Advertisement

ಬಾರದ ಪರಿಹಾರ: ಸಂತ್ರಸ್ತರ ಸ್ಥಿತಿ ಅತಂತ್ರ

06:36 PM Jun 22, 2020 | Naveen |

ಶಿವಮೊಗ್ಗ: ಮುಂಗಾರು ಮಾರುತ ಮತ್ತೆ ಜಿಲ್ಲೆ ಪ್ರವೇಶಿಸಿದೆ. ಆದರೆ, ಕಳೆದ ಬಾರಿ ಮುಂಗಾರು ವೇಳೆ ಮನೆ ಕಳೆದುಕೊಂಡವರು ಇನ್ನೂ ಮನೆ ನಿರ್ಮಿಸಿಕೊಂಡಿಲ್ಲ. ಸರಕಾರದ ಪರಿಹಾರ ಮರೀಚಿಕೆಯಾಗಿದೆ. ಅಧಿಕೃತ ದಾಖಲೆ ಇದ್ದವರು ಹೇಗೋ ಮನೆ ನಿರ್ಮಾಣದ ಕನಸು ಕಂಡಿದ್ದರೆ, ಅನಧಿಕೃತ ವಾಸಿಗಳು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

Advertisement

ಮಳೆಯಿಂದ ಮನೆ ಸಂಪೂರ್ಣ ಕಳೆದುಕೊಂಡವರಿಗೆ 5 ಲಕ್ಷ, ಭಾಗಶಃ ಕಳೆದುಕೊಂಡವರಿಗೆ 1 ಲಕ್ಷ ಕೊಡುವುದಾಗಿ ಆ. 13ರಂದು ಶಿವಮೊಗ್ಗದ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದರು. ಆದರೆ, ಅಧಿಕೃತ ದಾಖಲೆ ಇದ್ದವರಿಗೆ ಮಾತ್ರ 5 ಲಕ್ಷ ಕೊಡಲಾಗುವುದು ಎಂದು ಸರಕಾರ ಆದೇಶ ಹೊರಡಿಸಿತ್ತು. ಈವರೆಗೆ ಪೂರ್ಣ ಹಣ ಕೈಸೇರಿಲ್ಲ. ಇನ್ನು ದಾಖಲೆ ಇರದ ಮನೆಗಳಿಗೆ ಒಂದು ಲಕ್ಷ ಮಾತ್ರ ಸಿಕ್ಕಿದೆ. ಬಾಕಿ ಹಣ ಸಿಗುವ ಯಾವುದೇ ಭರವಸೆ ಇಲ್ಲ. 5 ಲಕ್ಷ ರೂ. ಸಿಗುವ ಭರವಸೆಯಲ್ಲಿ ಎಲ್ಲರೂ ಅಡಿಪಾಯ ಹಾಕಿದ್ದಾರೆ. ಹಣ ಸಿಗುವ ಭರವಸೆಯಲ್ಲಿ ಇನ್ನೂ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಜಿಲ್ಲಾಡಳಿತದ ಮಾಹಿತಿ ಪ್ರಕಾರ 662 ಫಲಾನುಭವಿಗಳು ದಾಖಲೆ ಇಲ್ಲದ ಕೆಟಗಿರಿ ಯಲ್ಲಿ 1 ಲಕ್ಷ ಸಹಾಯಧನ ಪಡೆದಿದ್ದಾರೆ. ಅವರೆಲ್ಲರೂ ಈಗ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ಇದೆ. ಸ್ಲಂ ನಿವಾಸಿಗಳು, ಅರಣ್ಯ ಭೂಮಿ, ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡು ಹಕ್ಕುಪತ್ರ ಇಲ್ಲದ ನೂರಾರು ಜನ ಇಂತಹ ಸಮಸ್ಯೆಗೆ ಒಳಗಾಗಿದ್ದಾರೆ. ಇವರಿಗೆ ಪರಿಹಾರ ಕೊಡಿಸಬೇಕೆಂದು ಅನೇಕ ಪ್ರತಿಭಟನೆ, ಹೋರಾಟಗಳು ನಡೆದರೂ ಪ್ರಯೋಜನವಾಗಿಲ್ಲ.

