ಶಿವಮೊಗ್ಗ: ಯಾವುದೇ ಮುನ್ನೆಚ್ಚರಿಕೆ ಪಾಲಿಸದೆ ಧರೆ ಕಡಿದು ಚತುಷ್ಪಥ ರಸ್ತೆ ಕಾಮಗಾರಿ ಮಾಡುತ್ತಿರುವ ಪರಿಣಾಮ ಸರ್ವಿಸ್ ರಸ್ತೆ ಕುಸಿದಿದ್ದು ಸಂಚಾರ ದುಸ್ತರವಾಗಿದೆ.
ಶಿವಮೊಗ್ಗ – ಬೆಂಗಳೂರು ಚತುಷ್ಪಥ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗಿದ್ದು ಶಿವಮೊಗ್ಗ ಭದ್ರಾವತಿ ನಡುವಿನ ಶಿವಮೊಗ್ಗ ಹಾಲು ಒಕ್ಕೂಟ ಎದುರು ರಸ್ತೆಯನ್ನು ಸಮತಟ್ಟು ಮಾಡಲಾಗುತ್ತಿದ್ದು ತಾತ್ಕಾಲಿಕವಾಗಿ ಸರ್ವಿಸ್ ರಸ್ತೆಯಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಧರೆ ಕುಸಿತವಾಗಿದೆ. ಇಲ್ಲಿ ಎರಡು ಲಾರಿಗಳು ಹೋಗಿಬರುವಷ್ಟೇ ಸ್ಥಳವಕಾಶ ಇದ್ದು ಕೈಗಾರಿಕಾ ಪ್ರದೇಶ ಇರುವುದರಿಂದ ಪ್ರತಿ ದಿನ ಸಾವಿರಾರು ಭಾರೀ ವಾಹನಗಳು ಸಂಚರಿಸುತ್ತವೆ. ಮೊದಲೇ ಕಿರಿದಾಗಿ ಸಂಚಾರಕ್ಕೆ ದುಸ್ತರವಾಗಿದ್ದ ರಸ್ತೆ ಕುಸಿದಿರುವುದು ಮತ್ತಷ್ಟು ಸಮಸ್ಯೆ ತಂದಿಟ್ಟಿದೆ.
ಶಿವಮೊಗ್ಗದಿಂದ ಬೆಂಗಳೂರು, ಮೈಸೂರು ಹೋಗುವ ಎಲ್ಲ ವಾಹನಗಳು ಇಲ್ಲಿಂದಲೇ ಹೋಗಬೇಕು. ಕೆಳಗಿನ ರಸ್ತೆ 20 ಅಡಿಗೂ ಅಧಿಕ ಆಳವಿದ್ದು ಯಮಾರಿದರೆ ಪ್ರಾಣಾಪಾಯವಾಗುವುದು ನಿಶ್ಚಿತ. ಮಳೆಗಾಲ ಹಿನ್ನೆಲೆ ರಸ್ತೆ ಕಾಮಗಾರಿ ಸ್ಥಗಿತಗೊಳಿಸಲಾಗಿದ್ದು ಕಾರ್ಮಿಕರೆಲ್ಲರೂ ರಜೆಯಲ್ಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಕ್ಷಣ ಸರಿಪಡಿಸಿದಿದ್ದರೆ ಸಮಸ್ಯೆ ಉಂಟಾಗುವುದು ನಿಶ್ಚಿತ.