ಶಿವಮೊಗ್ಗ: ಶಿಮುಲ್ (ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ) ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಚುನಾವಣೆ ಮತ್ತೂಮ್ಮೆ ಮುಂದಕ್ಕೆ ಹೋಗಿದ್ದು, ಮೇ 25ರವರೆಗೆ ಚುನಾವಣೆ ನಡೆಸದಂತೆ ಹೈಕೋರ್ಟ್ ನಿರ್ದೇಶಿಸಿದೆ.
ಇಬ್ಬರು ನಿರ್ದೇಶಕರನ್ನು ಅಮಾನತಿನಲ್ಲಿಟ್ಟು ಅಧ್ಯಕ್ಷರ ಚುನಾವಣೆ ನಡೆಸಿದ್ದರಿಂದ ಅದನ್ನು ಅನೂರ್ಜಿತಗೊಳಿಸಿ ಇಬ್ಬರು ನಿರ್ದೇಶಕರ ಪರ ಕೋರ್ಟ್ ತೀರ್ಪು ನೀಡಿ ಹೊಸದಾಗಿ ಅಧ್ಯಕ್ಷರ ಚುನಾವಣೆ ನಡೆಸುವಂತೆ ಆರು ವಾರಗಳ ಡೆಡ್‌ಲೈನ್ ನೀಡಿತ್ತು. ಏ.28ರಂದು ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಹಿಂದಿನ ಅಧ್ಯಕ್ಷ ಎನ್. ಎಚ್. ಶ್ರೀಪಾದ ರಾವ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಹಾಗೂ ನ್ಯಾಯಮೂರ್ತಿ ಎಂ.ಜಿ. ಉಮಾ ಅವರಿದ್ದ ರಜಾ ಕಾಲದ ಪೀಠ ಮಂಗಳವಾರ ವಿಚಾರಣೆ ನಡೆಸಿತು.
ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆಯೇ ನ್ಯಾಯಪೀಠ, ಬೇಸಿಗೆ ರಜೆಯ ನಂತರ ಸಾಮಾನ್ಯ ವಿಭಾಗೀಯ ಪೀಠವೇ ಪ್ರಕರಣವನ್ನು ಆಲಿಸಿ ನಿರ್ಧಾರ ಕೈಗೊಳ್ಳಲಿದೆ. ಆದ್ದರಿಂದ, ಅಲ್ಲಿಯವರೆಗೆ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಾರದು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮೇ 25ಕ್ಕೆ ಮುಂದೂಡಿತು.
ರಾಜ್ಯ ಸರ್ಕಾರ ಶಿಮುಲ್‌ನ ಇಬ್ಬರು ನಿರ್ದೇಶಕರನ್ನು ಅನರ್ಹಗೊಳಿಸಿದ್ದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಜ.1ರಂದು ನಡೆದಿದ್ದ ಅಧ್ಯಕ್ಷರ ಚುನಾವಣೆಯನ್ನು ಅಸಿಂಧು ಎಂದು ಏ. 28ರಂದು ತೀರ್ಪು ನೀಡಿದ್ದರಿಂದ ಎನ್.ಎಚ್. ಶ್ರೀಪಾದ ರಾವ್‌ಅಧ್ಯಕ್ಷ ಸ್ಥಾನ ತ್ಯಜಿಸಿದ್ದು, ಎಚ್.ಕೆ. ಬಸಪ್ಪ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
Related Articles
ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುವ ಮುನ್ನಾ ದಿನ ಡಿ. 31ರಂದು ಎಚ್.ಕೆ. ಬಸಪ್ಪ ಹಾಗೂ ಟಿ. ಶಿವಶಂಕರಪ್ಪ ಅವರನ್ನು ನಿರ್ದೇಶಕ ಸ್ಥಾನದಿಂದ ಸರ್ಕಾರ ಅನರ್ಹಗೊಳಿಸಿ ಆದೇಶ ಮಾಡಿತ್ತು. ಆ ಸಂದರ್ಭದಲ್ಲಿ ಎಚ್.ಕೆ. ಬಸಪ್ಪ ಶಿಮುಲ್ ಉಪಾಧ್ಯಕ್ಷರಾಗಿದ್ದು, ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನರ್ಹತೆ ಪ್ರಶ್ನಿಸಿ ಅವರಿಬ್ಬರೂ ಪ್ರತ್ಯೇಕವಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ನಿರ್ದೇಶಕರನ್ನು ಅನರ್ಹಗೊಳಿಸಿದ ಸರ್ಕಾರದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ಅಧ್ಯಕ್ಷರ ಆಯ್ಕೆಯನ್ನು ಅಸಿಂಧು ಎಂದು ಪರಿಗಣಿಸಿ ಆರು ವಾರಗಳೊಳಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ನಿರ್ದೇಶನ ನೀಡಿತ್ತು.
ಏನಿದು ಪ್ರಕರಣ?
ಚನ್ನಗಿರಿಯ ಕಂಚುಗಾರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿದ್ದ ಎಚ್. ಕೆ. ಬಸಪ್ಪ ಮತ್ತು ಹಿರೇಜಂಬೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿದ್ದ ಟಿ. ಶಿವಶಂಕರಪ್ಪ ಅವರನ್ನು ಶಿಮುಲ್ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸರ್ಕಾರ ನಾಮನಿರ್ದೇಶನ ಮಾಡಿತ್ತು. ನಂತರ ಆರ್ಥಿಕ ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಈ ಇಬ್ಬರ ನಾಮ ನಿರ್ದೇಶನವನ್ನು ಅನೂರ್ಜಿತಗೊಳಿಸಿ 2021ರ ಡಿ. 31ರಂದು ಆದೇಶಿಸಿದ್ದ ಸರ್ಕಾರ, ಅವರ ಸ್ಥಾನಕ್ಕೆ ಹರೀಶ್ ಮತ್ತು ವಿಕ್ರಂ ಪಾಟೀಲ್ ಅವರನ್ನು ನಾಮನಿರ್ದೇಶನ ಮಾಡಿತ್ತು. ನಾಮನಿರ್ದೇಶನ ಅನೂರ್ಜಿತಗೊಳಿಸಿದ್ದ ಸರ್ಕಾರದ ಕ್ರಮವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಶಿವಶಂಕರಪ್ಪ ಹಾಗೂ ಬಸಪ್ಪ, ನಾಮನಿರ್ದೇಶನ ಆದೇಶವನ್ನು ಅನೂರ್ಜಿತಗೊಳಿಸುವ ಮುನ್ನ ಜಾರಿ ಮಾಡಿದ್ದ ನೋಟಿಸ್‌ಗೆ ಉತ್ತರಿಸಲು ಸೂಕ್ತ ಕಾಲಾವಕಾಶ ನೀಡಿಲ್ಲ. ನಾಮನಿರ್ದೇಶನ ಅನೂರ್ಜಿತಗೊಳಿಸಿದ ಬೆನ್ನಲ್ಲೇ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ, ಎನ್. ಎಚ್. ಶ್ರೀಪಾದ ರಾವ್ ಅವರನ್ನು ಆಯ್ಕೆ ಮಾಡಲಾಗಿದ್ದು, ಇದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಆಕ್ಷೇಪಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಅರ್ಜಿದಾರರನ್ನು ಅನರ್ಹಗೊಳಿಸಿದ್ದ ಸರ್ಕಾರದ ಆದೇಶ ರದ್ದುಪಡಿಸಿತ್ತಲ್ಲದೆ ಮುಂದಿನ 6 ವಾರಗಳಲ್ಲಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.