ಮಳೆಯಿಂದ ಮನೆ ಕಳೆದುಕೊಂಡವರಿಗೆ ಡಿಸೆಂಬರ್‌ವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದರೆ ಡಿಸೆಂಬರ್‌ ನಂತರ ಬಂದ ಅರ್ಜಿಗಳನ್ನು ಮಾನ್ಯ ಮಾಡಲಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ತುಂಗಾ ನದಿ ಉಕ್ಕಿ ಹರಿದು ಅನೇಕ ಮನೆಗಳು ನೆಲಸಮಗೊಂಡಿದ್ದವು. ನದಿ ಪಕ್ಕದ ಬಡಾವಣೆಗಳು ಹೆಚ್ಚು ಹಾನಿಗೆ ಒಳಗಾಗಿದ್ದವು. ಇವರಿಗೆ ಡಿಸೆಂಬರ್‌ ಕೊನೆವರೆಗೂ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಡಿಸೆಂಬರ್‌ ನಂತರವೂ ಅನೇಕ ಅರ್ಜಿಗಳು ಬಂದಿದ್ದು, ಅವುಗಳು ತಿರಸ್ಕೃತಗೊಂಡಿವೆ.

13.95 ಕೋಟಿ ಪರಿಹಾರ
ಜಿಲ್ಲೆಯಲ್ಲಿ ಈವರೆಗೆ 13.95 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. 811 ಮಂದಿ ಸಂಪೂರ್ಣ ಮನೆ ಕಳೆದು ಕೊಂಡವರು (ದಾಖಲೆವುಳ್ಳವರು) ಅರ್ಜಿ ಸಲ್ಲಿಸಿ ದ್ದರು. ಇದರಲ್ಲಿ 806 ಮಂದಿಗೆ ಮೊದಲನೇ ಹಂತದ ಒಂದು ಲಕ್ಷ ರೂ. ಬಿಡುಗಡೆಯಾಗಿದೆ. 421 ಮಂದಿ ತಳಪಾಯ ಹಾಕಿದ್ದು, 123 ಮಂದಿ ಕಿಟಕಿವರೆಗೆ ಮನೆ ಕಟ್ಟಿದ್ದಾರೆ. 28 ಮಂದಿ ಛಾವಣಿ ಹಂತಕ್ಕೆ ತಲುಪಿದ್ದು, ಒಬ್ಬರು ಮಾತ್ರ ಮನೆ ಪೂರ್ಣಗೊಳಿಸಿದ್ದಾರೆ. ದಾಖಲೆ ಇಲ್ಲದ 662 ಮಂದಿಗೆ ತಲಾ ಒಂದು ಲಕ್ಷ ರೂ. ಪರಿಹಾರ ಕೊಡಲಾಗಿದೆ.

Advertisement

ಮಳೆಯಲ್ಲಿ ಮನೆ ಕಳೆದುಕೊಂಡವರಿಗೆ ಸರಕಾರದಿಂದ ಈವರೆಗೆ 13.98 ಕೋಟಿ ಹಣ ಬಿಡುಗಡೆಯಾಗಿದೆ. 811 ಫಲಾನುಭವಿಗಳ ಮನೆ ನಿರ್ಮಾಣ ವಿವಿಧ ಹಂತದಲ್ಲಿದೆ. ಹಂತಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು. ದಾಖಲೆ ಇಲ್ಲದ 622 ಮನೆಗಳಿಗೆ ತಲಾ 1 ಲಕ್ಷ ರೂ. ಕೊಡಲಾಗಿದೆ. ಸರಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಣೆ ಮಾಡಲಾಗಿದೆ.
ಕೆ.ಬಿ. ಶಿವಕುಮಾರ್‌,ಜಿಲ್ಲಾಧಿಕಾರಿ

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next