Advertisement

ಶಿರಾಡಿ ಘಾಟಿ: 6 ತಿಂಗಳು ರಸ್ತೆ ಮುಚ್ಚಿದರೆ ತತ್ತರಿಸಲಿದೆ ಆರ್ಥಿಕತೆ

01:02 AM Jan 27, 2022 | Team Udayavani |

ಮಂಗಳೂರು: ಶಿರಾಡಿ ಕರಾವಳಿಯ ಜೀವ ನಾಡಿ. ಶಿರಾಡಿ ಘಾಟಿ ರಸ್ತೆಯಲ್ಲಿ ಉಂಟಾಗುವ ಯಾವುದೇ ಅಡಚಣೆ ಕರಾವಳಿಯ ಆರ್ಥಿಕತೆ ಮತ್ತು ಜನಜೀವನದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂಬುದು ಈ ಹಿಂದಿನ ಅನುಭವಗಳು ಕಲಿಸಿದ ಪಾಠ.

Advertisement

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುವ ಶಿರಾಡಿ ಘಾಟಿ ರಸ್ತೆ ರಾಜಧಾನಿ ಬೆಂಗಳೂರು ಮತ್ತು ಕರಾವಳಿಯೊಂದಿಗೆ ಜೋಡಿ ಸುವ ಪ್ರಮುಖ ಸಂಪರ್ಕ ರಸ್ತೆ. ಇಲ್ಲಿ ಯಾವುದೇ ಅಡಚಣೆಗಳಾದರೂ ಬೆಂಗ ಳೂರು- ಮಂಗಳೂರು ಮಧ್ಯೆ ಜೀವನಾವಶ್ಯಕ ವಸ್ತುಗಳು ಮತ್ತು ಕೃಷಿ ಮತ್ತು ಕೈಗಾರಿಕೆಗಳ ಉತ್ಪನ್ನಗಳ ಸಾಗಣೆ ಮತ್ತು ಲಭ್ಯತೆ ಮೇಲೆ ಸಮಸ್ಯೆ ತಲೆದೋರುತ್ತದೆ. ಇನ್ನೊಂದೆಡೆ ಇಡೀ ಸಂಚಾರ ವ್ಯವಸ್ಥೆ ಬುಡಮೇಲಾಗುತ್ತದೆ.

ಶಿರಾಡಿ ರಸ್ತೆ ನವಮಂಗಳೂರು ಬಂದರು ಮತ್ತು ಕರಾವಳಿಯ ಕೈಗಾರಿಕಾ ಕ್ಷೇತ್ರದ ಆಧಾರಸ್ತಂಭ. ಈ ರಸ್ತೆ ಮೂಲಕ ನಿತ್ಯವೂ ಮಂಗಳೂರಿಗೆ ಸುಮಾರು 600 ಕಂಟೈನರ್‌ಗಳು ಬಂದು ಹೋಗುತ್ತವೆ. ಹಾಗೆಯೇ ಸುಮಾರು 400 ಇತರೆ ಟ್ರಕ್‌ಗಳು ಸಂಚರಿಸುತ್ತವೆ. ರಸ್ತೆ ಸಂಪೂರ್ಣ ಮುಚ್ಚಿದರೆ ಇದರಲ್ಲಿ ನವಮಂಗಳೂರಿಗೆ ಬರುವ ಕಾರ್ಗೊದಲ್ಲಿ ಶೇ.50 ರಷ್ಟು ಕುಸಿತವಾಗಬಹುದು. ಮುಖ್ಯವಾಗಿ ಹಾಸನ, ಕುಣಿಗಲ್‌, ಬೆಂಗಳೂರು ಹಾಗೂ ಮೈಸೂರಿನಿಂದ ಕಾಫಿ, ತೆಂಗಿನ ನಾರಿನ ಉತ್ಪನ್ನಗಳು, ಜವಳಿ ಮುಂತಾದ ಉತ್ಪನ್ನಗಳು ಈ ಘಾಟಿ ಮೂಲಕ ಬಂದು ನವ ಮಂಗಳೂರು ಬಂದರನ್ನು ತಲುಪುತ್ತವೆ.

ಮುಖ್ಯವಾಗಿ ಜನವರಿಯಿಂದ ಮೇ ತಿಂಗಳವರೆಗೆ ರಫ್ತು ವ್ಯವಹಾರ ಹೆಚ್ಚಿರುತ್ತದೆ. ಎನ್‌ಎಂಪಿಟಿ ಮೂಲಕ 25,000 ಟಿಇಯು (3,75,000 ಟನ್‌) ಕಂಟೈನರ್‌, 1,70,000 ಖಾದ್ಯ ತೈಲ, 40,000 ರಸಗೊಬ್ಬರ ಹಾಗೂ 1,00000 ಟನ್‌ ಸ್ಟೀಲ್‌ ಕಾಯಿಲ್‌ ಕಾರ್ಗೊಗಳು ಸಾಗುತ್ತವೆ. ಸಂಪಾಜೆ ಘಾಟಿಯಲ್ಲಿ ಘನ ವಾಹನಗಳ ಸಂಚಾರ ಕಷ್ಟ ಸಾಧ್ಯ. ಚಾರ್ಮಾಡಿ ಘಾಟಿಯಲ್ಲಿ ಈಗಾಗಲೇ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧವಿದೆ. ಹಾಗಾಗಿ ಯಲ್ಲಾಪುರ ಮೂಲಕ ಮಂಗಳೂರು ಬಂದರನ್ನು ಸಂಪರ್ಕಿಸಿದರೆ ಸಾಗಾಟ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತದೆ. ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳವಾಗಿ ಅಂತಾ ರಾಷ್ಟ್ರೀಯ ವ್ಯಾಪಾರಕ್ಕೆ ಹೊಡೆತ ಬೀಳ ಲಿದೆ. ಆದುದರಿಂದ ರಫ್ತುದಾರರು ಚೆನ್ನೈ, ಟೂಟಿ ಕಾರನ್‌, ಕೊಚ್ಚಿ ಬಂದರುಗಳಿಗೆ ಸಾಗುತ್ತಾರೆ.

