Advertisement

ಮೆಲ್ಬರ್ನ್ ಕ್ರಿಕೆಟ್‌ ಗ್ರೌಂಡ್‌ನಿಂದ ಬಂದ ಸುದ್ದಿ…

10:50 AM Dec 22, 2018 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯ ಪ್ರವಾಸದಲ್ಲಿ ಭಾರತದ ಟೆಸ್ಟ್‌ ತಂಡಕ್ಕೆ ಎದುರಾಗಿರುವ ದೊಡ್ಡ ಸಮಸ್ಯೆಯೆಂದರೆ ಆರಂಭಿಕರದ್ದು. ಕೆ.ಎಲ್‌. ರಾಹುಲ್‌-ಮುರಳಿ ವಿಜಯ್‌ ಅವರ ಸಂಪೂರ್ಣ ವೈಫ‌ಲ್ಯ ಇಡೀ ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇವರಿಬ್ಬರೂ ಆಸ್ಟ್ರೇಲಿಯದ ಟ್ರ್ಯಾಕ್‌ಗಳಿಗೆ ಹೊಂದಿಕೊಳ್ಳದಿರುವುದು ಭಾರೀ ಸಮಸ್ಯೆಯಾಗಿ ಕಾಡಿದೆ. ಪ್ರತಿಭಾನ್ವಿತ ಓಪನರ್‌ ಪೃಥ್ವಿ ಶಾ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಈ ಸ್ಥಾನ ತುಂಬಲು ಕರೆ ಪಡೆದವರು ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌.

Advertisement

ಇದೇ ಸಂದರ್ಭ ತಂಡದಿಂದ ಬೇರ್ಪಟ್ಟಿರುವ ಎಡಗೈ ಆರಂಭಕಾರ ಶಿಖರ್‌ ಧವನ್‌ ಮತ್ತೆ ನೆನಪಾಗಿದ್ದಾರೆ. ಇದಕ್ಕೂ ಮಿಗಿಲಾಗಿ, “ಮುಂಬೈ ಮಿರರ್‌’ ಪ್ರಕಟಿಸಿರುವ ಅಚ್ಚರಿಯ ಸುದ್ದಿಯೊಂದರ ಪ್ರಕಾರ ಧವನ್‌ ಟೀಮ್‌ ಇಂಡಿಯಾ ತಂಗಿರುವ ಮೆಲ್ಬರ್ನ್ ಹೊಟೇಲ್‌ನಲ್ಲಿ ಕಿಟ್‌ ಸಮೇತ ಪ್ರತ್ಯಕ್ಷರಾಗಿದ್ದಾರೆ! ಹಾಗಾದರೆ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗುವುದೇ? ಇಂಥದೊಂದು ಕೌತುಕದ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

ಶಿಖರ್‌ ಧವನ್‌ ಅವರ ಪತ್ನಿ ಆಸ್ಟ್ರೇಲಿಯದವರು. ಹೀಗಾಗಿ ಕ್ರಿಕೆಟ್‌ ವಿರಾಮದಲ್ಲಿರುವ ಧವನ್‌ ಆಸ್ಟ್ರೇಲಿಯಕ್ಕೆ ಬಂದಿರಬಹುದು, ಹಾಗೆಯೇ ಮೆಲ್ಬರ್ನ್ಗೂ ಆಗಮಿಸಿರಬಹುದು ಎಂದು ತೀರ್ಮಾನಿಸಬಹುದಾಗಿದೆ. ಆದರೆ ಅವರು ಕಿಟ್‌ ಬ್ಯಾಗ್‌ ಸಮೇತ ಭಾರತ ತಂಡ ಉಳಿದಿರುವ ಮೆಲ್ಬರ್ನ್ ಹೊಟೇಲಿನಲ್ಲಿ ಕಾಣಿಸಿಕೊಂಡದ್ದು ಮಾತ್ರ ಅಚ್ಚರಿಯ ಸಂಗತಿಯೇ ಆಗಿದೆ. ಶಿಖರ್‌ ಧವನ್‌ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗುವುದೇ, ಇಲ್ಲವೇ ಎಂಬ ಕುರಿತು ಈ ವರೆಗೆ ಯಾವುದೇ ಅಧಿಕೃತ ಸುದ್ದಿ ಹೊರಬಿದ್ದಿಲ್ಲ. ಆದರೆ ಭಾರತದ ಓಪನಿಂಗ್‌ ವೈಫ‌ಲ್ಯವನ್ನು ಕಂಡಾಗ ಅನುಭವಿ ಧವನ್‌ ಒಳಬಂದರೆ ಅಚ್ಚರಿಯೇನೂ ಅಲ್ಲ. 

