ಶಿವಮೊಗ್ಗ: ಉದ್ಯಮದಲ್ಲಿ ಯಶಸ್ಸು ತಕ್ಷಣಕ್ಕೆ ಸಿಗುವ ವಸ್ತುವಲ್ಲ. ಅದಕ್ಕೆ ನಿರಂತರ ಪರಿಶ್ರಮ ಮತ್ತು ಸವಾಲುಗಳನ್ನು ಎದುರಿಸುವ ಕೌಶಲ ರೂಢಿಸಿಕೊಳ್ಳಿ ಎಂದು ಕೆನರಾ ಬ್ಯಾಂಕ್ ಪ್ರಾದೇಶಿಕ ಜನರಲ್ ಮ್ಯಾನೇಜರ್ ರಾಘವೇಂದ್ರ ರಾವ್ ಕನಾಲ ಸಲಹೆ ನೀಡಿದರು.
ನಗರದ ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐ.ಟಿ-ಬಿ.ಟಿ ಇಲಾಖೆ ಕರ್ನಾಟಕ ಸರ್ಕಾರ, ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸಮಾಜ, ಸ್ಟಾರ್ಟ್ ಅಪ್ ಸೆಲ್ ಮತ್ತು ಜೆಎನ್‌ಎನ್‌ಸಿಇ ಕಾಲೇಜಿನ ನ್ಯೂ ಏಜ್ ಇನ್‌ಕ್ಯೂಬೇಶನ್ ನೆಟ್ವರ್ಕ್ ಸೆಂಟರ್ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಉದ್ಯಮಶೀಲತೆ ಬೂಟ್ ಕ್ಯಾಂಪ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಸಮೂಹದಲ್ಲಿನ ಹೊಸ ಆಲೋಚನೆಗಳು ಉದ್ಯಮವಾಗಿ ಬದಲಾಗಲು ಸರ್ಕಾರ, ಬ್ಯಾಂಕುಗಳು ಮತ್ತು ಖಾಸಗಿ ಕ್ಷೇತ್ರದ ಮೂಲಕ ಸಾಕಷ್ಟು ಅವಕಾಶಗಳನ್ನು ನೀಡಲಾಗುತ್ತಿದ್ದು ಅಂತಹ ಉದ್ಯಮಿಗಳಾಗುವ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಿ ಎಂದರು.
ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಆಧುನಿಕ ಮಾರ್ಪಾಡುಗಳಾಗಿವೆ. ವಸ್ತುಗಿಂತ ಸೇವೆಯ ಆಧಾರದ ಮೇಲೆ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದು ಇಂತಹ ಸೂಕ್ಷ್ಮ ವಿಚಾರಗಳೊಂದಿಗೆ ಮುನ್ನಡೆಯಿರಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜೆ.ಎನ್.ಎನ್.ಸಿ.ಇ. ಕಾಲೇಜಿನ ಪ್ರಾಂಶುಪಾಲ ಡಾ| ಎಚ್.ಆರ್. ಮಹದೇವಸ್ವಾಮಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಹೊಸ ಆಲೋಚನೆಗಳು ಮೂಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಕಾಲೇಜಿನ ನ್ಯೂ ಏಜ್ ಇನ್‌ಕ್ಯೂಬೇಶನ್ ಸೆಂಟರ್ ಮತ್ತು ಇತರೆ ವೇದಿಕೆಗಳ ಮೂಲಕ ಆರ್ಥಿಕ ಸಹಕಾರ ನೀಡಲಿದ್ದು ಬೂಟ್ ಕ್ಯಾಂಪ್‌ನಂತಹ ಕಾರ್ಯಕ್ರಮನ್ನು ಬಳಸಿಕೊಳ್ಳಬೇಕಾದ ಜವಾಬ್ದಾರಿ ಎಲ್ಲಾ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ್, ನ್ಯೂ ಏಜ್ ಇನ್‌ಕ್ಯೂಬೇಶನ್ ನೆಟ್ವರ್ಕ ಸೆಂಟರ್‌ನ ಕಾಲೇಜು ಸಂಯೋಜಕ ಡಾ| ಮಂಜುನಾಥ ಪಿ., ವಲಯ ವ್ಯವಸ್ಥಾಪಕ ಮಲ್ಲೇಶ್ ಕುಮಾರ್ ಕೆ.ಎಸ್., ಪ್ರಾದ್ಯಾಪಕ ಡಾ| ಸಂಜೀವ್ ಕುಂಟೆ ಮತ್ತಿತರರು ಇದ್ದರು.