Advertisement

ಕಣ್ಮನ ಸೆಳೆದ ವಿದ್ಯಾರ್ಥಿಗಳ ಝಲಕ್‌!

05:32 PM Oct 04, 2019 | Naveen |

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆಯುವ ಸಹ್ಯಾದ್ರಿ ಉತ್ಸವಕ್ಕೆ ಚಿತ್ರನಟಿ ಮಾನ್ವಿತಾ ಹರೀಶ್‌ ಕುವೆಂಪು ಅವರ ಪ್ರತಿಮೆಗೆ ಹೂವಿನ ಮಾಲೆ ಹಾಕುವ ಮೂಲಕ ಚಾಲನೆ ನೀಡಿದರು.

Advertisement

ಅವರಿಗೆ ಕುಲಪತಿ ಪ್ರೊ| ಬಿ.ಪಿ.ವೀರಭದ್ರಪ್ಪ ಸಾಥ್‌ ನೀಡಿದರು. ಚಿಕ್ಕಮಗಳೂರು, ಶಿವಮೊಗ್ಗದ 40 ಪ್ರಥಮ ದರ್ಜೆ ಕಾಲೇಜುಗಳ ತಂಡಗಳು ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸಿ ಉತ್ಸವಕ್ಕೆ ಮೆರುಗು ತಂದರು.

ನೆರೆ-ಬರಗಳಿಂದಾಗಿ ರೋಸಿ ಹೋದ ರೈತ ಹೇಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂಬ ವಿಷಯ ಕುರಿತು ರೈತನ ಅಣುಕು ಶವಯಾತ್ರೆಯನ್ನು ಪ್ರದರ್ಶಿಸಿ ಸಂಕಷ್ಟ ತಿಳಿಸಿದರು. ಹೆಗ್ಗೋಡು ಕಾಲೇಜಿನ ವಿದ್ಯಾರ್ಥಿಗಳ ಹುಲಿವೇಷ, ಸೊರಬ ಕಾಲೇಜಿನ ಡೊಳ್ಳು ಕುಣಿತ, ಚಿಕ್ಕಮಗಳೂರಿನ ಕಳಸ ಕಾಲೇಜಿನ ವಿದ್ಯಾರ್ಥಿಗಳ ವಿಂಗ್‌ ಕಮಾಂಡರ್‌ ಅಭಿನಂದನ್‌ ವೇಷ, ವಿಮಾನ, ಮೆರವಣಿಗೆ ಆಕರ್ಷಣೆ ಹೆಚ್ಚಿಸಿದವು. ಕುವೆಂಪು ವಿವಿ ಆವರಣದಲ್ಲಿರುವ ಕಲಾ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳ ನವದುರ್ಗೆಯರ ವೇಷಭೂಷಣ ನೋಡುಗರ ಮನಸೂರೆಗೊಳಿಸಿತು. ಮೈತ್ರಿ ಶಿಕ್ಷಣ ವಿದ್ಯಾಲಯದಿಂದ ಸಂಚಾರ ನಿಯಮದ ಬಗ್ಗೆ ಜಾಗೃತಿ, ಮೂಡಿಗೆರೆ ಡಿಎಸ್‌ ಜಿಬಿ ಕಾಲೇಜು ವಿದ್ಯಾರ್ಥಿಗಳಿಂದ ಪರಿಸರ ಉಳಿಸಿ, ಶಿವಮೊಗ್ಗದ ಎಟಿಎನ್‌ಸಿಸಿ ಸಂಜೆ ಕಾಲೇಜು ವಿದ್ಯಾರ್ಥಿಗಳು ಕನ್ನಡ ಉಳಿಸಿ ಘೋಷಣೆ ಕೂಗಿದರು.

ಎನ್‌ಇಎಸ್‌ ಶಿಕ್ಷಣ ಸಂಸ್ಥೆಯಿಂದ ವಾಹನ ಸವಾರರು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳು, ಚಿಕ್ಕಮಗಳೂರಿನ ಮಲೆನಾಡು ವಿದ್ಯಾಸಂಸ್ಥೆಯಿಂದ ಬಾಲ್ಯ ವಿವಾಹ ವಿರೋಧಿ ಘೋಷಣೆ ಮೊಳಗಿದವು. ಡಿವಿಎಸ್‌ ಕಾಲೇಜಿನಿಂದ ವಿವಿಧತೆಯಲ್ಲಿ ಏಕತೆ ಬಿಂಬಿಸುವ ವೇಷಭೂಷಣ, ಕಳಸ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಎನ್‌ಸಿಸಿ, ಇಂಡಿಯನ್‌ ಆರ್ಮಿ ಬಗ್ಗೆ ವೇಷ ಭೂಷಣದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಶಿಕಾರಿಪುರ ಪ್ರಥಮ ದರ್ಜೆ ಕಾಲೇಜಿನಿಂದ ಡೊಳ್ಳು, ವಿಶ್ವಮಾನದ ಸಂದೇಶಸಾರುವ ರಥ, ಶಿರಾಳಕೊಪ್ಪ ಕಾಲೇಜಿನ ವಿದ್ಯಾರ್ಥಿಗಳು ಕಂಸಾಳೆಗೆ ನೃತ್ಯ ಪ್ರದರ್ಶಿಸಿದರು. ಚಿಕ್ಕಮಗಳೂರಿನ ಕೇಡಲಸರ ಕಾಲೇಜಿನಿಂದ ಮೂಢನಂಬಿಕೆ ಹೋಗಲಾಡಿಸಿ, ಪರಿಸರ ಉಳಿಸಿ, ಶಿವಮೊಗ್ಗದ ಕುವೆಂಪು ಶತಮಾನೋತ್ಸವ ಬಿಇಡಿ ಕಾಲೇಜಿನಿಂದ ಕರ್ನಾಟಕದಲ್ಲಿ ಅನ್ಯಭಾಷೆಗಳ ಹಾವಳಿ, ಕಮಲಾ ನೆಹರು ಕಾಲೇಜಿನಿಂದ ಪ್ಲಾಸ್ಟಿಕ್‌ ತ್ಯಜಿಸಿ ಪರಿಸರ ಉಳಿಸಿ, ಎಟಿಎನ್‌ಸಿಸಿ ಕಾಲೇಜಿನಿಂದ ವೀರಗಾಸೆ, ಸಾಗರ ಇಂದಿರಾ ಗಾಂಧಿ ಕಾಲೇಜಿನಿಂದ ಪರಿಸರ ಉಳಿಸಿ, ಹೊಸನಗರ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ದೋಣಿ, ಕರಾವಳಿ ಸಂಸ್ಕೃತಿಯನ್ನು
ಬಿಂಬಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next