Advertisement

ಭದ್ರಾ ಜಲಾಶಯಕ್ಕೆ ಸಚಿವರ ಭೇಟಿ

06:58 PM May 15, 2020 | Naveen |

ಶಿವಮೊಗ್ಗ: ಮುಂದಿನ ಫೆಬ್ರವರಿ ಮಾಸಾಂತ್ಯದೊಳಗಾಗಿ ಭದ್ರಾ ಮೇಲ್ದಂಡೆ ಯೋಜನೆಯಡಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಲಾಗುವುದು ಎಂದು ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್‌ ಲ.ಜಾರಕಿಹೊಳಿ ಅವರು ಹೇಳಿದರು.

Advertisement

ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯಕ್ಕೆ ಬುಧವಾರ ಭೇಟಿ ನೀಡಿ ವೀಕ್ಷಣೆ ನಡೆಸಿದ ನಂತರ ಅವರು ಮಾಧ್ಯಮದವರಿಗೆ ವಿವರ ನೀಡಿದರು. ಈಗಾಗಲೇ ರಾಜ್ಯದ ಶೇ.60ಕ್ಕೂ ಹೆಚ್ಚಿನ ಜಲಾಶಯಗಳಿಗೆ ತಜ್ಞರೊಂದಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದು, ಅಲ್ಲಿನ ಸಣ್ಣ ಮತ್ತು ದೊಡ್ಡ ಪ್ರಮಾಣದ ಸಮಸ್ಯೆಗಳನ್ನು ಹಾಗೂ ಇಲಾಖೆಯ ಅಗತ್ಯತೆಗಳ ಬಗ್ಗೆ ಗಮನಿಸಲಾಗಿದೆ. ಈ ಸಮಸ್ಯೆಗಳಿಗೆ ಆದ್ಯತೆಯನುಸಾರ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದವರು ನುಡಿದರು.

ಭದ್ರಾ ಮೇಲ್ದಂಡೆ ಯೋಜನೆಯಡಿ ಕಾಲುವೆಗಳ ಮೂಲಕ ಚಿತ್ರದುರ್ಗ ಜಿಲ್ಲೆಯ ಸಹಸ್ರಾರು ಎಕರೆಗಳ ಅಚ್ಚುಕಟ್ಟು ಪ್ರದೇಶ ಹಾಗೂ 80ಕ್ಕೂ ಹೆಚ್ಚಿನ ಕೆರೆಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಪ್ರಗತಿಯಲ್ಲಿದ್ದು, ಮುಂದಿನ ಜೂನ್‌ ಮಾಹೆಯೊಳಗಾಗಿ ಪೂರ್ಣಗೊಳ್ಳುವ ವಿಶ್ವಾಸ ತಮಗಿರುವುದಾಗಿ ತಿಳಿಸಿದರು.

ಅಂತೆಯೇ ಶಿವಮೊಗ್ಗ ಜಿಲ್ಲೆಯಲ್ಲಿಯೂ ಅನೇಕ ನೀರಾವರಿ ಯೋಜನೆ ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ನೀರಿನ ಬಳಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ, ನೀರಿನ ಮಿತಬಳಕೆಯ ಕುರಿತು ಯೋಜನೆಯನ್ನು ಸಿದ್ಧಪಡಿಸಿ, ಅನುಷ್ಠಾನಕ್ಕೆ ತರುವ ಯೋಜನೆ ಪ್ರಗತಿಯಲ್ಲಿದೆ. ಪ್ರಸ್ತುತ ರಾಜ್ಯದಲ್ಲಿ ಹನಿ ನೀರಾವರಿಯನ್ನು ಪ್ರೋತ್ಸಾಹಿಸಲು ಉದ್ದೇಶಿಸಿಸಲಾಗಿದೆ. ಇದರಿಂದಾಗಿ ಅನಗತ್ಯವಾಗಿ ವ್ಯರ್ಥವಾಗಿ ಹರಿದು ಹೋಗುತ್ತಿರುವ ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ನೀರಿನ ಮಿತಬಳಕೆಯಿಂದಾಗಿ ಭಾರೀ ಪ್ರಮಾಣದ ನೀರನ್ನು ಉಳಿಸಿಕೊಂಡು ಅಗತ್ಯಕ್ಕೆ ಬಳಸಲು ಅವಕಾಶವಿದೆ. ಇದರಿಂದಾಗಿ ವೈಜ್ಞಾನಿಕ ಕ್ರಮವನ್ನು ಅನುಸರಿಸಿ ಬೆಳೆಯನ್ನು ಬೆಳೆದಲ್ಲಿ ಬೆಳೆಯ ಇಳುವರಿಯೂ ಹೆಚ್ಚಾಗಲಿದೆ. ಈ ಯೋಜನೆಯು ಹೆಚ್ಚು ಪ್ರಮಾಣದಲ್ಲಿ ಯಶಸ್ಸು ಕಾಣಲು ರೈತರು ಸಕ್ರಿಯವಾಗಿ ಪಾಲ್ಗೊಳ್ಳಬೇಕಾಗುವುದು ಎಂದವರು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next