ಶಿವಮೊಗ್ಗ: ಉದ್ಯಮಿಗಳು ಕೈಗಾರಿಕೆಗಳನ್ನು ಆರಂಭಿಸಲು ಇರುವ ನಿರ್ಬಂಧಗಳಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೇ, ಇಂಡಸ್ಟ್ರಿಯಲ್
ಫೆಸಿಲಿಟೇಶನ್ ಕಾಯ್ದೆಗೆ ಮಹತ್ವದ ತಿದ್ದುಪಡಿ ತರಲಾಗಿದೆ. ಇದರಿಂದಾಗಿ ಯಾವುದೇ ಅಡತಡೆಗಳಿಲ್ಲದೆ ಹೊಸ ಕೈಗಾರಿಕೆಗಳ ಆರಂಭ ಸರಳವೂ, ಸುಲಭವೂ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಬುಧವಾರ ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಸಂಘ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕೈಗಾರಿಕೆಗಳನ್ನು ಆರಂಭಿಸಲು ಆರಂಭಿಸಲು ಸ್ಥಳೀಯವಾಗಿ ಎದುರಾಗಬಹುದಾದ ಹಾಗೂ ಕಾನೂನಾತ್ಮಕ ತೊಡಕುಗಳನ್ನು ನಿವಾರಿಸಲು ಕೈಗಾರಿಕಾ ಅದಾಲತ್‌ನ್ನು ನಡೆಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಕಾನೂನು ಸಮಸ್ಯೆಗಳ ಇತ್ಯರ್ಥಕ್ಕೆ ಸಹಕಾರಿಯಾಗಲಿದೆ ಎಂದರು.
ರಾಜಧಾನಿಗೆ ಸೀಮಿತವಾಗಿರುವ ಕೈಗಾರಿಕೆಗಳನ್ನು ಇತರೆ ಪ್ರಮುಖ ನಗರಗಳಿಗೂ ಕೊಂಡೊಯ್ಯಲು ಪ್ರಯತ್ನಿ ಸಲಾಗುತ್ತಿದೆ. ಈ ಸಂಬಂಧ ಇಂಡಸ್ಟ್ರಿಯಲ್ ಪಾಲಿಸಿ ಜಾರಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೈಗಾರಿಕೆಗಳನ್ನು ಆಹ್ವಾನಿಸುವ ದೇಶದ ಪ್ರಮುಖ 4-5 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ ಎಂಬುದು ಹರ್ಷದ ಸಂಗತಿ. ರಾಜ್ಯದಲ್ಲಿ ಅತ್ಯಲ್ಪ ಅವ ಧಿಯಲ್ಲಿ ಇನ್ನಷ್ಟು ಕೈಗಾರಿಕೆಗಳನ್ನು ಆರಂಭಿಸಲು ಅಗತ್ಯ ಸೌಲಭ್ಯವನ್ನು ಒದಗಿಸಿಕೊಟ್ಟು, ಕೈಗಾರಿಕಾಭಿವೃದ್ಧಿಯಲ್ಲಿ ದೇಶದ ಮೊದಲ ರಾಜ್ಯವಾಗಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸುವಲ್ಲಿ ವಿಶೇಷ ಟಾಸ್ಕ್ಫೋರ್ಸ್ ರಚಿಸಲಾಗಿದೆ. ಅಲ್ಲದೇ ಅನೇಕ ವಿದೇಶಿ ಕಂಪನಿಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಸಿಎಂ ನೇತೃತ್ವದ ತಂಡ ದಾವೋಸ್‌ನಲ್ಲಿ ನಡೆದ ಕೈಗಾರಿಕಾ ಸಮಾವೇಶದಲ್ಲಿ ಭಾಗವಹಿಸಿದ ನಂತರ ಕೈಗಾರಿಕಾ ಕ್ಷೇತ್ರದ ವಿಕಾಸಕ್ಕೆ ಹೊಸ ಮಾರ್ಗದ ಅನ್ವೇಷಣೆ ಆರಂಭಗೊಂಡಂತಾಗಿದೆ ಎಂದರು.
ಕೈಗಾರಿಕೆಗಳಿಗೆ ಅಗತ್ಯ ಭೂಮಿ ಒದಗಿಸಲು ಸರ್ಕಾರ ಬದ್ಧವಾಗಿದ್ದು, ಭೂಮಿಗೆ ರಾಜ್ಯದಾದ್ಯಂತ ಏಕರೀತಿಯ ಹಾಗೂ ಮಾದರಿಯಾಗುವಂತಹ ದರ ನಿಗ ಪಡಿಸಲು ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದರು. ಜಿಲ್ಲೆಯ ಪ್ರಮುಖ ಕೈಗಾರಿಕೆಗಳಾಗಿರುವ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ ಮತ್ತು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳನ್ನು ಉಳಿಸಿಕೊಂಡು ಮುಂದುವರೆಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದರು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಮಾತ್ರವಲ್ಲ ಕಾರ್ಮಿಕರ ಬದುಕು ಅಸಹನೀಯವಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರವು ಮೂರು ಲಕ್ಷ ಕೋಟಿ ರೂ. ಮಂಜೂರು ಮಾಡಿದೆ. ಈ ಅನುದಾನ ಕೈಗಾರಿಕೋದ್ಯಮಿಗಳಿಗೆ ಸಾಲ-ಸೌಲಭ್ಯ ಒದಗಿಸುವಂತೆ ರಾಷ್ಟ್ರೀಕೃತ ಬ್ಯಾಂಕು ಗಳ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಕೈಗಾರಿಕೆಗಳು ಇನ್ನಷ್ಟು ಹೆಚ್ಚು ಸಂಖ್ಯೆಯಲ್ಲಿ ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ದೊರಕಿಸಿಕೊಡಬೇಕು. ಕಡಿಮೆ ದರದಲ್ಲಿ ಜಮೀನು ಮಂಜೂರು ಮಾಡಬೇಕು ಎಂದರು. ಈ ಹಿಂದೆ ಜಿಲ್ಲೆಯಲ್ಲಿದ್ದ ಗಂಧದ ಎಣ್ಣೆ ಕಾರ್ಖಾನೆ, ಬೆಂಕಿ ಪೊಟ್ಟಣ ಕಾರ್ಖಾನೆಗಳು ಚಟುವಟಿಕೆ ಸ್ಥಗಿತಗೊಳಿಸಿ ದಶಕಗಳು ಕಳೆದಿವೆ. ಕಾಗದ ಕಾರ್ಖಾನೆ ಮತ್ತು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳು ವಿನಾಶದಂಚಿಗೆ ಬಂದು ನಿಂತಿವೆ. ಇದರ ಪುನರುಜ್ಜೀವನಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಅನುಸರಿಸಲು ಸರ್ಕಾರ ಕ್ರಮ ವಹಿಸಬೇಕೆಂದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ರುದ್ರೇಗೌಡರು, ಆರ್.ಪ್ರಸನ್ನಕುಮಾರ್, ಡಿ.ಎಸ್. ಅರುಣ್, ಕೆ.ಎಸ್.ಗುರುಮೂರ್ತಿ, ಸರ್ಕಾರದ ಕಾರ್ಯದರ್ಶಿ ಗೌರವಗುಪ್ತ ಇತರರಿದ್ದರು