Advertisement

ಪರೋಪಕಾರಂ ತಂಡದಿಂದ ಮಾದರಿ ಕಾರ್ಯ!

01:46 PM Nov 13, 2019 | Naveen |

„ರಘು ಶಿಕಾರಿ
ಶಿಕಾರಿಪುರ:
ಭಾನುವಾರ ಬಂತು ಎಂದರೆ ಸಾಕು ಸ್ವಚ್ಛತೆಗೆ ಇಳಿಯುತ್ತದೆ ಈ ತಂಡ. ಪಟ್ಟಣದಲ್ಲಿ ಸ್ವಚ್ಛತೆಗೆ ಮಾದರಿಯಾದ ಪರ ಉಪಕಾರಿ ಈ ತಂಡ ಪರೋಪಕಾರಂ..!

Advertisement

ಸ್ವಚ್ಛತೆ ಪ್ರತಿಯೊಬ್ಬರ ಧ್ಯೇಯ. ಆದರೆ ಅದರ ಅದನ್ನು ಅನುಷ್ಠಾನ ಮಾಡುವುದು ತುಂಬಾ ಕಷ್ಟ. ಸ್ವಾರ್ಥ ಪ್ರಪಂಚದಲ್ಲಿ ಜನರು ತಮ್ಮ ಮನೆಯ ಸ್ವಚ್ಛತೆಗೆ ನೀಡುವ ಪ್ರಾಶಸ್ತ್ಯವನ್ನು ಸರ್ಕಾರಿ ಕಚೇರಿಗಳಿಗೆ ನೀಡುವುದಿಲ್ಲ. ಸರ್ಕಾರಿ ಕಚೇರಿಗಳನ್ನು ಸ್ವಚ್ಛಗೊಳಿಸುವವರು ಯಾರು. ಜನರಿಗೆ ಸ್ವಚ್ಛತೆಯ ಪಾಠ ಹೇಳುವುದು ಯಾರು? ಎಲ್ಲರೂ ಹೇಳುವವರಾದರೆ ಸ್ವತ್ಛತೆ ಮಾಡುವವರು ಯಾರು ಎಂಬುದಕ್ಕೆ ಈ ಪರೋಪಕಾರಂ ತಂಡ ಇಡೀ ತಾಲೂಕಿಗೆ ಮಾದರಿಯಾಗಿದೆ.

ಸ್ವಚ್ಛತೆ, ಪರಿಸರ, ಜನ ಜಾಗೃತಿ ಈ ಮೂರು ಅಂಶಗಳನ್ನು ಮುಖ್ಯ ಗುರಿಯಾಗಿಸಿಕೊಂಡು ಪ್ರತಿ ಭಾನುವಾರ 70-80 ಜನರು ಸೇರಿ ಸ್ವತ್ಛತಾ ಕಾರ್ಯ ಕೈಗೊಳ್ಳುತ್ತಾರೆ. ಈ ತಂಡದಲ್ಲಿ ಯಾವುದೇ ಅಧಿಕಾರಿ, ಬಡವ, ಬಲ್ಲಿದ, ಜಾತಿ, ಮತ- ಪಂಥಗಳಿಲ್ಲದೇ ಯಾರು ಬೇಕಾದರೂ ಬಂದು ಸೇವಾ ಕಾರ್ಯವನ್ನು ಮಾಡಬಹುದು ಎಂದು ತಂಡದವರು ಕರೆ ನೀಡಿದ್ದಾರೆ.

ಶಿಕಾರಿಪುರದ ಪರೋಪಕಾರಂ ತಂಡ ಇದುವರೆಗೂ ತಾಲೂಕು ಕಚೇರಿ, ಬಿಇಒ ಕಚೇರಿ, ಕೆಇಬಿ ಕಚೇರಿ, ದತ್ತಮಂದಿರ, ರಂಗಮಂದಿರ ಹೀಗೆ ಈವರೆಗೂ ಅನೇಕ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿದೆ. ಈ ತಂಡ ಜನರಲ್ಲಿ ಯುವ ಜನತೆಯಲ್ಲಿ ಸ್ವತ್ಛತೆಯ ಜೊತೆ ನಮ್ಮ ಊರನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ ಎಂಬ ಪಾಠವನ್ನು ಹೇಳುತ್ತದೆ. ಸ್ವಚ್ಛತೆ ಮಾಡಿ ಇಡೀ ತಾಲೂಕಿನಲ್ಲಿಯೇ ಸ್ವಚ್ಛತೆ ಎಂದರೆ ಪರೋಪಕಾರಂ ತಂಡ ಎನ್ನುವಷ್ಟರ ಮಟ್ಟಿಗೆ ಕೀರ್ತಿಗೆ ಪಾತ್ರವಾಗಿದೆ.

ಈ ತಂಡದಲ್ಲಿ ಬಹುತೇಕ ಸರ್ಕಾರಿ ನೌಕರರು ಮತ್ತು ಉದ್ಯಮಿಗಳು, ರೈತರು, ಕೂಲಿ ಕಾರ್ಮಿಕರು, ಜನಪ್ರತಿನಿಧಿಗಳು, ಶಾಲಾ ಮಕ್ಕಳು, ವಿದ್ಯಾರ್ಥಿಗಳು, ಮಹಿಳೆಯರು ಎಲ್ಲರೂ ಕೂಡ ಭಾಗವಹಿಸುತ್ತಾರೆ.