ಕೊಹ್ಲಿ ಬೆಂಬಲಕ್ಕೆ ಅಖ್ತರ್‌


ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಆಕ್ರಮಣಕಾರಿ ವರ್ತನೆಯಿಂದ ವಿರಾಟ್‌ ಕೊಹ್ಲಿ ಪರ-ವಿರೋಧ ಚರ್ಚೆಗೆ ಕಾರಣರಾಗಿದ್ದಾರೆ. ಕೆಲವರು ಕೊಹ್ಲಿಯದು ಕೆಟ್ಟ ವರ್ತನೆ ಎಂದರೆ, ಇನ್ನು ಕೆಲವರು ಅದರಲ್ಲೇನು ತಪ್ಪು ಎಂದು ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಪಾಕಿಸ್ಥಾನದ ಮಾಜಿ ವೇಗಿ ಶೋಯಿಬ್‌ ಅಖ್ತರ್‌, “ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ವರ್ತನೆ ಅವಿಭಾಜ್ಯ ಅಂಗ. ಕೊಹ್ಲಿ ನಡವಳಿಕೆಯಲ್ಲಿ ತಪ್ಪೇನಿಲ್ಲ’ ಎಂದಿದ್ದಾರೆ. ಅಖ್ತರ್‌ ಕೂಡ ತಮ್ಮ ಆಡುವ ದಿನಗಳಲ್ಲಿ ಆಕ್ರಮಣಕಾರಿ ವರ್ತನೆಯಿಂದ ಗಮನ ಸೆಳೆದಿದ್ದರು.

ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ಮೂರೇ ದಿನಗಳ ಅಭ್ಯಾಸ
ಬುಧವಾರದಿಂದ ಮೆಲ್ಬರ್ನ್ನಲ್ಲಿ ಆರಂಭವಾಗಲಿರುವ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯಕ್ಕಾಗಿ ಭಾರತ ತಂಡದ ಆಟಗಾರರು ಕೇವಲ ಮೂರೇ ದಿನಗಳ ಅಭ್ಯಾಸ ನಡೆಸಲಿದ್ದಾರೆ ಎಂಬುದಾಗಿ ಕೋಚ್‌ ರವಿ ಶಾಸ್ತ್ರಿ ಹೇಳಿದ್ದಾರೆ. 
ಟೀಮ್‌ ಇಂಡಿಯಾ ಕ್ರಿಕೆಟಿಗರು ಹೆಚ್ಚುವರಿ ವಿಶ್ರಾಂತಿಯಲ್ಲಿದ್ದು, ಡಿ. 23ರಿಂದ ನೆಟ್‌ ಪ್ರ್ಯಾಕ್ಟೀಸ್‌ ಆರಂಭಿಸಲಿದ್ದಾರೆ ಎಂದು ಶಾಸ್ತ್ರಿ  ಹೇಳಿದರು. 

Advertisement

ಪರ್ತ್‌ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ ತಂಡದ ಆಟಗಾರರು ಇದೇ ವಿಧಾನ ಅನುಸರಿಸಿ ಕೇವಲ 3 ದಿನಗಳ ಅಭ್ಯಾಸ ನಡೆಸಿದ್ದರು. “ಅಭ್ಯಾಸಕ್ಕೂ ಮುನ್ನ ಆಟಗಾರರಿಗೆ ವಿಶ್ರಾಂತಿ ಅಗತ್ಯವಿದೆ’ ಎಂಬುದು ಶಾಸ್ತ್ರಿ  ಥಿಯರಿ.
2ನೇ ಹಾಗೂ 3ನೇ ಟೆಸ್ಟ್‌ ಪಂದ್ಯಗಳ ನಡುವೆ ಸಾಕಷ್ಟು ದಿನಗಳ ಅಂತರವಿದ್ದರೂ ಆಟಗಾರರು ಇದನ್ನು ಅಭ್ಯಾಸಕ್ಕಾಗಿ ಬಳಸಿಕೊಂಡಿಲ್ಲ. ಇನ್ನೊಂದೆಡೆ ಆಸ್ಟ್ರೇಲಿಯದ ಕ್ರಿಕೆಟಿಗರು ಕ್ರಿಸ್‌ಮಸ್‌ ಸಡಗರದಲ್ಲಿದ್ದಾರೆ. ಇವರ ನೆಟ್‌ ಪ್ರ್ಯಾಕ್ಟೀಸ್‌ ಯಾವಾಗ ಆರಂಭವಾಗಲಿದೆ ಎಂಬುದು ತಿಳಿದು ಬಂದಿಲ್ಲ.

