ಶಿವಮೊಗ್ಗ: ದೇಶಾದ್ಯಂತ ರಾಷ್ಟ್ರಿಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಗೊಳಿಸುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಅಸ್ಸಾಂನಲ್ಲಿ ಬಾಂಗ್ಲಾ ನುಸುಳುಕೋರರು ಯಾರು, ಮೂಲ ಅಸ್ಸಾಮಿ ನಾಗರಿಕರು ಯಾರು ಎಂಬ ಮಾಹಿತಿ ನೀಡುವ ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿ ಪ್ರಕಟಿಸಲಾಯಿತು. ಸುಮಾರು 11 ಲಕ್ಷ ನಾಗರಿಕರ ಹೆಸರನ್ನು ಸೇರಿಸಿಲ್ಲ. ಇವರು ಕಾನೂನುಬಾಹಿರವಾಗಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದರು.
ಜಮಾತೆ ಉಲ್ಲಾ ಮುಜಾಹಿದ್ದೀನ್ ಬಾಂಗ್ಲಾದೇಶ್ ಭಯೋತ್ಪಾದಕ ಸಂಘಟನೆ ಬಾಂಗ್ಲಾದೇಶಿ ನುಸುಳುಕೋರರ ಮೂಲಕ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ರಾಷ್ಟ್ರೀಯ ತನಿಖಾದಳ ಮಾಹಿತಿ ನೀಡಿದೆ. ಇದು ರಾಷ್ಟ್ರೀಯ ಸಮಸ್ಯೆಯಾಗಿದ್ದು, ದೇಶಾದ್ಯಂತ ಬಾಂಗ್ಲಾದೇಶ, ಮಾಯನ್ಮಾರ್, ಪಾಕಿಸ್ತಾನದಿಂದ ಬಂದ ನುಸುಳುಕೋರರ ಸಂಖ್ಯೆ ಎಷ್ಟಿದೆ ಎಂದು ತಿಳಿಯಲು ಎಲ್ಲ ರಾಜ್ಯಗಳಲ್ಲಿ ರಾಷ್ಟ್ರೀಯ ಪೌರತ್ವ ನೊಂದಣಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ದೇಶದ ಗಡಿಯನ್ನು ಸುರಕ್ಷಿತವಾಗಿಡಲು ಕಠಿಣ ಕ್ರಮ ಕೈಗೊಳ್ಳಬೇಕು. ಪರಿಹಾರ ಮಾರ್ಗಗಳನ್ನು ಅನುಸರಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಪ್ರದೇಶದಲ್ಲಿ ಹಿಂದೂ ಮಹಾಸಭೆ ಅಧ್ಯಕ್ಷ ಕಮಲೇಶ್ ತಿವಾರಿ ಅವರನ್ನು ಹತ್ಯೆ ಮಾಡಿದ್ದು ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಶಬರೀಶ್, ದಿನೇಶ್ ಚೌವಾಣ್, ಗಂಗಾಧರ್, ಶರತ್, ಬಾಲಸುಬ್ರಮಣಿ, ಸೆಲ್ವಿ, ಸುನಿತಾ, ಉಮಾ ಶಿವರಾಮ್ ಮತ್ತಿತರರು ಇದ್ದರು.