ಶಿಡ್ಲಘಟ್ಟ: ತಾಲೂಕಿನಲ್ಲಿ ಆರು ತಿಂಗಳ ಅವಧಿಯೊಳಗೆ ಒಂದು ಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವ ಗುರಿ ಹೊಂದಲಾಗಿದೆ ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು. ನಗರದ ನೆಹರೂ ಕ್ರೀಡಾಂಗಣದಲ್ಲಿ ನಗರಸಭೆ, ಅರಣ್ಯ ಇಲಾಖೆ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಒಂದು ಲಕ್ಷ ಸಸಿಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಸ್ಥೆಗಳ ಸಹಕಾರ: ತಾಲೂಕಿನಲ್ಲಿ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸರಕಾರಿ ಶಾಲಾ ಕಾಲೇಜುಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಗುಂಡು ತೋಪು, ಸರಕಾರಿ ಜಾಗ ಮತ್ತಿತರರ ಪ್ರದೇಶಗಳಲ್ಲಿ ಸಸಿ ನೆಡಲಾಗುವುದು. ಆರು ತಿಂಗಳ ಅವಧಿಯಲ್ಲಿ ಲಕ್ಷ ಗಿಡವನ್ನು ನೆಟ್ಟು ಸಮಯಕ್ಕೆ ಸರಿಯಾಗಿ ನೀರು ಹಾಯಿಸಿ ಗಿಡಗಳನ್ನು ಸಂರಕ್ಷಣೆ ಮಾಡಲು ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.
ಹಸಿರು ನಗರ: ಶಿಡ್ಲಘಟ್ಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಶಶಿಧರ್ ಮುನಿಯಪ್ಪ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡುವುದನ್ನು ನಿಲ್ಲಿಸಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡಗಳನ್ನು ಬೆಳೆಸಬೇಕು. ಪರಿಸರ ಸಂರಕ್ಷಣೆ ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೇ ಈ ಪ್ರಕ್ರಿಯೆ ನಿರಂತರವಾಗಿ ಮುಂದುರಿಸಬೇಕು. ಪ್ರತಿಯೊಬ್ಬರೂ ಒಂದೂಂದು ಗಿಡವನ್ನು ನೆಟ್ಟು ಬೆಳೆಸಿ ರೇಷ್ಮೆ ನಗರವನ್ನು ಹಸಿರು ನಗರವನ್ನಾಗಿ ಪರಿವರ್ತಿಸಬೇಕೆಂದು ಮನವಿ ಮಾಡಿದರು.
ಜನಾಂದೋಲನ: ಮನುಷ್ಯನ ಸ್ವಾರ್ಥಕ್ಕಾಗಿ ಪರಿಸರ ನಾಶವಾಗುತ್ತಿದೆ. ನಮ್ಮ ಪೂರ್ವಜರು ಬೆಳೆಸಿರುವ ಮರಗಳನ್ನು ಕಡಿದು ಹಾಕುತ್ತಿರುವುದರಿಂದ ಶುದ್ಧಗಾಳಿ, ನೀರು ಮಾಯವಾಗುತ್ತಿದೆ. ಹೀಗಾಗಿ ಪರಿಸರ ಸಂರಕ್ಷಣೆಗೆ
ಜನಾಂದೋಲನ ನಡೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಬಿ.ಅಫರ್ ಪಾಷ, ಪೌರಾಯುಕ್ತ ಜಿ.ಎನ್.ಚಲಪತಿ, ವಲಯ ಅರಣ್ಯಾಧಿಕಾರಿ ಲಕ್ಷ್ಮೀ, ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಘಟಕದ ಅಮಜದ್ ನವಾಜ್, ಅಬ್ದುಲ್ ಗಫೂರ್, ರೀಲರ್ ವೆಲ್ಫೆರ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್‌ಖಾನ್, ರಾಜಕುಮಾರ್, ಎಸ್.ವಿ.ನಾಗರಾಜ್ ರಾವ್, ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿರಂಜನ್ ಇತರರು ಉಪಸ್ಥಿತರಿದ್ದರು.