Advertisement

ಅವಧಿ ಮುಗಿದ ಲೈಸೆನ್ಸ್ ನೀಡಿದ ಶಿವಮೊಗ್ಗ ಪಾಲಿಕೆಗೆ ಗ್ರಾಹಕರ ವೇದಿಕೆ ಚಾಟಿ

01:34 PM Oct 15, 2020 | keerthan |

ಶಿವಮೊಗ್ಗ: ಸಕಾಲದಲ್ಲಿ ಉದ್ಯಮ ಪರವಾನಗಿ ನೀಡದೆ ವಿಳಂಬ ಮಾಡಿದ್ದಕ್ಕೆ ಮಹಾನಗರ ಪಾಲಿಕೆ ಆಯುಕ್ತರಿಗೆ ಗ್ರಾಹಕರ ವೇದಿಕೆಯು ದಂಡ ವಿಧಿಸಿ ತೀರ್ಪು ನೀಡಿದೆ.

Advertisement

ವುಡ್ ಇಂಡಸ್ಟಿಗೋಸ್ಕರ ಎಸ್.ಎನ್. ಫಜಲುದ್ದೀನ್ ಎಂಬುವವರು 2018ರ ಜನವರಿ 11ರಂದು ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕಡತ ಕಳೆದಿರುವುದಾಗಿ ಹೇಳಿದ್ದಕ್ಕೆ 2018ರ ಮೇ 25ರಂದು ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದಾರೆ. ಪರವಾನಗಿಗಾಗಿ 5 ಸಾವಿರ ರೂ. ಚಲನ್ ಕೂಡ ಪಾವತಿಸಿದ್ದಾರೆ.

ಸಕಾಲ ಕಾಯಿದೆಯಡಿ ಫೆ.21ರೊಳಗೆ ಉದ್ಯಮ ಪರವಾನಗಿಯನ್ನು ನೀಡಬೇಕಿತ್ತು. ಆದರೆ, 2019ರ ಏಪ್ರಿಲ್ 3ರಂದು ಲೈಸೆನ್ಸ್ ನೀಡಿದ್ದು, ಅದರ ಅವಧಿ 2018ರ ಏಪ್ರಿಲ್ 1 ರಿಂದ 2019ರ ಮಾರ್ಚ್ 31ವರೆಗೆ ಇತ್ತು. ಅವಧಿ ಪೂರ್ಣಗೊಂಡ ಬಳಿಕ ಲೈಸೆನ್ಸ್ ನೀಡಿದ್ದು ಅದರಿಂದ ಫಜಲುದ್ದೀನ್ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಹಲವು ಸಲ ವಿಚಾರಿಸಿದ್ದು, ಮುಕ್ತಾಯಗೊಂಡ ಪರವಾನಗಿ ನೀಡಿರುವುದು ಸರಿಯಲ್ಲ; ಚಾಲ್ತಿ ಅವಧಿಯದ್ದು ನೀಡುವಂತೆ ಕೋರಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ, ತಮಗಾದ ಸೇವಾ ನ್ಯೂನ್ಯತೆಯಿಂದಾಗಿ ಅವರು ಗ್ರಾಹಕರ ಸಂರಕ್ಷಣಾ ಕಾಯಿದೆ 1986 ಕಲಂ 12 ಅಡಿಯಲ್ಲಿ ದೂರು ನೀಡಿದ್ದರು.

ಇದನ್ನೂ ಓದಿ:ಮತ್ತೆ ಕುಸಿದ ತೀರ್ಥಹಳ್ಳಿ ತಾಲೂಕು ರಂಜದಕಟ್ಟೆಯ ಸೇತುವೆ: ಶಿವಮೊಗ್ಗ- ಉಡುಪಿ ಸಂಚಾರ ಸ್ಥಗಿತ

ವಿಚಾರಣೆ ನಡೆಸಿದ ವೇದಿಕೆಯು ಪಾಲಿಕೆ ಆಯುಕ್ತರಿಗೆ ನೋಟೀಸ್ ಚಾರಿ ಮಾಡಿತ್ತು. ವಿಚಾರಣೆ ವೇಳೆ, `ಪರವಾನಗಿ ನೀಡಲು ಕೆಎಂಸಿ ಅನ್ವಯ ಅನೇಕ ವಿಧಾನಗಳನ್ನು ಅನುಸರಿಸಬೇಕಾಗಿರುವುದರಿಂದ ವಿಳಂಬವಾಗಿರುವುದಾಗಿ’ ಸಬೂಬು ನೀಡಿದ್ದಾರೆ. ಆದರೆ, ಅವಧಿ ಮುಕ್ತಾಯಗೊಂಡ ಲೈಸೆನ್ಸ್ ನೀಡಿದ್ದು ಸರಿಯಲ್ಲ. ಇದರಿಂದ ಸೇವಾ ನ್ಯೂನ್ಯತೆ ಆಗಿದೆ ಎಂದು ಪರಿಗಣಿಸಿ, ದೂರುದಾರರಿಗೆ 5,100 ರೂಪಾಯಿಯನ್ನು ದೂರು ದಾಖಲಾದ ದಿನಾಂಕದಿಂದ ಶೇ.9ರ ಬಡ್ಡಿ ಸಮೇತ ಮರುಪಾವತಿ ಮಾಡಬೇಕು. ಜತೆಗೆ, ಮಾನಸಿಕ ಒತ್ತಡ, ಸೇವಾನ್ಯೂನ್ಯತೆ ಪರಿಹಾರ ಹಾಗೂ ತಕರಾರು ವೆಚ್ಚಕ್ಕಾಗಿ 20 ಸಾವಿರ ರೂ.ಗಳನ್ನು ಕೊಡುವಂತೆ ವೇದಿಕೆಯ ಅಧ್ಯಕ್ಷರಾದ ಸಿ.ಎಂ. ಚಂಚಲ, ಸದಸ್ಯೆ ಸವಿತಾ ಬಿ. ಪಟ್ಟಣಶೆಟ್ಟಿ ಅವರ ಪೀಠ ಸೂಚನೆ ನೀಡಿದೆ. ತಪ್ಪಿದ್ದಲ್ಲಿ ಶೇ.10ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡುವಂತೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next