Advertisement

ಪಾರಂಪರಿಕ ಕಟ್ಟಡ- ಸ್ಮಾರಕ ರಕ್ಷಿಸಿ: ಪ್ರಕಾಶ್‌

06:05 PM Nov 22, 2019 | Team Udayavani |

ಶಿವಮೊಗ್ಗ: ಪಾರಂಪರಿಕ ಕಟ್ಟಡ, ಸ್ಮಾರಕಗಳನ್ನು ಉಳಿಸಿ ಕಾಪಾಡುವ ಬಗ್ಗೆ ಮತ್ತು ಅದರ ಕುರಿತು ವಿಶೇಷ ಅಧ್ಯಯನವನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ಮಾಡಿದರೆ, ಗತ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಲು ಸಾಧ್ಯ ಎಂದು ಸಹ್ಯಾದ್ರಿ ಪಾರಂಪರಿಕ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಉಪ ವಿಭಾಗಾಧಿ ಕಾರಿ ಟಿ.ವಿ. ಪ್ರಕಾಶ್‌ ಹೇಳಿದರು.

Advertisement

ಶಿವಪ್ಪ ನಾಯಕ ಅರಮನೆಯಲ್ಲಿ ವಿಶ್ವಪಾರಂಪರಿಕ ಸಪ್ತಾಹ ಹಾಗೂ ತಾಳಗುಂದ ಸಿಂಹ ಶಾಸನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪರಂಪರೆಯನ್ನು ಕಾಪಾಡುವುದು ಮತ್ತು ಈ ಮೂಲಕ ಇತಿಹಾಸವನ್ನು ಉಳಿಸುವುದು ಇಂದಿನ ಅಗತ್ಯ. ರಾಜ-ಮಹಾರಾಜರ ಮತ್ತು ಅವರ ಕಾಲದ ಬಗ್ಗೆ ಹೊಸ ವಿಷಯಗಳ ಗ್ರಹಿಕೆ ಇದರಿಂದ ಸಾಧ್ಯ. ಉತ್ಖನನ ಮತ್ತು ಸಂಶೋಧನೆಯ ಮೂಲಕ ಇತಿಹಾಸ ಉಳಿದುಕೊಂಡಿದೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಹೊಸ ವಿಚಾರಗಳು ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಿವೆ. ಇದಕ್ಕೆ ಇತಿಹಾಸಕಾರರು ಸಂಶೋಧನೆ ನಡೆಸುತ್ತಿರುವುದೇ ಕಾರಣ. ಚಿತ್ರದುರ್ಗ, ನಗರ, ಮೈಸೂರು, ಬೇಲೂರು ಮೊದಲಾದೆಡೆ ಇರುವ ಶಿಲ್ಪಗಳು ಮತ್ತು ಶಾಸನಗಳು ಮತ್ತು ಕಟ್ಟಡಗಳು ಹೊಸ ವಿಚಾರಗಳನ್ನು ಇಂದಿಗೂ ಹೊರಗೆಡಹುತ್ತಿವೆ ಎಂದ ಅವರು, ಕೆತ್ತನೆ, ಶಿಲ್ಪ ಮತ್ತು ಕಟ್ಟಡಗಳನ್ನು ಉಳಿಸುವ ಕೆಲಸ ಈಗ ನಡೆಯಬೇಕಿದೆ. ಸಾವಿರಾರು ವರ್ಷಗಳ ಹಿಂದಿನ ಈ ಪಾರಂಪರಿಕ ಕಟ್ಟಡಗಳು ಮತ್ತು ಸ್ಮಾರಕಗಳು ಇಂದು ಅಳಿವಿನ ಅಂಚಿನಲ್ಲಿವೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಹೆಚ್ಚಿನ ಆಸಕ್ತಿಯನ್ನು ನಮ್ಮ ಪರಂಪರೆಯ ರಕ್ಷಣೆಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಅತಿಥಿಗಳಾಗಿ ಕುವೆಂಪು ವಿವಿ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ರಾಜಾರಾಂ ಹೆಗಡೆ, ಶಾಂತಾರಾಮ್‌ ಸಾಮಕ್‌, ಕೆ.ಜಿ. ವೆಂಕಟೇಶ್‌, ಕಸ್ತೂರಬಾ ಕಾಲೇಜಿನ ಪ್ರಾಚಾರ್ಯ ಬಸವರಾಜ್‌, ಇತಿಹಾಸ ಸಂಶೋಧಕ ಅಜಯ್‌ ಶರ್ಮಾ ಮತ್ತಿತರರು ಇದ್ದರು. ಪ್ರಾಚ್ಯವಸ್ತು ಇಲಾಖೆಯ ಸಹಾಯಕ ನಿರ್ದೇಶಕ ಶೇಜೇಶ್ವರ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next