Advertisement

ಮಂಗನ ಕಾಯಿಲೆಗೆ ಮದ್ದೆರೆಯಲು ಸನ್ನಧ್ಧ

01:37 PM Sep 23, 2019 | Naveen |

ಶರತ್‌ ಭದ್ರಾವತಿ

Advertisement

ಶಿವಮೊಗ್ಗ: ಕಳೆದ ವರ್ಷ ಇಡೀ ಮಲೆನಾಡನ್ನೇ ತಲ್ಲಣಗೊಳಿಸಿದ್ದ ಕೆಎಫ್‌ಡಿ ಕಾಯಿಲೆಯನ್ನು (ಮಂಗನ ಕಾಯಿಲೆ) ಹದ್ದುಬಸ್ತಿನಲ್ಲಿಡಲು ಆರೋಗ್ಯ ಇಲಾಖೆ ಸರ್ವಸನ್ನದ್ಧವಾಗಿದೆ. ಈಗಾಗಲೇ ಒಂದು ಹಂತದ ಲಸಿಕಾ
ಕಾರ್ಯ ಮುಗಿದಿದ್ದು, ಎರಡನೇ ಹಂತ ಚಾಲ್ತಿಯಲ್ಲಿದೆ. ನವೆಂಬರ್‌ ವೇಳೆಗೆ ಜನರಲ್ಲಿ ಕೆಎಫ್‌ಡಿ ವಿರುದ್ಧ
ಹೋರಾಡುವ ಶಕ್ತಿ ತರಲು ಆರೋಗ್ಯ ಉಲಾಖೆ ಹಗಲಿರುಳು ಕೆಲಸ ಮಾಡುತ್ತಿದೆ.

ಜೂನ್‌ನಿಂದ ಪ್ರತಿ ತಿಂಗಳು 75 ಸಾವಿರ ಲಸಿಕೆಗಳನ್ನು ತರಿಸಿಕೊಳ್ಳಲಾಗುತ್ತಿದ್ದು ಡಿಸೆಂಬರ್‌ ವರೆಗೆ ಒಟ್ಟು 5.25 ಲಕ್ಷ ಲಸಿಕೆ ತರಿಸಿಕೊಳ್ಳಲು ಇಂಡೆಂಟ್‌ ಹಾಕಲಾಗಿದೆ. 2.40 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿಯಿದ್ದು, ಈಗಾಗಲೇ 1 ಲಕ್ಷಕ್ಕೂ ಅಧಿ ಕ ಲಸಿಕೆಗಳನ್ನು ಜನರಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 70-75 ಸಾವಿರ ಬಾಟಲ್‌ ಡಿಎಂಪಿ ತೈಲ ದಾಸ್ತಾನು ಇದೆ. ಪ್ರತಿ ತಾಲೂಕಿಗೆ ನಾಲ್ಕೈದು ಸಾವಿರ ಬಾಟಲ್‌ಗ‌ಳನ್ನು ನೀಡಲಾಗಿದೆ. ಜಿಲ್ಲೆಗೆ ಎರಡು ಲಕ್ಷ ಬಾಟಲ್‌ಗ‌ಳ ಅಗತ್ಯವಿದ್ದು, ಇನ್ನಷ್ಟು ಡಿಎಂಪಿ ತೈಲದ ಬಾಟಲ್‌ ಗಳನ್ನು ಕಳುಹಿಸುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ. ಇನ್ನೊಂದು ತಿಂಗಳಲ್ಲಿ 1 ಲಕ್ಷ ಬಾಟಲ್‌ಗ‌ಳು ಬರುವ ನಿರೀಕ್ಷೆ ಇದೆ. ಹೀಗಾಗಿ, ತೈಲಕ್ಕೆ ಯಾವುದೇ ಕೊರತೆ ಇಲ್ಲ. ಜತೆಗೆ, ಅಗತ್ಯ ಡ್ರಗ್‌ ಗಳೂ ಲಭ್ಯ ಇವೆ. ಒಂದು ವೇಳೆ, ಕೊರತೆ ಎದುರಾದಲ್ಲಿ ಮಾಹಿತಿ ನೀಡುವಂತೆ ಪಿಎಚ್‌ಸಿಗಳಿಗೆ ಮಾಹಿತಿ ರವಾನಿಸಲಾಗಿದೆ.

2018ರ ನವೆಂಬರ್‌ ನಂತರ 343 ಜನರಲ್ಲಿ ಕಾಣಿಸಿಕೊಂಡ ಕಾಯಿಲೆ 12 ಜನರ ಸಾವಿಗೆ ಕಾರಣವಾಗಿತ್ತು. ಕೆಎಫ್‌
ಡಿಗೆ ಭಯಪಟ್ಟು ಸಾಗರ ಭಾಗದಲ್ಲಿ ಹಲವರು ಗುಳೆ ಹೋಗಿದ್ದರು. ಮುಂಜಾಗ್ರತಾ ಕ್ರಮವಾಗಿ ಮುಪ್ಪಾನೆ ಚಾರಣ ನಿಷೇ ಧಿಸಲಾಗಿತ್ತು. ಜೋಗ ಜಲಪಾತ, ಸಿಂಗದೂರು ಚೌಡೇಶ್ವರಿ ಭಾಗದಲ್ಲೂ ಹೈ ಅಲರ್ಟ್‌ ಘೋಷಿಸಿದ್ದರಿಂದ ಪ್ರವಾಸೋದ್ಯಮದ ಮೇಲೆ ಭಾರಿ ಪೆಟ್ಟು ಬಿದ್ದಿತ್ತು. ಈ ಎಲ್ಲ ಘಟನೆಗಳನ್ನು ಮನಗಂಡು
ಇಲಾಖೆಯು ಕಾಯಿಲೆ ಪೀಡಿತ ಪ್ರದೇಶಗಳಲ್ಲಿ ವಾಸಿಸುವವರಿಗೆ ಲಸಿಕೆ ನೀಡಲಾರಂಭಿಸಿದೆ.

ಕಳೆದ ವರ್ಷ ಶಿವಮೊಗ್ಗ ತಾಲೂಕಿನ ಇಬ್ಬರಲ್ಲಿ ಕೆಎಫ್‌ಡಿ ವೈರಸ್‌ ಪತ್ತೆಯಾಗಿತ್ತು. ಒಂದು ಮಂಗ ಮೃತಪಟ್ಟಿತ್ತು. ತೀರ್ಥಹಳ್ಳಿಯಲ್ಲಿ 118 ಪ್ರಕರಣಗಳಲ್ಲಿ ಒಂದು ಸಾವು ಸಂಭವಿಸಿತ್ತು. ಸಾಗರದಲ್ಲಿ ಅತಿ ಹೆಚ್ಚು 217 ಪ್ರಕರಣಗಳಲ್ಲಿ 11 ಜನರು ಮೃತಪಟ್ಟಿದ್ದರು. ಶಿಕಾರಿಪುರ, ಭದ್ರಾವತಿಯಲ್ಲಿ ಮನುಷ್ಯರಲ್ಲಿ ಕಾಯಿಲೆ ಪತ್ತೆಯಾಗಿರಲಿಲ್ಲ. ಆದರೆ, ತಲಾ ಒಂದು ಮಂಗ ಸಾವಿಗೀಡಾಗಿದ್ದವು. ಸೊರಬ, ಹೊಸನಗರದಲ್ಲಿ ಕ್ರಮವಾಗಿ ಎರಡು ಮತ್ತು ನಾಲ್ಕು ಪ್ರಕರಣಗಳು ಕಂಡುಬಂದಿದ್ದವು. ಆಗ, ಜಿಲ್ಲೆಯಲ್ಲಿ 1.48 ಲಕ್ಷ ಲಸಿಕೆ ನೀಡಲಾಗಿತ್ತು.

Advertisement

ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ತನ್ನ ಇರುವಿಕೆಯನ್ನು ತೋರಿಸಿಕೊಂಡು ಸಾಗರ ಮತ್ತು ತೀರ್ಥಹಳ್ಳಿಯಲ್ಲಿ
ನೂರಾರು ಜನರನ್ನು ಹಾಸಿಗೆ ಹಿಡಿಸಿದ್ದಲ್ಲದೇ ಹಲವರ ಪ್ರಾಣ ಹರಣ ಮಾಡಿದ್ದ ಮಂಗನ ಕಾಯಿಲೆಯಿಂದಾಗಿ ಆರೋಗ್ಯ ಇಲಾಖೆಯು ತೀವ್ರ ಟೀಕೆಗೀಡಾಗಿತ್ತು. ಈ ಬಾರಿ ಕಾಯಿಲೆ ಮರುಕಳಿಸದಂತೆ ತಡೆಯಲು ಈಗಾಗಲೇ ಚಿಕಿತ್ಸೆ ಆರಂಭಿಸಿದೆ. 2018ರ ನವೆಂಬರ್‌ ನಲ್ಲಿ ಕೆಎಫ್‌ಡಿ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಪಾಸಿಟಿವ್‌
ಪ್ರಕರಣ ಕಂಡುಬಂದಿತ್ತು. ತಕ್ಷಣ ಲಸಿಕೆ ನೀಡಲು ಆರಂಭಿಸಲಾಗಿತ್ತು. ರೋಗ ಉಲ್ಬಣಗೊಳ್ಳುವ ಮುನ್ನವೇ ಪೂರ್ವ ಸಿದ್ಧತೆ ಮಾಡಿಕೊಳ್ಳದ್ದಕ್ಕೆ ಕಾಯಿಲೆ ವ್ಯಾಪಕವಾಗಿ ಹರಡಿತ್ತು. ಈ ತಪ್ಪು ಮರುಕಳುಹಿಸದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಆರೋಗ್ಯ ಇಲಾಖೆಯು ಆಗಸ್ಟ್‌ನಿಂದಲೇ ಲಸಿಕೆ ಹಾಕುವ ಕಾರ್ಯ ಕೈಗೆತ್ತಿಕೊಂಡಿದೆ.

ಕಳೆದ ಬಾರಿ ಅತಿ ಹೆಚ್ಚು ಕೆಎಫ್‌ಡಿ ಮರಣಕ್ಕೆ ಸಾಕ್ಷಿಯಾದ ಅರಳಗೋಡಿನಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಲಸಿಕೆ ಕೂಡ ನೀಡಲಾಗುತ್ತಿದೆ. ಬಹಳಷ್ಟು ಮಂದಿ ಜಮೀನು ಹೊಂದಿದ್ದು ಅಲ್ಲಿ ಕೆಲಸ ಮಾಡಲು ಬರುವವರಿಗೂ ಲಸಿಕೆ ಕೊಡಿಸುವುದು ಮಾಲೀಕರ ಜವಾಬ್ದಾರಿಯಾಗಿದೆ. ಇದಕ್ಕಾಗಿ ಸರಕಾರ 5 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟಿತ್ತು. ಇದರಲ್ಲಿ ಈಗಿರುವ ಲ್ಯಾಬ್‌ ಅನ್ನು ಮೇಲ್ದರ್ಜೆಗೆ ಏರಿಸಲಾಗುವುದು.
ಜತೆಗೆ ಸಾಗರದಲ್ಲಿ ಒಂದು ಪರೀಕ್ಷಾ ಘಟಕ ತೆರೆಯಲಾಗುವುದು ಎನ್ನತ್ತಾರೆ ಡಿಎಚ್‌ಒ.

Advertisement

Udayavani is now on Telegram. Click here to join our channel and stay updated with the latest news.

Next