Advertisement

Shiradi Ghat : “ರಸ್ತೆ ನಿರ್ಮಾಣಕ್ಕೆ ಗುಡ್ಡಗಳ 90 ಡಿಗ್ರಿಯಲ್ಲಿ ಸೀಳಿದ್ದರಿಂದ ಭೂ ಕುಸಿತ”

07:24 PM Aug 03, 2024 | Team Udayavani |

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿನಲ್ಲಿ ಪದೇ ಪದೇ  ಭೂ‌ ಕುಸಿತ ಹಿನ್ನೆಲೆ ಗುಡ್ಡ ಕುಸಿತ ಪ್ರದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಶಿರಾಡಿ ಘಾಟಿಯ ಹಲವೆಡೆ ಗುಡ್ಡ ಕುಸಿತ‌ ಪ್ರದೇಶಗಳ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದು ಬಳಿಕ ದೊಡ್ಡತಪ್ಲುವಿನಲ್ಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 75ರ ಮೇಲ್ಭಾಗದಲ್ಲಿ ಮಣ್ಣು ಸಡಿಲವಾಗಿದೆ. ಹೀಗಾಗಿ ಪದೇ ಪದೇ ಕುಸಿಯುತ್ತಿದೆ. ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳ 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದೇ ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಒಟ್ಟು 45 ಕಿ.ಮೀ. ನಲ್ಲಿ 35 ಕಿ.ಮೀ.  ಹೆದ್ದಾರಿ ಕಾಮಗಾರಿ ಮುಗಿದಿದೆ. ಆದರೆ ಇಲ್ಲಿಯವರೆಗೂ ಎಲ್ಲೂ ತಡೆಗೋಡೆಗಳ ನಿರ್ಮಿಸಿಲ್ಲ, ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ಸುರಕ್ಷತಾ ಮುಂಜಾಗ್ರತಾ ಕ್ರಮಗಳ ಕೈಗೊಂಡಿಲ್ಲ ಎಂದು ಹೇಳಿದರು.

ಹಣ ಉಳಿಸುವ ಉದ್ದೇಶದಿಂದ ಕಡಿಮೆ ಭೂಮಿ ಸ್ವಾಧೀನಪಡಿಸಿಕೊಂಡು, ಬಳಿಕ ಖರ್ಚು ಉಳಿಸಲು 90 ಡಿಗ್ರಿಯಲ್ಲಿ ಗುಡ್ಡಗಳನ್ನು ಕತ್ತರಿಸಲಾಗಿದೆ. ಇದು ಅವೈಜ್ಞಾನಿಕ ಕಾಮಗಾರಿ ಅಲ್ಲವೇ? ಗುಡ್ಡಗಳನ್ನು 30 ರಿಂದ 45 ಡಿಗ್ರಿಯಲ್ಲಿ ಕತ್ತರಿಸಿ ತಡೆಗೋಡೆ ನಿರ್ಮಿಸಿದ್ದರೆ ಮಣ್ಣು ಕುಸಿತವನ್ನು ತಡೆಯಬಹುದಿತ್ತು. ಕಾಮಗಾರಿ ಆರಂಭಿಸುವ ಮೊದಲು ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿದ್ದೀರಾ? ನಡೆಸಿದ್ರೆ ಅದಕ್ಕೆ ತಕ್ಕಂತೆ ಮುಂಜಾಗ್ರತಾ ಕ್ರಮ ವಹಿಸಬೇಕಿತ್ತು.

ಕೇಂದ್ರ ಸಚಿವ ಗಡ್ಕರಿಯವರಿಗೆ ಪತ್ರ ಬರೆಯುವೆವು: 

ಶಿರಾಡಿಘಾಟ್​ನಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಭೂಕುಸಿತವಾಗುತ್ತಿದೆ. ಸ್ಥಳೀಯರ ಅಭಿಪ್ರಾಯವನ್ನು ಕೇಂದ್ರ ಸಚಿವರಿಗೆ ತಿಳಿಸುತ್ತೇನೆ.  ಸಕಲೇಶಪುರ ಭಾಗದಲ್ಲಿ ವಾಡಿಕೆಗಿಂತ ಶೇ.65ರಷ್ಟು ಹೆಚ್ಚು ಮಳೆ ಆಗಿದೆ. ಶಿರಾಡಿಘಾಟ್​ನಲ್ಲಿ ಹೆದ್ದಾರಿ ಸರಿಪಡಿಸುವಂತೆ ಪತ್ರ ಬರೆಯುವೆ. ದೆಹಲಿಗೆ ಹೋದಾಗ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರಿಗೆ ಮನವರಿಕೆ ಮಾಡುವೆ ಎಂದು ಹೇಳಿದ್ದಾರೆ.

Advertisement

ಶಿರಾಡಿಘಾಟ್​ನಲ್ಲಿ ಮಣ್ಣು ಕುಸಿತದಿಂದ ವಾಹನ ಸಂಚಾರಕ್ಕೆ ಅಡ್ಡಿ ಆಗಿದೆ. 1 ಎಸ್​ಡಿಆರ್​ಎಫ್ ತಂಡ ಇಲ್ಲೇ ನಿಯೋಜನೆ ಮಾಡಿದ್ದೇವೆ. ಬೇಕಿದ್ದರೆ ಇನ್ನು ಹೆಚ್ಚಿನ ಭದ್ರತೆ ವಹಿಸುತ್ತೇವೆ. ಯಾಕೆ ಭೂ ಕುಸಿತ ಆಗುತ್ತಿದೆ ಎಂಬುದದರ ಬಗ್ಗೆ ಅಭಿಪ್ರಾಯ ಪಡೆದು ಕ್ರಮ ವಹಿಸುತ್ತೇವೆ ಎಂದು ಹೇಳಿದರು.

ವಯನಾಡು ಭೂಕುಸಿತ: 100 ಮನೆಗಳ ನಿರ್ಮಾಣ:
ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತದಿಂದ ತತ್ತರಿಸಿರುವ ಕೇರಳದ ಜೊತೆ ಕರ್ನಾಟಕ ರಾಜ್ಯ ಸರ್ಕಾರ ನಿಂತಿದೆ. ಕೇರಳದಲ್ಲಿ ಭೂಕುಸಿತದಿಂದ ಸೂರು ಕಳೆದುಕೊಂಡವರಿಗೆ ನೂರು ಮನೆ ನಿರ್ಮಿಸಿ ಕೊಡುತ್ತೇವೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಜೊತೆ ಮಾತನಾಡಿದ್ದೇನೆ. ಮನೆಗಳು ಕೊಚ್ಚಿ ಹೋಗಿವೆ, ಜೀವಗಳು ಹಾನಿಯಾಗಿವೆ. ಅವರಿಗೆ ಸಹಾಯ ಮಾಡಲು ಮನೆ ನಿರ್ಮಿಸಿ ಕೊಡುತ್ತೇವೆ. ಹತ್ತು ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗುವುದು  ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌.ರಾಜಣ್ಣ, ಶಾಸಕ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಸೇರಿ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next