ನವದೆಹಲಿ: ಭಾರತದ ಹಿರಿಯ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಪತ್ನಿ ಆಯೇಷಾ ಮುಖರ್ಜಿಯಿಂದ ವಿಚ್ಛೇದನ ಪಡೆದಿದ್ದಾರೆ. ದೆಹಲಿಯ ಪಟಿಯಾಲ ಕೌಟುಂಬಿಕ ನ್ಯಾಯಾಲಯ ಬುಧವಾರ ವಿಚ್ಛೇದನವನ್ನು ಅನುಮೋದಿಸಿದೆ.
ವಿಚಾರಣೆ ನಡೆಸಿದ ದೆಹಲಿಯ ಕೌಟುಂಬಿಕ ನ್ಯಾಯಾಲಯವು, ಶಿಖರ್ ಧವನ್ ಪತ್ನಿಯಿಂದ ಮಾನಸಿಕ ಹಿಂಸೆಗೆ ಗುರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟು ವಿಚ್ಛೇದನ ಮಂಜೂರು ಮಾಡಿದೆ.
ಶಿಖರ್ ಮತ್ತು ಆಯೇಷಾ 2012ರಲ್ಲಿ ಮದುವೆಯಾಗಿದ್ದು ಇಬ್ಬರಿಗೂ ಓರ್ವ ಮಗನಿದ್ದಾನೆ. ಅಲ್ಲದೆ ಆಯೇಷಾಳ ಎರಡನೇ ಮದುವೆಯಾಗಿತ್ತು. ಈ ನಡುವೆ ತನ್ನ ಏಕೈಕ ಪುತ್ರನಿಂದ ವರ್ಷಗಟ್ಟಲೆ ಬೇರ್ಪಟ್ಟು ಬದುಕುವಂತೆ ಒತ್ತಾಯಿಸಿ ಪತಿಗೆ ಆಯೇಷಾ ಮಾನಸಿಕವಾಗಿ ಒತ್ತಡ ಹಾಕಿದ್ದಳು ಇದರಿಂದ ಮಾನಸಿಕವಾಗಿ ನೊಂದಿದ್ದ ಧವನ್ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದರು.
ವಿಚ್ಛೇದನ ಅರ್ಜಿಯಲ್ಲಿ ಪತ್ನಿ ವಿರುದ್ಧ ಧವನ್ ಮಾಡಿರುವ ಎಲ್ಲಾ ಆರೋಪಗಳನ್ನು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ಒಪ್ಪಿಕೊಂಡಿದ್ದು, ತಮ್ಮ ಆದೇಶದಲ್ಲಿ, ಧವನ್ ಅವರ ಪತ್ನಿ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.
ಮಗನ ಖಾಯಂ ಕಸ್ಟಡಿಗೆ ಸಂಬಂಧಿಸಿದಂತೆ ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲವಾದರೂ ಧವನ್ ಗೆ ತನ್ನ ಮಗನನ್ನು ಭೇಟಿ ಮಾಡುವ ಅಥವಾ ವಿಡಿಯೋ ಕರೆ ಮಾಡಿ ಮಾತನಾಡುವ ಅವಕಾಶವನ್ನು ಕೋರ್ಟ್ ನೀಡಿದೆ ಅದರಂತೆ ಧವನ್ ಭಾರತ ಅಥವಾ ಆಸ್ಟ್ರೇಲಿಯಾದಲ್ಲೂ ತನ್ನ ಮಗನನ್ನು ಭೇಟಿಯಾಗಬಹುದು ಎಂದು ಹೇಳಿದೆ.
ಇದನ್ನೂ ಓದಿ: Tragedy: ಸಾಲ ಬಾಧೆ ತಾಳಲಾರದೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ರೈತ ಮಹಿಳೆ