ಕಂಟೈನರ್‌ಗಳು ಸುತ್ತಿ ಬಳಸಿ ಬರುವು ದರಿಂದ ಸಾಗಾಟ ವೆಚ್ಚದಲ್ಲಿ ಶೇ.50ರಷ್ಟು ಏರಿಕೆಯಾಗಲಿದ್ದು, ಮಂಗಳೂರಿಗೆ ಹೊಡೆತ ಬೀಳುವ ಸಾಧ್ಯತೆಗಳಿವೆ ಎನ್ನುತ್ತಾರೆ ನವಮಂಗಳೂರು ಬಂದರು ಬಳಕೆದಾರರ ಅಸೋಸಿಯೇಶನ್‌ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ.ಕರಾವಳಿಯಿಂದ ರಾಜ್ಯದ ಒಳನಾಡುಗಳಿಗೆ ಮೀನು ಸಾಗಣೆ ಹಾಗೂ ಹಾಸನ ಮುಂತಾದೆಡೆಗಳಿಂದ ಮಂಗಳೂ ರಿಗೆ ತರಕಾರಿ, ಹೂವು , ಹಣ್ಣು ಮುಂತಾದವು ಈ ರಸ್ತೆಯಿಂದಲೇ ಸಾಗಾಟವಾಗುತ್ತಿವೆ. ಶಿರಾಡಿಘಾಟಿ ರಸ್ತೆ ಮುಚ್ಚುಗಡೆ ಮೀನುಗಾರರು, ರೈತರು ನಷ್ಟ ಅನುಭವಿಸುತ್ತಾರೆ. ಇನ್ನೊಂದೆಡೆ ಈ ಉತ್ಪನ್ನಗಳು ತುಟ್ಟಿಯಾಗಿ ಜನ ಸಾಮಾನ್ಯ ರಿಗೆ ಹೊರೆಯಾಗಲಿದೆ.

Advertisement

ಪ್ರವಾಸೋದ್ಯಮಕ್ಕೆ ಹಿನ್ನಡೆ: ಜನವರಿ ಯಿಂದ ಮೇ ವರೆಗಿನ ಅವಧಿಯು ಪ್ರವಾಸೋ ದ್ಯಮದ ಅವಧಿ. ಪ್ರತಿ ತಿಂಗಳು ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಕರಾವಳಿಯ ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ, ಕೊಲ್ಲೂರು ಸೇರಿದಂತೆ ಪುಣ್ಯಕ್ಷೇತ್ರಗಳು, ಬೀಚ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಶಿರಾಢಿ ಘಾಟಿ ರಸ್ತೆ ಮುಚ್ಚಿದರೆ ಪ್ರವಾಸಿಗರು ಬೇರೆಡೆಗೆ ತೆರಳುವ ಸಂಭವವಿದೆ. ಈಗಾಗಲೇ ಕೊರೊನಾದಿಂದ ತತ್ತರಿಸಿರುವ ಪ್ರವಾಸೋದ್ಯಮಕ್ಕೆ ಮತ್ತಷ್ಟು ಹಿನ್ನಡೆಯಾಗಲಿದೆ.

ಬಾಧಿತ ಕ್ಷೇತ್ರಗಳು
-ಕಂಟೈನರ್‌ ಸಾಗಾಟ ಶೇ.50ರಷ್ಟು ಬಾಧಿತ
-ಕೈಗಾರಿಕಾ ಕ್ಷೇತ್ರ-ಕಚ್ಚಾವಸ್ತು ಲಭ್ಯತೆ ಸಮಸ್ಯೆ, ಉತ್ಪನ್ನಗಳ ಬೆಲೆ ಹೆಚ್ಚಳ
-ಮೀನುಗಾರಿಕಾ ಕ್ಷೇತ್ರ- ಒಳನಾಡು ಗಳಿಗೆ ಮೀನು ಸಾಗಾಟ ಸಮಸ್ಯೆ
-ತರಕಾರಿ, ಹೂವು, ಹಣ್ಣುಗಳ ಕೊರತೆ, ಬೆಲೆಯಲ್ಲಿ ಹೆಚ್ಚಳ ಸಾಧ್ಯತೆ
-ಪ್ರವಾಸೋದ್ಯಮ-ಪ್ರವಾಸಿಗರು ಇತರೆಡೆಗೆ ಸಾಗುವ ಸಾಧ್ಯತೆ.
-ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ.

ಇದನ್ನೂ ಓದಿ:
ಶಿರಾಡಿ ಘಾಟಿ ಸಂಚಾರ ನಿರ್ಬಂಧ ಎಷ್ಟು ಸೂಕ್ತ?-  https://bit.ly/354VPOy
ಸಂಚಾರ ಸ್ಥಗಿತ ಚಿಂತನೆ; ಪರ್ಯಾಯ ವ್ಯವಸ್ಥೆಗೆ ಆಗ್ರಹ –https://bit.ly/3qTX4Zp
ಎಲ್ಲೆಲ್ಲೋ ಸುತ್ತಿ ಮಂಗಳೂರಿಗೆ ಪ್ರಯಾಣಿಕರು ಹೈರಾಣ-https://bit.ly/3fUDfed

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next