Advertisement

ಕನ್ನಡಿಗರು ಧಾರಾಳ ಸ್ವಭಾವದವರು: ಭಾರತಿ ಶೆಟ್ಟಿ

06:54 PM Nov 16, 2019 | Naveen |

ಶಿವಮೊಗ್ಗ: ಬೇರೆ ಭಾಷೆಗಳನ್ನು ಗೌರವಿಸುವ ಸಲುವಾಗಿ ನಮ್ಮ ಭಾಷೆಯನ್ನು ಮರೆಯಬಾರದು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯೆ ಭಾರತಿ ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಇಂದ್ರಸುಧಾ ಸಾಂಸ್ಕೃತಿಕ ಕಲಾ ಟ್ರಸ್ಟ್‌ ವತಿಯಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನ್ನಡಿಗರಾದ ನಾವು ಧಾರಾಳ ಸ್ವಭಾವದವರು. ಇತರೆ ಭಾಷೆಯನ್ನು ಗೌರವಿಸುವ ಹುಮ್ಮಸ್ಸಿನಲ್ಲಿ ನಮ್ಮ ಭಾಷೆಯನ್ನೇ ಮರೆಯುತ್ತಿದ್ದೇವೆ ಎಂದರು.

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶ, ಹಲವು ಬಗೆಯ ಜನರನ್ನು ಒಳಗೊಂಡಿದೆ. ಅದೇ ರೀತಿ ಕರ್ನಾಟಕದಲ್ಲೂ ಸಹ ವಿವಿಧ ರೀತಿಯ ಸಂಸ್ಕೃತಿಯ ಜನರು ವಾಸವಾಗಿದ್ದಾರೆ. ಕರ್ನಾಟಕದಲ್ಲಿಯೇ ಕನ್ನಡ ಭಾಷೆ ವಿವಿಧ ರೀತಿಯಲ್ಲಿ ಮಾತನಾಡುವವರಿದ್ದಾರೆ ಎಂದ ಅವರು, ಇತರೆ ಭಾಷೆಗಳನ್ನು ಪ್ರೀತಿಸುವುದರ ಜೊತೆಗೆ ನಮ್ಮ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡಾ ಕಾರ್ಯೋನ್ಮುಖರಾಗಬೇಕೆಂದರು.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡವನ್ನು ಮಾತನಾಡುವ ಸಂದರ್ಭದಲ್ಲಿ ನೂರಾರು ಇಂಗ್ಲಿಷ್‌ ಪದಗಳನ್ನು ಬಳಸುತ್ತಾರೆ. ಇದರ ಜೊತೆಗೆ ನಮಗೆ ಬೇರೆ ಭಾಷೆಗಳು ಬರುತ್ತವೆ ಎಂಬುದನ್ನು ತೋರಿಸುವ ಸಲುವಾಗಿ ಇತರೆ ಭಾಷೆಗಳನ್ನು ಮಾತನಾಡುತ್ತಾರೆ. ಇದರಿಂದಾಗಿ ನಮ್ಮ ಮಾತೃಭಾಷೆಯಾದ ಕನ್ನಡಕ್ಕೆ ಕುತ್ತು ಬರುತ್ತದೆ. ಇದನ್ನು ಪ್ರತಿಯೊಬ್ಬ ಕನ್ನಡಿಗನೂ ಮನಗಾಣಬೇಕೆಂದರು. ಸಮಾರಂಭದಲ್ಲಿ ವಿ.ಪ. ಸದಸ್ಯ ಎಸ್‌. ರುದ್ರೇಗೌಡ, ಟ್ರಸ್ಟಿನ ಇಂದ್ರ ಸುಧಾ, ಡಾ| ಪ್ರಸನ್ನ, ಲಕ್ಷ್ಮೀ ನಾರಾಯಣ್‌, ಉಮಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next