ಶಿವಮೊಗ್ಗ: ಜೂನ್ 25ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಎದುರಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ್ ತಿಳಿಸಿದರು.
ಮಂಗಳವಾರ ಜಿಪಂ ಸಭಾಂಗಣದಲ್ಲಿ ಶಿವಮೊಗ್ಗ, ಚಿಕಮಗಳೂರು ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆಗಳ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಮಕ್ಕಳ ಸುರಕ್ಷತೆ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ರಾಜ್ಯ ಹೈಕೋರ್ಟ್‌ಗೆ ಈ ಕುರಿತು ಸರ್ಕಾರ ತ್ನನ ಹೇಳಿಕೆ ಸಲ್ಲಿಸಿದ್ದು, ಅದರ ಪ್ರಕಾರ ಪರೀಕ್ಷೆಯನ್ನು ಆಯೋಜಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷಾ ಹಾಲ್ ನಲ್ಲಿ 18ಕ್ಕಿಂತ ಹೆಚ್ಚು ಮಕ್ಕಳು ಇರಬಾರದು. ಮಾರ್ಗಸೂಚಿ ಪ್ರಕಾರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರತಿ ಮಕ್ಕಳು ಹಾಲ್ ಟಿಕೆಟ್ ಪಡೆಯಲು ಬರುವ ಸಂದರ್ಭದಲ್ಲಿಯೇ ಮಾಸ್ಕ್ ಒದಗಿಸಬೇಕು. ಪರೀಕ್ಷೆ ಮುಗಿದ ಬಳಿಕ ಮಕ್ಕಳು ಗುಂಪಾಗಿ ಸೇರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಪ್ರತಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯನ್ನು ಪ್ರತಿ ದಿನ ಮಾಡಲಾಗುವುದು. ಅನಾರೋಗ್ಯ ಲಕ್ಷಣ ಇರುವ ಮಕ್ಕಳನ್ನು ಮೊದಲೇ ನಿಗದಿಪಡಿಸಿದ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಎಲ್ಲಾ ಶಾಲೆಗಳಿಗೆ ಈಗಾಗಲೇ ಸ್ಯಾನಿಟೈಸರ್ ಒದಗಿಸಲಾಗಿದೆ ಎಂದರು. ಪರೀಕ್ಷೆ ಆರಂಭವಾಗುವ ಎರಡು ದಿನಗಳ ಮೊದಲು ಇಡೀ ಪರೀಕ್ಷಾ ಕೇಂದ್ರದ ಸ್ಯಾನಿಟೈಸೇಶನ್ ಮಾಡಬೇಕು. ಪರೀಕ್ಷೆ ಮುಗಿದ ಬಳಿಕ ಪ್ರತಿದಿನ ಇದನ್ನು ಪುನರಾವರ್ತಿಸಬೇಕು. ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಸಹ ಎಲ್ಲಾ ಮುನ್ನೆಚ್ಚರಿಕೆ ವಹಿಸಬೇಕು. ಅವರು ಹೆಚ್ಚುವರಿಯಾಗಿ ಕೈಗವಸು ಧರಿಸಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಕುಡಿಯುವ ನೀರು ತೆಗೆದುಕೊಂಡು ಬರುವಂತೆ ಸೂಚನೆ ನೀಡಬೇಕು. ಮಧ್ಯಾಹ್ನ ಬಿಸಿಯೂಟ ಒದಗಿಸುವ ಕುರಿತು ಸ್ಥಳೀಯವಾಗಿಯೇ ನಿರ್ಧಾರ ಕೈಗೊಳ್ಳಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಶಾಲಾ ಕೊಠಡಿಯಲ್ಲಿ ಬಿಸಿಯೂಟ ನೀಡಬಾರದು. ಒಟ್ಟು ಯಾವುದೇ ಕಾರಣಕ್ಕೂ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪುನರ್ ಮನನ ತರಗತಿ: ಚಂದನ ವಾಹಿನಿ ಮೂಲಕ ಈಗಾಗಲೇ ವಿದ್ಯಾರ್ಥಿಗಳಿಗೆ ಪುನರ್ ಮನನ ತರಗತಿಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಜೂನ್ 12ರಿಂದ 17ರವರೆಗೆ ವಿವಿಧ ವಿಷಯಗಳಿಗೆ ಸಂಬಂ ಸಿದಂತೆ ಹಳೆ ಪ್ರಶ್ನೆ ಪತ್ರಿಕೆ ಆಧಾರಿತ ಪುನರ್ ಮನನ ತರಗತಿಗಳು ನಡೆಯಲಿವೆ. ಕೋವಿಡ್-19 ಹಿನ್ನೆಲೆಯಲ್ಲಿ ಶೈಕ್ಷಣಿಕ ವ್ಯವಸ್ಥೆ ಬದಲಾಗಿದ್ದು, ಒಂದನೇ ತರಗತಿಯಿಂದ 10ನೇ ತರಗತಿವರೆಗೆ ಟಿವಿ ಮಾಧ್ಯಮದ ಮೂಲಕ ಕಲಿಕೆ ಕ್ರಮ ಆರಂಭಿಸುವ ಕುರಿತು ಚಿಂತಿಸಲಾಗುತ್ತಿದೆ ಎಂದು ಹೇಳಿದರು.
ಕಂಟೇನ್ಮೆಂಟ್ ವಲಯ: ಕಂಟೇನ್ಮೆಂಟ್ ವಲಯದಲ್ಲಿ ಯಾವುದೇ ಪರೀಕ್ಷಾ ಕೇಂದ್ರ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಒಂದು ವೇಳೆ ಪರೀಕ್ಷೆ ಆರಂಭವಾದ ಬಳಿಕ ಕಂಟೇನ್ಮೆಂಟ್ ವಲಯ ಘೋಷಣೆಯಾದರೆ, ಅಂತಹ ವಿದ್ಯಾರ್ಥಿಗಳಿಗೆ ಜುಲೈ ತಿಂಗಳಲ್ಲಿ ನಡೆಯುವ ಪೂರಕ ಪರೀಕ್ಷೆ ಸಂದರ್ಭದಲ್ಲಿ ಅವಕಾಶ ನೀಡಲಾಗುವುದು. ಅವರನ್ನು ಹೊಸ ವಿದ್ಯಾರ್ಥಿಗಳೆಂದೇ ಪರಿಗಣಿಸಲಾಗುವುದು ಎಂದರು.
ಮೂರು ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಮ್ಮ ಜಿಲ್ಲೆಗಳಲ್ಲಿ ಕೈಗೊಂಡಿರುವ ಪೂರ್ವಸಿದ್ಧತೆಗಳ ಮಾಹಿತಿ ನೀಡಿದರು. ಶಾಸಕ ಅರಗ ಜ್ಞಾನೇಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸಿಇಒ ಎಂ.ಎಲ್.ವೈಶಾಲಿ ಮತ್ತಿತರರು ಉಪಸ್ಥಿತರಿದ್ದರು.