Advertisement

ಕುವೆಂಪು ವಿವಿಗೆ ಜಾಗತಿಕ ಮನ್ನಣೆ ದೊರಕಿಸಲು ಯತ್ನ

01:13 PM Dec 29, 2019 | Naveen |

ಶಿವಮೊಗ್ಗ: ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮವಾದ ಸಾಧನೆ ಮಾಡಿರುವ ಕುವೆಂಪು ವಿಶ್ವವಿದ್ಯಾಲಯವನ್ನು ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಯಾಗಿ ರೂಪಿಸುವ ನಿಟ್ಟಿನಲ್ಲಿ ಅಗತ್ಯ ನೆರವು ನೀಡುವುದಾಗಿ ಸಂಸದ ಬಿ.ವೈ. ರಾಘವೇಂದ್ರ ಭರವಸೆ ನೀಡಿದರು.

Advertisement

ಶನಿವಾರ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಆಶ್ರಯದಲ್ಲಿ ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗವು ಆಯೋಜಿಸಿರುವ ಅಖೀಲ ಭಾರತ ಅಂತರ- ವಿಶ್ವವಿದ್ಯಾಲಯ ಖೋಖೋ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದ ಗುಣಮಟ್ಟ ಉತ್ತಮಪಡಿಸುವ ನಿಟ್ಟಿನಲ್ಲಿ ಭೋಧಕ ಹುದ್ದೆಗಳನ್ನು ಮಂಜೂರು ಮಾಡಲು ವಿಶ್ವವಿದ್ಯಾಲಯವು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಗೆ ಅನುಮೋದನೆ ದೊರಕಿಸಿಕೊಡುವುದಾಗಿ ಅವರು ಭರವಸೆ ನೀಡಿದರು. ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಕ್ರೀಡಾಂಗಣದ ಕಾಮಗಾರಿಯನ್ನು ಪೂರ್ಣಗೊಳಿಸುವ ಸಲುವಾಗಿ ಸಂಸದರ ನಿಧಿಯಿಂದ 3.5 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲು ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದೆ ಎಂದರು.

ವಿದ್ಯಾರ್ಥಿಗಳು ಕೇವಲ ಪಠ್ಯಗಳಿಗೆ ಸೀಮಿತರಾಗದೆ ಖೋಖೋ, ಕಬಡ್ಡಿಯಂತಹ ಕ್ರೀಡೆಗಳು ಮತ್ತು ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸಮಗ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ವಿದ್ಯಾರ್ಥಿಗಳ ದೈಹಿಕ ಆರೋಗ್ಯದ ಹಿತದೃಷ್ಟಿಯಿಂದ ಮಲ್ಟಿಜಿಮ್‌ ವ್ಯವಸ್ಥೆ ಕಲ್ಪಿಸಲು ಶೀಘ್ರದಲ್ಲೇ ಅನುದಾನ ನೀಡುವುದಾಗಿ ತಿಳಿಸಿದರು.

ಚತುಷ್ಪಥ ರಸ್ತೆ: ಶಿವಮೊಗ್ಗದ ಏರ್‌ಪೋರ್ಟ್‌ ಕಾಮಗಾರಿಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಸರ್ಕಾರದಿಂದ 150 ಕೋಟಿ ರೂ. ಮಂಜೂರಾಗಿದ್ದು, ಸುಮಾರು 2.5 ಕಿಲೋ ಮೀಟರ್‌ನ ರನ್‌ವೇ ನಿರ್ಮಿಸಲಾಗುವುದು. ಒಟ್ಟಾರೆ ಏರ್‌ಪೋರ್ಟ್‌ನ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಬೆಂಗಳೂರಿನ ಬಿಐಎಎಲ್‌ ಸಂಸ್ಥೆಗೆ ನೀಡಲಾಗುವುದು ಎಂದರು.

Advertisement

ಶಿವಮೊಗ್ಗ ಏರ್‌ಪೋರ್ಟ್‌ ಮತ್ತು ಕುವೆಂಪು ವಿಶ್ವವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಉನ್ನತೀಕರಿಸುವ ಸಂಬಂಧ ಶಿವಮೊಗ್ಗ ನಗರ ಮತ್ತು ತರೀಕೆರೆ ನಡುವೆ ಚತುಷ್ಪಥ ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕುಲಪತಿ ಪ್ರೊ| ಬಿ. ಪಿ. ವೀರಭದ್ರಪ್ಪ ಮಾತನಾಡಿ, ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುತ್ತಿರುವ ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಕ್ರಿಕೆಟ್‌, ಫುಟ್‌
ಬಾಲ್‌ನಂತಹ ವಾಣಿಜ್ಯೀಕರಣಗೊಂಡ ಕ್ರೀಡೆಗಳ ನಡುವೆ ಖೋಖೋ ಮತ್ತು ಕಬಡ್ಡಿಗಳಂತಹ ದೇಸಿ ಕ್ರೀಡೆಗಳಿಗೆ ಈ ಮಟ್ಟಿಗಿನ ಪ್ರೋತ್ಸಾಹ ದೊರೆಯುತ್ತಿರುವುದು ಚೇತೋಹಾರಿ ಬೆಳವಣಿಗೆ ಎಂದರು.

ಅರ್ಜುನ ಪ್ರಶಸ್ತಿ ವಿಜೇತ ಖೋಖೋ ಪಟು ಶೋಭಾ ನಾರಾಯಣ್‌, ಕುವೆಂಪು ವಿವಿ ಕುಲಸಚಿವ ಪ್ರೊ| ಎಸ್‌. ಎಸ್‌. ಪಾಟೀಲ್‌, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ. ಪಿ.ಪುರುಷೋತ್ತಮ್‌ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ| ಎಂ. ವೆಂಕಟೇಶ್ವರಲು, ಹಣಕಾಸು ಅಧಿ ಕಾರಿ ಪ್ರೊ|
ರಮೇಶ್‌, ಎಪಿಎಂಸಿ ಅಧ್ಯಕ್ಷ ಜ್ಯೋತಿಪ್ರಕಾಶ್‌, ಭಾರತೀಯ ವಿಶ್ವವಿದ್ಯಾಲಯ ಸಂಘದ ವೀಕ್ಷಕ ಕಾಂತರಾಜು, ಡಾ| ಎಸ್‌. ಎಂ. ಪ್ರಕಾಶ್‌, ಡಾ| ಎನ್‌. ಡಿ. ವಿರೂಪಾಕ್ಷ ಮತ್ತಿತರರು ಇದ್ದರು.

ವಾಟರ್‌ ಫಿಲ್ಟರ್‌ ಉದ್ಘಾಟನೆ: ಕುವೆಂಪು ವಿಶ್ವವಿದ್ಯಾಲಯಕ್ಕೆ ಸಂಸದರ ನಿಧಿಯಿಂದ ನೀಡಿರುವ ಶುದ್ಧ ಕುಡಿಯುವ ನೀರಿನ ನಾಲ್ಕು ವಾಟರ್‌ ಫಿಲ್ಟರ್‌ಗಳನ್ನು ಸಂಸದ ಬಿ.ವೈ. ರಾಘವೇಂದ್ರ ಇದೇ ಸಂದರ್ಭದಲ್ಲಿ ಉದ್ಘಾಟನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next