ಶಿವಮೊಗ್ಗ: ಇದೇ ತಿಂಗಳ 25ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭದಲ್ಲಿ ಪರೀಕ್ಷೆ ಬರೆಯಲು ಯಾವುದೇ ಒಬ್ಬ ವಿದ್ಯಾರ್ಥಿಗೆ ತೊಂದರೆಯಾಗದಂತೆ ವೈಯಕ್ತಿಕ ಕಾಳಜಿಯನ್ನು ಪ್ರತಿಯೊಬ್ಬರೂ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದರು. ಶನಿವಾರ ಎಸಿ ಕಚೇರಿ ಸಭಾಂಗಣದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವ ಸಿದ್ಧತೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಬಸ್, ಹಾಸ್ಟೆಲ್ ಸೌಲಭ್ಯ: ಬಸ್ ವ್ಯವಸ್ಥೆ ಹಾಗೂ ಪರೀಕ್ಷೆ ಸಂದರ್ಭದಲ್ಲಿ ಹಾಸ್ಟೆಲ್ ವ್ಯವಸ್ಥೆ ಬಯಸಿರುವ ವಿದ್ಯಾರ್ಥಿಗಳ ವಿವರಗಳನ್ನು ಈಗಾಗಲೇ ಪಡೆಯಲಾಗಿದೆ. ಪ್ರತಿ ತಾಲೂಕಿನಲ್ಲಿ ಬಸ್ ರೂಟ್ ಅಂತಿಮಗೊಳಿಸಬೇಕು. ಪ್ರತಿ ಬಸ್‌ನಲ್ಲಿ ನೋಡೆಲ್ ಅಧಿಕಾರಿ ಹಾಜರಿರಬೇಕು. ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿರುವ ಈ ಬಸ್‌ಗಳನ್ನು ಹೊರತುಪಡಿಸಿ ಪ್ರತಿ ಕ್ಷೇತ್ರ ಶಿಕ್ಷಣಾಧಿಕಾರಿ ಅಧೀನದಲ್ಲಿ ಕನಿಷ್ಟ 5 ವಾಹನಗಳು ಚಾಲಕರೊಂದಿಗೆ ಸನ್ನದ್ಧವಾಗಿರಬೇಕು. ಬಸ್ ತಪ್ಪಿ ಹೋದರೆ ಅಥವಾ ಇನ್ನಿತರ ತುರ್ತು ಸಂದರ್ಭಗಳಲ್ಲಿ ವಿದ್ಯಾರ್ಥಿಗಳನ್ನು ಮನೆಯಿಂದ ಕರೆತರಲು ಈ ವಾಹನ ಬಳಸಬಹುದಾಗಿದೆ. ಇದನ್ನು ಹೊರತುಪಡಿಸಿ ಪಿಡಿಒಗಳು ಸಹ ತಮ್ಮ ಹಂತದಲ್ಲಿ ವಾಹನಗಳನ್ನು ಸಜ್ಜುಗೊಳಿಸಿರಬೇಕು. ಯಾವುದೇ ಕಾರಣಕ್ಕೂ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಪರೀಕ್ಷೆ ಬರೆಯುವುದರಿಂದ ವಂಚಿತರಾಗಬಾರದು ಎಂದು ಹೇಳಿದರು. ಯಾವುದೇ ವಿದ್ಯಾರ್ಥಿ ಪರೀಕ್ಷೆ ದಿನಗಳಲ್ಲಿ ಹಾಸ್ಟೆಲ್‌ನಲ್ಲಿ ಇರಬಯಸಿದರೆ ಅವಕಾಶ ನೀಡಲಾಗುವುದು. ವಿದ್ಯಾರ್ಥಿಗಳೊಂದಿಗೆ ಪಾಲಕರಿಗೂ ಹಾಸ್ಟೆಲ್‌ನಲ್ಲಿ ಉಚಿತ ಅವಕಾಶ ಕಲ್ಪಿಸಲಾಗುವುದು ಎಂದರು.
ಮಾರ್ಗಸೂಚಿ ಪಾಲನೆ: ಪರೀಕ್ಷಾ ಕೇಂದ್ರಗಳಲ್ಲಿ ಈಗಾಗಲೇ ಇಲಾಖೆ ಹೊರಡಿಸಿರುವ ಕೋವಿಡ್-19 ಮಾರ್ಗಸೂಚಿಯನ್ನು ಪಾಲಿಸಬೇಕು. ಪ್ರತಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ತಂಡ ಇರುವುದು. ಪ್ರತಿಯೊಬ್ಬರ ಥರ್ಮಲ್ ಸ್ಕ್ಯಾನ್ ಮಾಡಲಾಗುವುದು. ಈ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಯ ದೇಹದ ತಾಪಮಾನ ಹೆಚ್ಚಿರುವುದು ಕಂಡು ಬಂದರೆ, ಅದನ್ನು ಬಹಿರಂಗಪಡಿಸದೇ, ಗೊಂದಲಕ್ಕೆ ಅವಕಾಶ ನೀಡದೆ, ಅಂತಹ ವಿದ್ಯಾರ್ಥಿಗಳಿಗೆ ಮೀಸಲಾಗಿರಿಸಿರುವ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದರು.
