Advertisement

ಕೊರೊನಾ; ಜಾಗ್ರತೆಗೆ ಸೂಚನೆ

01:42 PM Mar 05, 2020 | Naveen |

ಶಿವಮೊಗ್ಗ: ವಿಶ್ವದ ಹಲವೆಡೆ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ ಶಿವಮೊಗ್ಗ ಜಿಲ್ಲೆಯಲ್ಲಿ ಹರಡದಂತೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಅವರು ತಿಳಿಸಿದರು.

Advertisement

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೊನಾ ವೈರಸ್‌ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇದುವರೆಗೆ ಕೊರೊನಾ ವೈರಸ್‌ ನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಶಂಕಿತ ವೈರಸ್‌ ಪೀಡಿತರ ಮೇಲೆ ನಿಗಾ ಇರಿಸಲಾಗಿದೆ. ಕೊರೊನಾ ವೈರಸ್‌ ಪೀಡಿತ ದೇಶಗಳಿಗೆ ಪ್ರವಾಸ ಕೈಗೊಂಡು ಜಿಲ್ಲೆಗೆ ಆಗಮಿಸಿರುವವರನ್ನು ಸೂಕ್ಷ್ಮ ನಿಗಾದಲ್ಲಿರಿಸಲಾಗಿದೆ. ಅವರಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿರದಿದ್ದರೂ, ನಾಲ್ಕು ವಾರಗಳ ಕಾಲ ನಿಗಾದಲ್ಲಿರಿಸಲಾಗುವುದು. ಕೊರೊನಾ ವೈರಸ್‌ ಪತ್ತೆಯಾಗಿರುವ ದೇಶಗಳಿಗೆ ಸದ್ಯಕ್ಕೆ ಪ್ರವಾಸ ಕೈಗೊಳ್ಳದಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ವಿದೇಶದಿಂದ ಆಗಮಿಸಿದ ವ್ಯಕ್ತಿಗಳಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಇತ್ಯಾದಿ ರೋಗ ಲಕ್ಷಣಗಳು ಕಂಡು ಬಂದರೆ ಸ್ವಯಂ ಚಿಕಿತ್ಸೆ ನಡೆಸದೆ ಆಸ್ಪತ್ರೆಗೆ ಬಂದು ದಾಖಲಾಗಬೇಕು ಎಂದು ಅವರು ಹೇಳಿದರು.

ಮುಂಜಾಗರೂಕತಾ ಕ್ರಮ: ಕೊರೊನಾ ವೈರಸ್‌ ಪೀಡಿತರ ತಪಾಸಣೆಗಾಗಿ ಜಿಲ್ಲಾಸ್ಪತ್ರೆಯಲ್ಲಿ 6 ಹಾಸಿಗೆಯ ಪ್ರತ್ಯೇಕ
ಘಟಕವನ್ನು ಆರಂಭಿಸಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಔಷಧಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಆರೋಗ್ಯ
ಸಚಿವಾಲಯದ ಮಾರ್ಗಸೂಚಿ ಪ್ರಕಾರ ಕೊರೊನಾ ವೈರಸ್‌ ತಡೆಗೆ ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ದಿನ ಸಂಜೆ 6 ಗಂಟೆಯ ಒಳಗಾಗಿ ಜಿಲ್ಲಾ
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೊರೊನಾ ವೈರಸ್‌ ಕುರಿತಾಗಿ ವರದಿ ಸಲ್ಲಿಸಬೇಕು. ಸಾರ್ವಜನಿಕರಿಗೆ ಮಾಹಿತಿ ಒದಗಿಸಲು 24ಹಿ7 ಕಂಟ್ರೋಲ್‌ ರೂಂ ಆರಂಭಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಅಂಗನವಾಡಿಗಳಲ್ಲಿ ಮಕ್ಕಳು ಕೈಗಳನ್ನು ಸರಿಯಾಗಿ ತೊಳೆದು ಸ್ವಚ್ಛವಾಗಿರುವಂತೆ ಸೂಚನೆ ನೀಡಬೇಕು. ಎಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಾಸ್ಕ್ ಒದಗಿಸಬೇಕು. ಅಂಗಡಿಗಳಲ್ಲಿ ಮಾಸ್ಕ್ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

Advertisement

ಆತಂಕ ಪಡುವ ಅಗತ್ಯವಿಲ್ಲ: ಕೊರೊನಾ ವೈರಸ್‌ ಹರಡದಂತೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕುರಿತು ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೊರೊನಾ ವೈರಸ್‌ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ವದಂತಿಗಳನ್ನು ಹರಡುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾ ಧಿಕಾರಿಗಳು ಎಚ್ಚರಿಕೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಾಂತರಾಜು, ಡಿಎಚ್‌ಒ ಡಾ| ರಾಜೇಶ ಸುರಗಿಹಳ್ಳಿ, ಶಿವಮೊಗ್ಗ ಮೆಡಿಕಲ್‌ ಕಾಲೇಜು ನಿರ್ದೇಶಕ ಡಾ| ಲೇಪಾಕ್ಷಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next