜಿಯೊ ಕನ್ಸಲ್ಟ್ ಇಂಡಿಯಾ ಸಂಸ್ಥೆಯವರು ನಡೆಸಿ ಡಿಪಿಆರ್ ಸಿದ್ಧಪಡಿಸಿದ್ದರು. 23.5 ಕಿ.ಮೀ ಉದ್ದದ ಸುರಂಗ ಮಾರ್ಗ ಯೋಜನೆಯಲ್ಲಿ 6 ಸುರಂಗಗಳು, 7 ಸೇತುವೆಗಳು ಸೇರಿದ್ದವು.
ಬೆಂಗಳೂರು-ಮಂಗಳೂರು ಮಧ್ಯೆ ರಸ್ತೆ ಸಂಚಾರಕ್ಕೆ ಸದ್ಯ 7-8 ಗಂಟೆ ತಗಲುತ್ತದೆ. ಇದರಲ್ಲಿ ಘಾಟಿ ಪ್ರದೇಶದ ಪ್ರಯಾಣದಲ್ಲಿ ಕನಿಷ್ಠ ಒಂದು ಗಂಟೆ ಕಡಿಮೆ ಮಾಡುವುದು, ಸುಗಮ ಸಂಚಾರಕ್ಕೆ ನೆರವಾಗುವ ಮಹತ್ವದ ಉದ್ದೇಶವನ್ನು ಸುರಂಗ ಮಾರ್ಗ ಯೋಜನೆ ಹೊಂದಿತ್ತು. ರಸ್ತೆ ವಿಸ್ತರಣೆಗೆ ಸಾಕಷ್ಟು ಕಾಡು ನಾಶವಾಗುತ್ತದೆ, ಅದೇ ಸುರಂಗ ಮಾರ್ಗವಾದರೆ ಅಂತಹ ಸಮಸ್ಯೆ ಇಲ್ಲ ಎನ್ನುವುದು ಮತ್ತೂಂದು ಅಂಶ.
ಮಡಿಕೇರಿ ಮೈಸೂರು ಚತುಷ್ಪಥ:
ಮಡಿಕೇರಿ-ಮೈಸೂರು ಚತುಷ್ಪಥ ಯೋಜನೆ ಕುರಿತು ಕೇಳಲಾದ ಪ್ರಶ್ನೆಗೆ ಎನ್‌ಎಚ್ 275ರ ಮಡಿಕೇರಿ-ಮೈಸೂರು ಭಾಗ ಐದು ಪ್ಯಾಕೇಜ್‌ಗಳನ್ನು ಹೊಂದಿದ್ದು, ಪ್ಯಾಕೇಜ್ 1(27 ಕಿ.ಮೀ) ಡಿಪಿಆರ್ ಕೆಲಸ ಪ್ರಗತಿಯಲ್ಲಿದೆ. 92 ಕಿ.ಮೀನ ಎರಡನೇ ಪ್ಯಾಕೇಜ್‌ಗೆ ಟೆಂಡರ್ ಕರೆಯಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ತೀರ್ಥಹಳ್ಳಿ-ಮಲ್ಪೆ ಚತುಷ್ಪಥ:
ತೀರ್ಥಹಳ್ಳಿ ಹಾಗೂ ಮಲ್ಪೆ ಮಧ್ಯೆ 28.3 ಕಿ.ಮೀ. ಭಾಗವನ್ನು ಚತುಷ್ಪಥಗೊಳಿಸುವ 355.7 ಕೋಟಿ ರೂ. ಮೊತ್ತದ ಯೋಜನೆಯ ಕಾರ್ಯಾದೇಶವನ್ನು ಕಳೆದ ಸೆಪ್ಟಂಬರ್‌ನಲ್ಲಿ ನೀಡಲಾಗಿದೆ.
ಪರ್ಕಳದಿಂದ ಮಲ್ಪೆ ಮಧ್ಯೆ 9 ಕಿ.ಮೀ. ಭಾಗವನ್ನು ಚತುಷ್ಪಥಗೊಳಿಸುವ ಕೆಲಸ ಶೇ. 92ರಷ್ಟು ಪೂರ್ಣಗೊಂಡಿದೆ, ಮುಂದಿನ ವರ್ಷ ಮಾರ್ಚ್ 31ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದೂ ತಿಳಿಸಿದ್ದಾರೆ.
ಮಂಗಳೂರು –ಬೆಂಗಳೂರು ರಸ್ತೆ ದುರಸ್ತಿಗೆ ಅನುದಾನ ಒದಗಿಸುವ ಭರವಸೆ:
ಬೆಳ್ತಂಗಡಿ: ಮಂಗಳೂರು – ಶಿರಾಡಿ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತೀರಾ ಹದಗೆಟ್ಟಿದ್ದು ತತ್‌ಕ್ಷಣ ದುರಸ್ತಿಗೊಳಿಸಲು ಅನುದಾನ ನೀಡುವಂತೆ ರಾಜ್ಯಸಭಾ ಸದಸ್ಯರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದು, ಸಚಿವರಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಸ್ತೆ ತೀರಾ ಹದಗೆಟ್ಟಿರುವುದರಿಂದ ಟ್ರಕ್ ಸಹಿತ ಬಸ್ ಸಂಚಾರ, ಪ್ರಯಾಣಿಕರಿಗೆ ತ್ರಾಸದಾಯಕವಾಗಿದೆ. ಸದ್ಯ ಮಳೆ ನಿಂತಿದ್ದು ರಸ್ತೆ ದುರಸ್ತಿಗೆ ಸಕಾಲವಾಗಿದೆ ಎಂದು ಹೆಗ್ಗಡೆಯವರು ತಿಳಿಸಿದ್ದರು.
ಪತ್ರಕ್ಕೆ ತತ್‌ಕ್ಷಣ ಸ್ಪಂದಿಸಿದ ಸಚಿವ ಗಡ್ಕರಿ ಅವರು, ಈ ಬಗ್ಗೆ ಪರಿಶೀಲಿಸಿ ಅನುದಾನ ಬಿಡುಗಡೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಪತ್ರದ ಮೂಲಕ ಭರವಸೆ ನೀಡಿದ್ದಾರೆ.