ಶಿವಮೊಗ್ಗ: ಜನಜಂಗುಳಿಯಿಂದ ಕೂಡಿರುತ್ತಿದ್ದ ಎಪಿಎಂಸಿ ಮಾರುಕಟ್ಟೆಯನ್ನು ನಿಯಂತ್ರಿಸಲು ಜಿಲ್ಲಾಡಳಿತ ಈಗ ಡ್ರೋಣ್ ಮೊರೆ ಹೋಗಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಸಾಮಾಜಿಕ ಅಂತರ ಕಾಪಾಡಲು ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ ಡ್ರೋಣ್ ಮೂಲಕ ವ್ಯಾಪಾರಸ್ಥರ ಮೇಲೆ ನಿಗಾ ಇಡಲು ಮುಂದಾಗಿದೆ.
ಈ ಕುರಿತು ಭಾನುವಾರ ಬೆಳಗ್ಗೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಎಪಿಎಂಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತರಕಾರಿಗಳನ್ನು ಬಿಡಿಯಾಗಿ ಮಾರದಂತೆ, ಹೋಲ್‌ಸೇಲ್ ಖರೀದಿದಾರರು ಬಾಕ್ಸ್‌ನಲ್ಲಿ ನಿಂತು ಖರೀದಿಸುವಂತೆ ಹಾಗೂ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.
ಈ ಕುರಿತು ಮಾತನಾಡಿದ ಜಿಲ್ಲಾ ಧಿಕಾರಿ ಕೆ.ಬಿ.ಶಿವಕುಮಾರ್ ಹಾಗೂ ಎಸ್ಪಿ ಕೆ.ಎಂ.ಶಾಂತರಾಜು, ಮಾರುಕಟ್ಟೆಯಲ್ಲಿ ಜನರನ್ನು ನಿಯಂತ್ರಿಸುವಂತೆ ತರಕಾರಿ ಅಂಗಡಿಗಳವರ ಜೊತೆ ಹಲವು ಬಾರಿ ಸಭೆಗಳನ್ನು ನಡೆಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚಿಸಿದ್ದೆವು. ಹಾಗೂ ವಾಹನಗಳಿಗೆ ಪಾಸ್ ವಿತರಿಸಲಾಗಿತ್ತು. ಅದರಂತೆ ಎಪಿಎಂಸಿಯಲ್ಲಿ ಅಂಗಡಿಯವರು ಪಾಲಿಸುತ್ತಿದ್ದಾರೆ. ನಿಯಮ ಉಲ್ಲಂಘಿಸದಂತೆ ಎರಡು ಡ್ರೋಣ್ ಕ್ಯಾಮೆರಾಗಳನ್ನು ಬಿಡಲಾಗಿದೆ ಎಂದರು.
ಡಿಸಿ-ಎಸ್‌ಪಿ ಸಿಟಿ ರೌಂಡ್ಸ್: ಜಿಲ್ಲಾ ಧಿಕಾರಿ ಕೆ.ಬಿ.ಶಿವಕುಮಾರ್ ಮತ್ತು ಎಸ್‌ಪಿ ಕೆ.ಎಂ.ಶಾಂತರಾಜು ಭಾನುವಾರ ಬೆಳಗ್ಗೆ ಸಿಟಿ ರೌಂಡ್ಸ್ ಹಾಕಿದರು. ಈ ವೇಳೆ ಗುಂಪುಗುಂಪಾಗಿ ವಾಕಿಂಗ್ ಹೋಗುವವರು ಮತ್ತು ಆಟವಾಡುತ್ತಿದ್ದವರಿಗೆ ಬುದ್ಧಿ ಹೇಳಿದರು. ರಾಜೇಂದ್ರ ನಗರದ ಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ಷಟಲ್ ಆಡುವವರಿಗೆ ತಿಳಿ ಹೇಳಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, “ಎಷ್ಟು ಅಂತ ನಿಮಗೆ ಬುದ್ದಿ ಹೇಳಬೇಕು’ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ನೆಟ್, ಬ್ಯಾಟ್ ಹಾಗೂ ಇತರೆ ಆಟದ ವಸ್ತುಗಳನ್ನು ವಶಪಡಿಸಿಕೊಂಡರು. ಅದೇ ರೀತಿ, ಶಿವಮೂರ್ತಿ ವೃತ್ತದ ಬಳಿ ವಾಕಿಂಗ್ ಬರುವವರಿಗೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಸಿ ಮುಟ್ಟಿಸಿದರು.
ತರಕಾರಿ, ದಿನಸಿ ಖರೀದಿಗೆ ಬೆಳಗಿನಿಂದ ಮಧ್ಯಾಹ್ನದ ವರೆಗೆ ಅವಕಾಶ ನೀಡಿರುವುದರಿಂದ ಇದೇ ಅವಕಾಶ ಬಳಸಿಕೊಂಡು ಅನೇಕರು ವಾಕಿಂಗ್, ಕ್ರಿಕೆಟ್, ಷಟಲ್, ಸಿಟಿ ರೌಂಡ್ಸ್ ಹಾಕುವ ಪರಿಪಾಠ ರೂಢಿಸಿಕೊಂಡಿದ್ದಾರೆ. ಇದನ್ನೆಲ್ಲ ಅರಿತ ಜಿಲ್ಲಾಡಳಿತ ಎರಡು ದಿನಗಳಿಂದ ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದಿದೆ.