ಶಿವಮೊಗ್ಗ: ಕನಕದಾಸರು ಸಮಸ್ತ ಸಮಾಜಕ್ಕೆ ಸೇರಿದ ಆಸ್ತಿ. ಜಾತಿ ಒಂದೇ ಸಮಾಜಕ್ಕೆ ಸೀಮಿತಗೊಳಿಸಿ ನೋಡುವುದು ಬೇಡ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಕುರುಬರ ಸಂಘದ ಸಹಯೋಗದಲ್ಲಿ ಶುಕ್ರವಾರ ನಡೆದ 532ನೇ ‘ಕನಕದಾಸರ ಜಯಂತಿ’ ಉದ್ಘಾಟಿಸಿ ಅವರು ಮಾತನಾಡಿದ ಅವರು ಕನಕದಾಸರು ಪ್ರತಿಪಾದಿಸಿದ ತತ್ವ ಅರಿತು ನಡೆಯಬೇಕು ಎಂದರು. ಸಮಾಜದಲ್ಲಿ ಗುಣಕ್ಕಿಂತ ಕುಲವೇ ಮುಖ್ಯವೆಂದು ಬೀಗುವವರನ್ನು ಕಂಡ ಕನಕದಾಸರು ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಪ್ರಶ್ನಿಸುತ್ತಲೇ ಗುಣ ಮುಖ್ಯವೇ ಹೊರತು ಕುಲವಲ್ಲ ಎಂಬ ಸಂದೇಶ ಸಾರಿದ್ದಾರೆ.
ಈ ಲೋಕದಲ್ಲಿ ದುರ್ಜನರ ಸಂಗ ಬೇಡ. ನೈತಿಕ ನಡವಳಿಕೆಯೇ ಬದುಕಿನ ಜೀವಾಳ. ಆದ್ದರಿಂದ ಸದಾ ಸಜ್ಜನರ ಸಂಗದಲ್ಲಿಯೇ ಬಾಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ನಾನು ಎಂಬ ಅಹಂಕಾರ ತೊರೆದರೆ ಸಮಾಜದಲ್ಲಿ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಾಧ್ಯವಿದ್ದು, ನಾವೆಲ್ಲರೂ ಕನಕದಾಸರ ಕುಲದಲ್ಲಿ ಹುಟ್ಟಿದರೆ ಸಾಲದು, ಅವರ ತತ್ವ-ಆದರ್ಶಗಳನ್ನು ಅರಿತು ಅಳವಡಿಸಿಕೊಳ್ಳೋಣ ಎಂದರು.
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಅಪರ ಜಿಲ್ಲಾಧಿಕಾರಿ ಅನುರಾಧಾ, ಜಿಲ್ಲಾ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಲ್. ವೈಶಾಲಿ, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ಎಸ್. ವಠಾರೆ, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮಹಾನಗರ ಪಾಲಿಕೆ ಉಪ ಮಹಾಪೌರರು ಎಸ್.ಎನ್.ಚನ್ನಬಸಪ್ಪ, ಜಿಲ್ಲಾ ಕುರುಬರ ಸಂಘ ಅಧ್ಯಕ್ಷ ಪಿ.ಮೈಲಾರಪ್ಪ, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಇನ್ನಿತರ ಗಣ್ಯರು ಇದ್ದರು.
ಕನಕದಾಸರ ಬದುಕು-ಬರಹ ವಿಷಯ ಕುರಿತು ಸಂಸ್ಕೃತಿ ಚಿಂತಕ ಡಾ|ಲಿಂಗದಹಳ್ಳಿ ಹಾಲಪ್ಪ ವಿಶೇಷ ಉಪನ್ಯಾಸ ನೀಡಿದರು. ದೀಪಿಕಾ ಶ್ರೀಕಾಂತ್ ಮತ್ತು ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.