ಶಿವಮೊಗ್ಗ: ನಿಯಮಿತ ವ್ಯಾಯಾಮ, ನಡಿಗೆ ಮತ್ತು ಸಮತೋಲಿತ ಆಹಾರ ಸೇವನೆ ಕ್ರಮದಿಂದ ಮಧುಮೇಹ ಮುಂತಾದ ಕಾಯಿಲೆಗಳನ್ನು ನಿಯಂತ್ರಣ ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಚಟುವಟಿಕೆಯುಕ್ತ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ದೇಹದ ತೂಕವನ್ನು ನಿಯಂತ್ರಿಸಿಕೊಳ್ಳುವುದರ ದುಶ್ಚಟಗಳಿಂದ ದೂರವಿರುವುದು ಹಾಗೂ ನಿಯಮಿತವಾಗಿ ವೈದ್ಯರ ಸಲಹೆ, ಚಿಕಿತ್ಸೆ ಔಷಧೋಪಚಾರ ಪಡೆಯುವುದೇ ಪರಿಹಾರ ಕ್ರಮವಾಗಿದೆ ಎಂದರು.
ಅತಿಯಾದ ತೂಕ, ಚಟುವಟಿಕೆ ರಹಿತ ಜೀವನಶೈಲಿ, ಹೆಚ್ಚಿನ ಕೊಬ್ಬಿನ ಅಂಶ ಹೊಂದಿರುವುದು, ಅತಿಯಾದ ಧೂಮಪಾನ ಮತ್ತು ಮದ್ಯಪಾನ ಸೇವನೆ, ಅನುವಂಶೀಯತೆ, ಅನಾರೋಗ್ಯಕರ ಆಹಾರ ಸೇವನೆ, ಅತಿಯಾದ ಉಪ್ಪು ಬಳಕೆ ಮತ್ತು ಎಣ್ಣೆಯಿಂದ ಮಾಡಿದ ಖಾದ್ಯಗಳ ಸೇವನೆ ಮಧುಮೇಹಕ್ಕೆ ಕಾರಣಗಳಾಗಿವೆ ಎಂದ ಅವರು ಅವುಗಳಿಂದ ದೂರವಿರುವುದು ಕ್ಷೇಮ ಎಂದರು.
ದೇಶದಲ್ಲಿ ಮಧುಮೇಹ ಕಾಯಿಲೆಯಿಂದ 62ಮಿಲಿಯನ್ ಜನರು ಬಳಲುತ್ತಿದ್ದಾರೆ. ಪ್ರತಿ ವರ್ಷ ಒಂದು ಮಿಲಿಯನ್‌ಗಿಂತ ಹೆಚ್ಚಿನ ಜನ ಈ ಕಾಯಿಲೆಯಿಂದ ಮರಣ ಹೊಂದುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ 2030ರ ವೇಳೆಗೆ 98 ಮಿಲಿಯನ್ ಭಾರತೀಯರು ಈ ಕಾಯಿಲೆಯಿಂದ ಬಳಲಬಹುದು ಎಂದು ಅಂದಾಜಿಸಲಾಗಿದೆ. ಸದ್ಯದಲ್ಲಿ ಭಾರತ ದೇಶವು ವಿಶ್ವದಲ್ಲೇ ಸಕ್ಕರೆ ಕಾಯಿಲೆಯ ರಾಜಧಾನಿಯಾಗಲಿದೆ ಎಂದ ಅವರು, ದೇಶದ ಗ್ರಾಮೀಣ ಭಾಗದ ಜನರಲ್ಲಿ 5-6ರಷ್ಟು ಹಾಗೂ ನಗರಪ್ರದೇಶದಲ್ಲಿ 10-12ರಷ್ಟು ಜನ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಮಧುಮೇಹ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗುತ್ತಿದೆ. ಬಾಧಿತರು ತಪಾಸಣೆ ಮಾಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದ ಅವರು, ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿಲ್ಲದ ಸೇವೆಗಳಿಗೆ ಎ.ಬಿ.ಆರ್.ಕೆ. ಕಾರ್ಯಕ್ರಮದಡಿ ನೋಂದಾಯಿತ ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಅಲ್ಲದೆ ಆರೋಗ್ಯ ಇಲಾಖೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮಧುಮೇಹ ಕಾಯಿಲೆ ಕುರಿತು ಜನಜಾಗೃತಿ, ಆರೋಗ್ಯ ಶಿಕ್ಷಣ, ಅರಿವು ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ| ನಾಗರಾಜ್ ನಾಯ್ಕ, ಜಿಲ್ಲಾ ಎನ್.ಸಿ.ಡಿ. ಘಟಕದ ಕಾರ್ಯಕ್ರಮಾಧಿ ಕಾರಿ ಡಾ| ಶಂಕರಪ್ಪ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಪರಮೇಶ್ವರ್ ಮತ್ತಿತರರು ಇದ್ದರು.