Advertisement

ಮಹಿಳೆಯರನ್ನು ಗೌರವಿಸಲು ಕರೆ

03:32 PM Feb 09, 2020 | Naveen |

ಶಿವಮೊಗ್ಗ: ಮಹಿಳೆಯರಿಗೆ ಕುಟುಂಬದಲ್ಲಿ, ಅವಳು ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಾಗಲಿ ಗೌರವ, ಸಮಾನತೆ ಸಿಗುತ್ತದೋ ಅಲ್ಲಿ ದೇವರು ನೆಲೆಸಿರುತ್ತಾನೆ ಎಂಬ ಮಾತಿದೆ. ಅದರಂತೆ ಮಹಿಳೆಯರನ್ನು ಗೌರವಿಸುವ ಸಂಪ್ರದಾಯ ಗಟ್ಟಿಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಜಿ. ಅನುರಾಧಾ ಹೇಳಿದರು.

Advertisement

ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಸ್ತ್ರೀ ಸಂಭ್ರಮ -“ಮಹಿಳಾ ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಹಿಳೆಯರು ರಾಜಕೀಯ, ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಎಲ್ಲಾ ಕ್ಷೇತ್ರದಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಶೇ. 50ರಷ್ಟು ಮಹಿಳೆಯರು ಉನ್ನತ ಹುದ್ದೆಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಸಂತಸ ವ್ಯಕ್ತ ಪಡಿಸಿದರು.

ಪುರುಷ ಪ್ರಧಾನ ಸಮಾಜವಾಗಿರುವ ಹಿನ್ನಲೆಯಲ್ಲಿ ಇಂದಿಗೂ ಮಹಿಳೆಯರು ಅಬಲೆ ಎಂಬ ಭಾವನೆ ತೊಡೆದು ಹಾಕಬೇಕು. ಶಿಕ್ಷಣ ಪvಔೆದಾಗ ಮಾತ್ರ ಮನಸ್ಥಿತಿ ಬದಲಾಯಿಸಬಹುದು. ಈ ನಿಟ್ಟಿನಲ್ಲಿ ಮಹಿಳೆಯರು ಕೌಶಲ್ಯಾಭಿವೃದ್ಧಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಮಹಾಪೌರರಾದ ಸುವರ್ಣ ಶಂಕರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುರುಷರಿಗೆ ಸರಿಸಮಾನಾಗಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ದೊರೆಯುತ್ತಿದೆ. ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆಯರ ಸಾಧನೆ ಗಮನಾರ್ಹವಾಗಿದ್ದು, ಇಂದಿನ ದಿನಮಾನಗಳಲ್ಲಿ ಮಹಿಳೆ ಭೂಮಿ ಮೇಲೆ ಅಲ್ಲದೇ ಭಾರತೀಯ ಮಹಿಳಾ ಪೈಲಟ್‌ ಆಗಿ ಬಾಹ್ಯಾಕಾಶದಲ್ಲಿ ಹಾರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

Advertisement

ಮಹಾನಗರ ಪಾಲಿಕೆ ಉಪಮಹಾಪೌರರಾದ ಸುರೇಖಾ ಮುರಳೀಧರ್‌ ಮಾತನಾಡಿ, ಔದ್ಯೋಗಿಕ ಜವಾಬ್ದಾರಿಯೊಂದಿಗೆ ಸಂಸಾರವನ್ನು ಸುಂದರವನ್ನಾಗಿಸುವ ಹೊಣೆಗಾರಿಕೆ ಮಹಿಳೆಯರದ್ದಾಗಿದೆ. ಯಾವುದೇ ಸಂದರ್ಭ ಎದುರಾದರೂ ಶಾಂತಿಯುತವಾಗಿ ನಿಭಾಯಿಸುವ ಗುಣ ಮಹಿಳೆಯರಲ್ಲಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ವಿಷಾದನೀಯ.

ಮಕ್ಕಳ ಶಿಕ್ಷಣ ಕೊಡಿಸಿ, ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ಮಹಿಳೆಯರದ್ದೇ ಆಗಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲೂ ಗೌರವಿಸಬೇಕು ಎಂದು ಸಲಹೆ ನೀಡಿದರು. ಮಹಿಳೆಯರು, ಯುವತಿಯರು ಹಾಡಿ, ಕುಣಿದು, ರಂಗೋಲಿ ಹಾಕಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಕಂಸಾಳೆ, ವೀರಗಾಸೆ ನೃತ್ಯದ ಮೂಲಕ ಹಲವಾರು ಪ್ರತಿಭಾನಿತ್ವ ಮಹಿಳೆಯರು, ಯುವತಿಯರು ಕಾರ್ಯಕ್ರಮದಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿದರು. ನಂತರ ಡಾ| ಕೆ.ಎಸ್‌.ಪವಿತ್ರ ಅವರಿಂದ ಇಂದಿನ ಮಹಿಳೆಯ ಮಾನಸಿಕ ಸವಾಲುಗಳು ಮತ್ತು ಡಾ| ವೀಣಾ ಭಟ್‌ ಅವರಿಂದ ಮಹಿಳೆ ಮತ್ತು ಆರೋಗ್ಯ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಿತು.

ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌. ಉಮೇಶ್‌ ಹಾಗೂ ಇಲಾಖೆ ಸಿಬ್ಬಂದಿಗಳು ಮತ್ತು ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಗಣ್ಯರು, ವಿದ್ಯಾರ್ಥಿನಿಯರು, ಮಹಿಳೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next