ಥಾಮ್ಸಮ್‌ ಜತೆ ಬುಮ್ರಾ ಹೋಲಿಕೆ


ಆಸ್ಟ್ರೇಲಿಯದ ಘಾತಕ ವೇಗಿಯಾಗಿದ್ದ ಗ್ಲೆನ್‌ ಮೆಕ್‌ಗ್ರಾತ್‌ ಕೆಲವು ದಿನಗಳ ಹಿಂದೆ ಭಾರತದ ಜಸ್‌ಪ್ರೀತ್‌ ಬುಮ್ರಾ ಅವರ ಬೌಲಿಂಗನ್ನು ವಿಶೇಷವಾಗಿ ಪ್ರಶಂಸಿಸಿದ್ದರು. ಇದೀಗ ಕಾಂಗರೂ ನಾಡಿನ ಮತ್ತೋರ್ವ ಲೆಜೆಂಡ್ರಿ ಬೌಲರ್‌ ಡೆನ್ನಿಸ್‌ ಲಿಲ್ಲಿ ಸರದಿ. ಅವರು ಬುಮ್ರಾರನ್ನು ತಮ್ಮ ಗತಕಾಲದ ಬೌಲಿಂಗ್‌ ಜತೆಗಾರ ಜೆಫ್ ಥಾಮ್ಸನ್‌ಗೆ ಹೋಲಿಸಿದ್ದಾರೆ! “ಜಸ್‌ಪ್ರೀತ್‌ ಬುಮ್ರಾ ಬೌಲಿಂಗ್‌ ಬಹಳ ಕುತೂಹಲ ಹುಟ್ಟಿಸುತ್ತದೆ. ಸಣ್ಣ ರನ್‌ಅಪ್‌ನಿಂದ ಓಡಿ ಬರುವ ಅವರ “ಸ್ಟ್ರೇಟ್‌ ಆರ್ಮ್’ ಮೂಲಕ ಚೆಂಡನ್ನು ಎಸೆಯುತ್ತಾರೆ. ಇದು ಟೆಕ್ಸ್ಟ್ ಬುಕ್‌ ಶೈಲಿಯಲ್ಲ. ಆದರೆ ಹೆಚ್ಚು ಪರಿಣಾಮಕಾರಿ. ಇತರ ಪೇಸ್‌ ಬೌಲರ್‌ಗಳಿಗಿಂತ ಬುಮ್ರಾ ಶೈಲಿ ಭಿನ್ನ. ನನ್ನ ಕಾಲದ ವೇಗಿ, ನನ್ನ ಜತೆಗಾರನಾಗಿದ್ದ ಜೆಫ್ ಥಾಮ್ಸನ್‌ ಕೂಡ ಅಂದು ಎಲ್ಲರಿಗಿಂತ ಭಿನ್ನವಾಗಿದ್ದರು’ ಎಂಬುದಾಗಿ 69ರ ಹರೆಯದ ಲಿಲ್ಲಿ ಹೇಳಿದರು.

ಡೆನ್ನಿಸ್‌ ಲಿಲ್ಲಿ-ಜೆಫ್ ಥಾಮ್ಸನ್‌ ಜೋಡಿ 1970-80ರ ಅವಧಿಯಲ್ಲಿ ಎದುರಾಳಿಗಳನ್ನು ದಿಕ್ಕೆಡಿಸಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇವರಿಬ್ಬರು ಸೇರಿ ಉರುಳಿಸಿದ ವಿಕೆಟ್‌ಗಳ ಸಂಖ್ಯೆ ಭರ್ತಿ 555. ಲಿಲ್ಲಿ ಅವರ 355 ವಿಕೆಟ್‌ ಆ ಕಾಲದಲ್ಲಿ ವಿಶ್ವದಾಖಲೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next