Advertisement

ಸಫಾಯಿ ಕರ್ಮಚಾರಿಗಳ ಜೀವನ ಮಟ್ಟ ಸುಧಾರಿಸಿ

06:25 PM Jan 10, 2020 | Naveen |

ಶಿವಮೊಗ್ಗ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಪಾಯಿ ಕರ್ಮಚಾರಿಗಳ ಜೀವನ ಗುಣಮಟ್ಟ ಸುಧಾರಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಜಗದೀಶ್‌ ಹಿರೇಮನಿ ಅವರು ಹೇಳಿದರು.

Advertisement

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಥಳೀಯ ಸಂಸ್ಥೆಗಳ ಸಫಾಯಿ ಕರ್ಮಚಾರಿಗಳ ಸ್ಥಿತಿಗತಿಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಫಾಯಿ ಕರ್ಮಚಾರಿಗಳ ಕನಿಷ್ಠ ಜೀವನ ನಿರ್ವಹಣೆಯ ದುರವಸ್ಥೆಗೆ ಅಂತ್ಯ ಹಾಡಬೇಕಾದ ಅಗತ್ಯವಿದೆ ಎಂದ ಅವರು, ಈಗಾಗಲೇ ಜಿಲ್ಲೆಯಲ್ಲಿ ಗುರುತಿಸಲಾಗಿರುವ 24 ಮ್ಯಾನ್ಯುವೆಲ್‌ ಸ್ಕಾವೆಂಜರ್ಗಳ ಜೀವನ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ 40,000/-ರೂ. ಗಳ ಆರ್ಥಿಕ ನೆರವು ನೀಡಲಾಗಿದೆ. ಅಲ್ಲದೆ ಅವರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಿಕೊಡಲು ಸೂಚಿಸಲಾಗಿದೆ. ಸಫಾಯಿ ಕರ್ಮಚಾರಿಗಳು ಮರಣ ಹೊಂದಿದಲ್ಲಿ ಅವರ ಕುಟುಂಬದ ಅವಲಂಬಿತರಿಗೆ ಸರ್ಕಾರದ ಇತರ ವಸತಿ ಯೋಜನೆಯಡಿ ವಸತಿ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

70-80ರ ದಶಕದಲ್ಲಿ ಪೌರ ಕಾರ್ಮಿಕರು ವಾಸವಾಗಿದ್ದವರಿಗೆ ಅವರಿರುವಲ್ಲಿಯೇ ಮನೆಗಳಿಗೆ ಹಕ್ಕುಪತ್ರ ನೀಡಬೇಕು. ಮನೆಗಳು ಶಿಥಿಲವಾಗಿದ್ದಲ್ಲಿ ಮನೆ ನಿರ್ಮಿಸಿ ಕೊಡಬೇಕು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ಸಮಸ್ಯೆಗೆ ಮುಂದಿನ 2-3 ತಿಂಗಳಲ್ಲಿ ಹಕ್ಕುಪತ್ರ ನೀಡಿ. ಅಂತಹವರಿಗೆ ಮನೆ ನಿರ್ಮಿಸಿಕೊಳ್ಳಲು ಮ್ಯಾನ್ಯುವೆಲ್‌ ಸ್ಕಾವೆಂಜರ್ ಯೋಜನೆಯಡಿ ವಿಶೇಷ ಅನುದಾನ ಕೊಡಿಸಲು ಯತ್ನಿಸುವುದಾಗಿ ಅವರು ತಿಳಿಸಿದರು.

ಈಗಾಗಲೇ ಗುರುತಿಸಲಾಗಿರುವ ಸಫಾಯಿ ಕರ್ಮಚಾರಿಗಳ ವಯಸ್ಸು ಮೀರಿದ್ದರೆ ಅವರ ಕುಟುಂಬದ ಅವಲಂಬಿತರಿಗೆ ಉದ್ಯೋಗಾವಕಾಶ, ಅಥವಾ ಸಾಲ ಸೌಲಭ್ಯ ಕೊಡಿಸಿ ಅವರ ಜೀವನೋಪಾಯಕ್ಕೆ ನೆರವಾಗಬೇಕು. ಖಾಯಂ ಉದ್ಯೋಗವಾಗದಿದ್ದರೂ ಪರ್ಯಾಯ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕೆಂದರು.