ತಿಂಡಿ ವ್ಯವಸ್ಥೆ: ವಿದ್ಯಾರ್ಥಿಗಳು ಮನೆಯಿಂದಲೇ ಬೆಳಗ್ಗಿನ ತಿಂಡಿ ತಿಂದು ಬರಬೇಕು. ನೀರನ್ನು ಸಹ ಮನೆಯಿಂದಲೇ ತರಬೇಕು. ಒಂದು ವೇಳೆ ನೀರು ತರಲು ಮರೆತು ಬಂದಿರುವ ವಿದ್ಯಾರ್ಥಿಗಳಿಗೆ ಸೀಲ್ಡ್ ವಾಟರ್ ಬಾಟಲ್ ನೀಡಬೇಕು. ಅಗತ್ಯ ಇರುವ ವಿದ್ಯಾರ್ಥಿಗಳಿಗೆ ಬಿಸ್ಕಿಟ್ ಪ್ಯಾಕೇಟ್, ಚಾಕಲೇಟ್ ನೀಡಲು ವ್ಯವಸ್ಥೆ ಮಾಡಬೇಕು ಎಂದರು.
ಮೀಸಲು ಪರೀಕ್ಷಾ ಕೇಂದ್ರ: ಪ್ರತಿ ಪರೀಕ್ಷಾ ಕೇಂದ್ರದಲ್ಲಿ 2 ಕೊಠಡಿಗಳನ್ನು ಮೀಸಲಾಗಿರಿಸಬೇಕು. ಪ್ರತಿ ತಾಲೂಕಿನಲ್ಲಿ ಪಿಯು ಕಾಲೇಜು ಹಾಗೂ ಪದವಿ ಕಾಲೇಜುಗಳನ್ನು ಮೀಸಲು ಪರೀಕ್ಷಾ ಕೇಂದ್ರಗಳಾಗಿ ಗುರುತಿಸಿ ಸಜ್ಜುಗೊಳಿಸಬೇಕು ಎಂದರು.ವಿದ್ಯಾರ್ಥಿಗಳ ವಿವರ: ಜೂ. 25ರಿಂದ ಜು. 3ರವರೆಗೆ ನಡೆಯಲಿರುವ ಪರೀಕ್ಷೆಯನ್ನು ಜಿಲ್ಲೆಯಲ್ಲಿ 24243 ವಿದ್ಯಾರ್ಥಿಗಳು ಬರೆಯಲಿದ್ದು, ಇವರಲ್ಲಿ 12287 ಬಾಲಕರು ಹಾಗೂ 11956 ಬಾಲಕಿಯರು ಇದ್ದಾರೆ. ಒಟ್ಟು 84 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, 45 ಸರ್ಕಾರಿ, 24 ಅನುದಾನಿತ, 15ಅನುದಾನ ರಹಿತ ಹಾಗೂ 2 ಖಾಸಗಿ ಪರೀಕ್ಷಾ ಕೇಂದ್ರಗಳಿವೆ. ಇದರಲ್ಲಿ ಭದ್ರಾವತಿ 15, ಹೊಸನಗರ 5, ಸಾಗರ 10, ಶಿಕಾರಿಪುರ 11, ಶಿವಮೊಗ್ಗ 26, ಸೊರಬ 10 ಮತ್ತು ತೀರ್ಥಹಳ್ಳಿಯಲ್ಲಿ 7 ಪರೀಕ್ಷಾ ಕೇಂದ್ರಗಳಿವೆ ಎಂದು ಎನ್.ಎಂ. ರಮೇಶ ಅವರು ಮಾಹಿತಿ ನೀಡಿದರು. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಎಂ.ಎಲ್. ವೈಶಾಲಿ, ಪೊಲೀಸ್ ವರಿಷ್ಠಾದಿಕಾರಿ ಕೆ.ಎಂ. ಶಾಂತರಾಜು, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಶ ಸುರಗಿಹಳ್ಳಿ ಮತ್ತಿತರ ಅಧಿಕಾರಿಗಳು ಇದ್ದರು