Advertisement
ಸ್ಥಳ ಪುರಾಣಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಈ ದೇವಾಲಯ ಪುರಾಣ ಮತ್ತು ಐತಿಹಾಸಿಕ ಮಹತ್ವ ಹೊಂದಿದೆ. ರಾಮಾಯಣ ಕಾಲದಲ್ಲಿ ಲಂಕೆಯ ಯುದ್ಧದಲ್ಲಿ ಲಕ್ಷ್ಮಣ ಮೂಛೆì ತಪ್ಪಿ ಬಿದ್ದ. ಆಗ ಶ್ರೀರಾಮನ ಆಜ್ಞೆಯಂತೆ ಆಂಜನೇಯ ಹಿಮಾಲಯದಲ್ಲಿನ ಸಂಜೀವಿನಿ ಗಿಡ ತರಲು ಹೊರಟ. ಅದೇ ಸಂದರ್ಭದಲ್ಲಿ ಶಿವಮೊಗ್ಗದ ತುಂಗಾನದಿಯ ತಟದಲ್ಲಿ ದುರ್ವಾಸ ಮುನಿಗಳು ತಪೋನಿರತರಾಗಿದ್ದರು. ಆಂಜನೇಯ ದಕ್ಷಿಣದ ತುದಿಯಿಂದ ಹಿಮಾಲಯದತ್ತ ಆಕಾಶ ಮಾರ್ಗದಲ್ಲಿ ಚಲಿಸುತ್ತಿದ್ದನಂತೆ. ಆಂಜನೇಯನ ಪ್ರಯಾಣದ ವೇಗ ಚಂಡ ಮಾರುತವನ್ನೆ ಸೃಷ್ಠಿಸಿತು. ಏಕಾಗ್ರತೆಗೆ ಭಂಗ ಉಂಟಾದ ಕಾರಣ ದುರ್ವಾಸರು ತಮ್ಮ ತಪಶಕ್ತಿಯಿಂದ ಆಂಜನೇಯನನ್ನು ತಡೆದು ನಿಲ್ಲಿಸಿದರು. ಬಾಲ ಹನುಮನ ರೂಪದಲ್ಲಿ ತಮಗೆ ದರ್ಶನ ನೀಡುವಂತೆ ಪ್ರಾರ್ಥಿಸಿದರು. ಅಂತೆಯೇ ಆಂಜನೇಯ ಬಾಲ ಹನುಮನಾಗಿ ಅವರಿಗೆ ದರ್ಶನ ನೀಡಿ ಆಶೀರ್ವದಿಸಿದನು. ನಂತರ ದುರ್ವಾಸರು ಯಂತ್ರದಲ್ಲಿ ಬಾಲ ಹನುಮನನ್ನು ಪ್ರತಿಷ್ಠಾಪಿಸಿದರು ಎಂಬ ಪ್ರತೀತಿಯಿದೆ.
ಮೂರ್ತಿಯನ್ನು ಕೆತ್ತಿಸಿ ,ಚಿಕ್ಕ ಗುಡಿಯನ್ನು ಸಹ ನಿರ್ಮಿಸಿ ಆಂಜನೇಯ ದೇವರ ವಿಗ್ರಹ ಪ್ರತಿಷ್ಠಾಪಿಸಿ ನಿತ್ಯ ಪೂಜೆಯ ವ್ಯವಸ್ಥೆ ಕಲ್ಪಿಸಿದರು ಎಂಬುದು ಸ್ಥಳ ಪುರಾಣ. ಈಗಿರುವ ಆಂಜನೇಯ ದೇವಾಲಯದ ಕಟ್ಟಡಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಹೊಯ್ಸಳ ದೊರೆ ವಿಷ್ಣುವರ್ಧನನ ಮರಿಮಗ ನರಸಿಂಹ ಬಲ್ಲಾಳ ಜೀರ್ಣೋದ್ಧಾರ ಮಾಡಿ ವ್ಯವಸ್ಥಿತ ದೇಗುಲ ಕಟ್ಟಿದ ದಾಖಲೆಯಿದೆ. ವಿಜಯನಗರದ ಅರಸರು ಈ ದೇಗುಲಕ್ಕೆ ಶಿವಮೊಗ್ಗ ತಾಲೂಕು ವ್ಯಾಪ್ತಿಗೊಳ ಪಡುವ ಕೊರ್ಲಹಳ್ಳಿ, ಕಾಚಿನಕಟ್ಟೆ ಗ್ರಾಮಗಳನ್ನು ಉಂಬಳಿಯಾಗಿ ನೀಡಿದ್ದರು. ಕೆಳದಿ ರಾಜ ಶಿವಪ್ಪ ನಾಯಕ ಈ ದೇಗುಲದ ಅಭಿವೃದ್ಧಿಕೆ ವಿಶೇಷ ಕಾಣಿಕೆ ನೀಡಿ, ಈ ದೇಗುಲಕ್ಕೆ ಶಿವಪ್ಪನಾಯಕ ಗೋಪುರ ನಿರ್ಮಿಸಿದರು.
Related Articles
Advertisement
ಈ ದೇವಾಲಯದಲ್ಲಿ ವರ್ಷಪೂರ್ತಿ ಉತ್ಸವ ನಡೆಯುತ್ತಲೆ ಇರುತ್ತದೆ. ವಿವಾಹ, ಸಂತಾನ,ಉದ್ಯೋಗ, ವ್ಯವಹಾರ, ವ್ಯಾಪಾರ,ಆರೋಗ್ಯಗಳನ್ನು ದಯಪಾಲಿಸುವಂತೆ ಕೋರಿ ನಿತ್ಯ ಭಕ್ತರು ಇಲ್ಲಿಗೆ ಬಂದು ಪೂಜೆ ಮತ್ತು ಹರಕೆ ಸಮರ್ಪಿಸುತ್ತಾರೆ.
ಎನ್.ಡಿ.ಹೆಗಡೆ ಆನಂದಪುರ