ಶಿಕಾರಿಪುರ: ಪ್ರತಿಯೊಬ್ಬ ಅಧಿಕಾರಿ ನಿತ್ಯ ಬೆಳಗ್ಗೆಯೇ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಒಂದು ಸುತ್ತಿನ ಭೇಟಿ ನೀಡುವಂತಾಗಬೇಕು. ಆಗ ಕೆಲಸದ ಗುಣಮಟ್ಟವೂ ಹೆಚ್ಚುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಅಧಿಕಾರಿಗಳು, ಗುತ್ತಿಗೆದಾರರ ಸಭೆ ನಡೆಸಿ ಮಾತನಾಡಿದ ಅವರು, ಬಿಎಸ್‌ವೈ ಪುರಸಭೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬೆಳಗ್ಗೆ 6ಕ್ಕೆ ಪಟ್ಟಣದ ಎಲ್ಲೆಡೆ ಸೈಕಲ್‌ನಲ್ಲಿ ಸಂಚರಿಸಿ ಸ್ವತ್ಛತೆ, ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆಗೆ ಮರಳಿ ಸ್ನಾನ, ಪೂಜೆ ನಂತರ ಎಂದಿನಂತೆ ಕಚೇರಿ ಸಮಯಕ್ಕೆ ಪುನಃ ತೆರಳುತ್ತಿದ್ದರು. ಅಂತಹ ಆದರ್ಶವನ್ನು ಹಿರಿಯ ಅಧಿಕಾರಿಗಳು ರೂಢಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದರು.
ನೀರಾವರಿ, ಪಿಡಬ್ಲ್ಯೂಡಿ, ಜಿಪಂ ಹಿರಿಯ ಅಧಿಕಾರಿಗಳಿಗೆ ಕಚೇರಿ ಕೆಲಸ ಹೆಚ್ಚಿರುವುದಿಲ್ಲ. ಅವರು ನಿತ್ಯ ಸ್ನಾನಕ್ಕೂ ಮುನ್ನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುವ ಅಭ್ಯಾಸ ರೂಢಿಸಿಕೊಂಡಲ್ಲಿ ಉತ್ತಮ ಅ ಧಿಕಾರಿಯಾಗಿ ಹೆಸರು ಪಡೆಯಬಹುದು. ಜೊತೆಗೆ ಜನರಲ್ಲೂ ಆಡಳಿತ ವ್ಯವಸ್ಥೆ ಕುರಿತು ನಂಬಿಕೆ ಬರುತ್ತದೆ. ಗುತ್ತಿಗೆದಾರರು ಟೆಂಡರ್ ಪಡೆದು ಅಲ್ಪ ಲಾಭಕ್ಕೆ ಬೇರೆಯವರಿಗೆ ಕೆಲಸ ನೀಡುವುದು. ಅವರು ಮತ್ತಷ್ಟು ಲಾಭಕ್ಕೆ ಮತ್ತೂಬ್ಬರಿಗೆ ನೀಡುವುದು ಸರಿಯಲ್ಲ. ಅಂತಹ ಪದ್ಧತಿ ಕಾಮಗಾರಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಟೆಂಡರ್ ಪಡೆದವರು ಕಾಮಗಾರಿ ನಡೆಸುವುದಕ್ಕೆ ಅಗತ್ಯ ಯಂತ್ರ, ಮಾನವ ಸಂಪನ್ಮೂಲ ಹೊಂದಿಲ್ಲ ಎಂದು ತಿಳಿದು ಬಂದಲ್ಲಿ ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸುವ ಕೆಲಸಕ್ಕೆ ಸರಕಾರಕ್ಕೆ ಶಿಫಾರಸ್ಸು ಮಾಡಿರಿ. ಕ್ಷೇತ್ರದಲ್ಲಿ ಹೆಚ್ಚು ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಕಳಪೆ ಆದಲ್ಲಿ ಮುಖ್ಯಮಂತ್ರಿಗಳಿಗೆ ಕೆಟ್ಟ ಹೆಸರು ಬರುತ್ತದೆ. ಹಾಗೆ ಆಗದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಕಾಮಗಾರಿ ಪ್ರಗತಿ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಯಾವುದೇ ಸ್ಪಷ್ಟ ಉತ್ತರ ಸಿಗುವುದಿಲ್ಲ. ಕಡಿಮೆ ಕೆಲಸ ಆಗಿದ್ದರೂ ಮುಗಿಯುವ ಹಂತಕ್ಕೆ ಬಂದಿದೆ. ಕಾಮಗಾರಿ ಚೆನ್ನಾಗಿ ಆಗಿದೆ ಎನ್ನುವ ಉತ್ತರ ಬರುತ್ತದೆ. ಆದರೆ ವಾಸ್ತವದಲ್ಲಿ ಕಾಮಗಾರಿ ಆರಂಭಗೊಂಡಿರುವುದಿಲ್ಲ ಎಂದು ಜನತೆ ದೂರು ನೀಡಿರುತ್ತಾರೆ. ಹೀಗಾಗದಂತೆ ಮಾಡುವುದಕ್ಕೆ ಪ್ರತಿಯೊಬ್ಬ ಅಧಿಕಾರಿ, ಗುತ್ತಿಗೆದಾರರು ತಾವು ಮಾಡುವ ಕೆಲಸದ ಸ್ಥಳಕ್ಕೆ ನಿತ್ಯ ಒಮ್ಮೆಯಾದರೂ ಭೇಟಿ ನೀಡಬೇಕು. ಅಲ್ಲಿನ ಪ್ರಗತಿ ಕುರಿತು ಡೈರಿ ಬರೆಯಬೇಕು. ಭೇಟಿ ನೀಡಿದಾಗಿನ ಜನರ ಹೆಸರನ್ನೂ ಪ್ರಸ್ತಾಪ ಮಾಡಿರಬೇಕು. ಆಗ ನಿಖರವಾದ ಮಾಹಿತಿ ಸಿಗುತ್ತದೆ. ಕೆಲಸದಲ್ಲಿ ಶಿಸ್ತು ಅಳವಡಿಸಿಕೊಂಡಲ್ಲಿ ವೈಯಕ್ತಿಕ ವ್ಯಕ್ತಿತ್ವ ಬೆಳೆಯುವ ಜೊತೆ ಉತ್ತಮ ಹೆಸರೂ ದೊರೆಯುತ್ತದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು. ಅದು ಇಂದಿನಿಂದಲೇ ಪ್ರಾರಂಭವಾಗಲಿ ಎನ್ನುವ ಸಲಹೆ ನೀಡಿದರು.
ಕಾಮಗಾರಿಗೆ ಸರಕಾರ ಅಂದಾಜು ವೆಚ್ಚ ನಿಗದಿಪಡಿಸುವಾಗ ಗುತ್ತಿಗೆದಾರರ ಲಾಭವೆಂದು ಶೇ.10 ನಿಗದಿಪಡಿಸಿರುತ್ತದೆ. ಆದರೆ ಗುತ್ತಿಗೆದಾರರು ಶೇ.20-30ರಷ್ಟು ಕಡಿಮೆ ದರ ನಮೂದಿಸುತ್ತಾರೆ. ನಂತರ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ಬಿಡುತ್ತಾರೆ. ಅದು ಪೂರ್ಣಗೊಳ್ಳುವುದಕ್ಕೆ ಮತ್ತಷ್ಟು ಹಣ, ಸಮಯ ವ್ಯಯವಾಗುತ್ತದೆ. ಗುತ್ತಿಗೆದಾರರು ಪರಸ್ಪರ ಮಾತನಾಡಿಕೊಂಡು, ಅಣ್ಣ- ತಮ್ಮಂದಿರಂತೆ ಕೆಲಸ ಮಾಡಬೇಕು. ಪ್ರತಿಯೊಬ್ಬರೂ ಕಾಮಗಾರಿ ಗುಣಮಟ್ಟ ಕೆಡದಂತೆ ಎಚ್ಚರಿಕೆ ವಹಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ನಿವೃತ್ತ ಅಭಿಯಂತರರಾದ ರಮೇಶ್, ನಾಗರಾಜಯ್ಯ, ಪಂಚಾಯತ್‌ರಾಜ್ ಇಲಾಖೆ ಅಭಿಯಂತರ ಪರಶುರಾಮ್, ಲೋಕೋಪಯೋಗಿ ಇಲಾಖೆ ಅಧಿಕಾರಿ ಕುಬೇರ್ ಬಾಣದ್, ಸಣ್ಣ ನೀರಾವರಿ, ದೊಡ್ಡ ನೀರಾವರಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಇದ್ದರು.