Advertisement

ಸೇವಾವಧಿಯಲ್ಲಿ ಜೀವಿತದ ಬದುಕಿಗೆ ಅಂತ್ಯ ಹಾಡುವ ಸಫಾಯಿ ಕರ್ಮಚಾರಿಗಳಿಗೆ ಪಾಲಿಕೆ ವತಿಯಿಂದ ಆರ್ಥಿಕ ನೆರವು ನೀಡಿ
ಮಾನವೀಯತೆ ಮೆರೆಯುವಂತೆ ಸೂಚಿಸಿದ ಅವರು, ಕಾರ್ಯನಿರತರಿಗೆ ಆರೋಗ್ಯ, ಶಿಕ್ಷಣದ ಕುರಿತು ತರಬೇತಿ ನೀಡುವಂತೆ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲು, ಅಗತ್ಯವಿರುವವರಿಗೆ ಹೆಚ್ಚಿನ ಚಿಕಿತ್ಸೆಗೆ ನೆರವು
ನೀಡುವಂತೆ ಸೂಚಿಸಿದರು. ಸಫಾಯಿ ಕರ್ಮಚಾರಿಗಳ ಬಳಕೆ ನಿಯಂತ್ರಿಸುವಲ್ಲಿ ಅವರಿಗೆ ತರಬೇತಿ ನೀಡಬೇಕಲ್ಲದೆ ಸಾರ್ವಜನಿಕರಿಗೂ ಅವರ ಸೇವೆಯನ್ನು ಪಡೆಯದಂತೆ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಾಲಾ-
ಕಾಲೇಜು ಮಕ್ಕಳ ಮೂಲಕ ಮನೆಮನೆಗೆ ಕರಪತ್ರ ವಿತರಿಸುವ ಕೆಲಸ ಜಿಲ್ಲೆಯಿಂದಲೇ ಆರಂಭಗೊಳ್ಳಬೇಕೆಂದರು.

ನಗರದ ಕೆ.ಎಸ್‌.ಆರ್‌ .ಟಿ.ಸಿ.ಬಸ್‌ ನಿಲ್ದಾಣದಲ್ಲಿ ಶೌಚವನ್ನು ನೇರವಾಗಿ ಚರಂಡಿಗೆ ಬಿಡಲಾಗುತ್ತಿದೆ. ಈ ಬಗ್ಗೆ ಈವರೆಗೂ ಗಮನಹರಿಸದಿರುವ ನಿಲ್ದಾಣಾಧಿಕಾರಿಗಳಿಗೆ ನೊಟೀಸ್‌ ಜಾರಿ ಮಾಡುವಂತೆ ಹಾಗೂ ಸುರಕ್ಷತೆ ಹಿನ್ನೆಲೆಯಲ್ಲಿ ಶೌಚಗುಂಡಿಯನ್ನು ಕಟ್ಟಿಸುವಂತೆ ಆದೇಶಿಸಲು ಸೂಚಿಸಿದ ಅವರು, ಭದ್ರಾವತಿಯ ಎಂ.ಪಿ.ಎಂ. ಮತ್ತು ವಿ.ಐ.ಎಸ್‌.ಎಲ್‌.ಗಳಲ್ಲಿ ಶೌಚಗುಂಡಿಗಳ ಸ್ವಚ್ಛತೆಗಾಗಿ ಇಂದಿಗೂ ಮಾನವ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ದೂರುಗಳಿವೆ. ಈ ಬಗ್ಗೆ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಫಾಯಿ ಕರ್ಮಚಾರಿಗಳಿಗೆ ಅತ್ಯಾಧುನಿಕ ಮಾದರಿಯ ಉತ್ತಮ ಗುಣಮಟ್ಟದ ಕೈಗವಸು, ಮುಖವಾಡ ಮತ್ತು ಬೂಟುಗಳು ಸೇರಿದಂತೆ ಸುರಕ್ಷತಾ ಪರಿಕರಗಳನ್ನು ಕೊಡಿಸುವಂತೆ ಸೂಚಿಸಿದ ಅವರು, ಸಿಂಗಾಪುರ ಅಧ್ಯಯನ ಪ್ರವಾಸದಿಂದ ಹಿಂದುರುಗಿದ ಕರ್ಮಚಾರಿಗಳ ಸಲಹೆಯನ್ನು ಪಡೆದು, ಅನುಷ್ಠಾನಕ್ಕೆ ತರುವಂತೆ ಸೂಚಿಸಿದರು.

ಇದುವರೆಗೆ ಕರ್ಮಚಾರಿಗಳ ಖಾತೆಗೆ ಇ.ಪಿ.ಎಫ್‌ ಮತ್ತು ಇ.ಎಸ್‌.ಐ. ಹಣ ಜಮಾ ಮಾಡದಿರುವ ಮಾನವ ಸಂಪನ್ಮೂಲ ಸಂಸ್ಥೆಗಳ ಮುಖ್ಯಸ್ಥರಿಗೆ ನೊಟೀಸ್‌ ನೀಡಿ ಹಣ ಜಮಾ ಮಾಡಲು ಸೂಚಿಸಬೇಕು. ಪರಿಶಿಷ್ಟ ಜಾತಿಯವರಲ್ಲದ ಪೌರ ಸೇವಾ ಕಾರ್ಮಿಕರನ್ನು ಕಚೇರಿ ಕೆಲಸಗಳಿಗಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಗಂಭೀರ ಆರೋಪವಿದೆ.

ಜೇಷ್ಠತೆಯ ಆಧಾರದ ಮೇಲೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವವರನ್ನು ಕಚೇರಿ ಕೆಲಸಗಳಿಗೆ ನೇಮಿಸಿಕೊಳ್ಳಬೇಕು. ಜಾತೀಯತೆ ಮಾಡುವ ಅಧಿಕಾರಿಗಳ ಮೇಲೆ ಅಟ್ರಾಸಿಟಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಲ್‌. ವೈಶಾಲಿ, ಅಪರ ಜಿಲ್ಲಾಧಿಕಾರಿ
ಜಿ.ಅನುರಾಧ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next