Advertisement

ವಾಟ್ಸ್‌ ಆ್ಯಪ್‌ ಮೂಲಕವೇ ಸೇರುತ್ತಾರೆ ಜನ: ಈಗಾಗಲೇ 16 ಆಯ್ದ ಸ್ಥಳಗಳನ್ನು ಸ್ವತ್ಛಗೊಳ್ಳಿಸಿದ್ದು ಪ್ರತಿ ಭಾನುವಾರ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಂಡು ಮುಂಚಿತವಾಗಿ ಸ್ವಚ್ಛತೆಗೆ ಬೇಕಾದ ಸಾಮಗ್ರಿಗಳನ್ನು ತಯಾರಿ ಮಾಡಿಕೊಳ್ಳುತ್ತಾರೆ. ಈ ತಂಡದ ವಿಶೇಷ ಎಂದರೆ ಯಾರಿಗೂ ಕೂಡ ಕರೆ ಮಾಡುವುದಿಲ್ಲ. ಸ್ವ- ಇಚ್ಛೆಯಿಂದ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಮೇಸೇಜ್‌ ಓದಿಕೊಂಡು ಸ್ವತ್ಛತೆ ಕಾರ್ಯದಲ್ಲಿ ಭಾಗವಹಿಸುತ್ತಾರೆ.

ವೈಯಕ್ತಿಕ ಹೆಸರು ಬಳಸುವಂತಿಲ್ಲ: ಸ್ವಚ್ಛತೆ ಕಾರ್ಯಕ್ರಮಕ್ಕೆ ಆಗಮಿಸುವ ಯಾವುದೇ ವ್ಯಕ್ತಿಯೂ ಸಮಾಜದಲ್ಲಿ ಎಷ್ಟೇ ಪ್ರಭಾವಿ ಆಗಿದ್ದರೂ ತಮ್ಮ ಹೆಸರನ್ನು ಬಳಸಿಕೊಂಡು ಸ್ವಚ್ಛತೆಗೆ ಭಾಗವಹಿಸುವಂತಿಲ್ಲ ಮತ್ತು ಪತ್ರಿಕೆಗಳಲ್ಲಿ ಕೂಡ ಹೆಸರನ್ನು ನೀಡುವಂತಿಲ್ಲ. ಏಕೆಂದರೆ ಸಂಘಟನೆ ಭದ್ರವಾಗಿರುವ ಉದ್ದೇಶದಿಂದ ಈ ನಿಯಮ ಪಾಲಿಸಲಾಗುತ್ತಿದೆ. ಅನೇಕ ಜನಪ್ರತಿನಿಧಿಗಳು ಸರ್ಕಾರಿ ನೌಕರರು, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳಿದ್ದು ವ್ಯಕ್ತಿ ಪ್ರತಿಷ್ಠೆ ಅಡ್ಡ ಬರಬಾರದು ಎಂದು ಈ ನಿಯಮ ಹಾಕಿಕೊಂಡಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಕ್ಕೂ ಈ ಸ್ವಚ್ಛತಾ ಅಭಿಯಾನ ಅಯೋಜನೆ ಮಾಡಲಾಗುವುದು ಮತ್ತು ಶಿಕಾರಿಪುರದ ಪ್ರತಿ ವಾರ್ಡ್‌ಗಳಲ್ಲೂ ಸ್ಥಳೀಯ ವಾಸಿಗಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿ ತಮ್ಮ ಬೀದಿ ರಸ್ತೆಗಳನ್ನು ತಾವೇ ಸ್ವಚ್ಛಗೊಳಿಸಿಕೊಳ್ಳುವಂತೆ ಉತ್ತೇಜನ ನೀಡಲಾಗುವುದು ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.

ಸ್ವಚ್ಛತೆಗೆ ಜೊತೆಗೆ ಮನರಂಜನೆ: ಪ್ರತಿವಾರ ಸ್ವತ್ಛತೆ ಮಾತ್ರವಲ್ಲ. ಅದರ ಜೊತೆ ಮನರಂಜನೆ, ಕ್ರೀಡೆ ಕೂಡ ನಡೆಸಬೇಕು. ಸ್ವಚ್ಛತೆಯ ನಂತರ ಉಪಾ‌ಹಾರ ಸೇವಿಸಿ ಕ್ರೀಡೆ ಮನರಂಜನೆ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಎಷ್ಟೋ ಜನರು ತಮ್ಮ ಕೆಲಸದ ಒತ್ತಡದಲ್ಲಿ ತಮ್ಮ ಬಾಲ್ಯದ ಕ್ರೀಡೆ, ಮನರಂಜನೆಗಳನ್ನು ಮರೆತಿರುತ್ತಾರೆ. ಅದನ್ನು ಮತ್ತೆ ನೆನಪಿಸಿ ಸಂತೋಷವನ್ನು ಹಂಚುವ ಒಂದು ಪ್ರಯತ್ನ ಇದರ ಉದ್ದೇಶವಾಗಿದೆ. ಒಟ್ಟಿನಲ್ಲಿ ಪಟ್ಟಣದಲ್ಲಿ ಸ್ವಚ್ಛತೆಯ ಬಗ್ಗೆ ಪರಿಸರದ ಬಗ್ಗೆ ಕಾಳಜಿ ಹೊಂದಿ ಯಾವುದೇ ಅಪೇಕ್ಷೆ ಇಲ್ಲದೇ ನಿಸ್ವಾರ್ಥ ಸೇವೆ ಮಾಡುತ್ತಿರುವ ತಂಡ ಇನ್ನೂ ಹೆಚ್ಚಾಗಿ ಬೆಳೆಯಲಿ. ಇನ್ನೂ ಸಾವಿರಾರು ಸಂಖ್ಯೆಯಲ್ಲಿ ಜನರು ಸ್ವತ್ಛತೆಯ ಬಗ್ಗೆ ಅರಿತು ಸೇವೆ ಸಲ್ಲಿಸಲಿ ಎಂಬುದೇ ಆಶಯ.

Advertisement

Udayavani is now on Telegram. Click here to join our channel and stay updated with the latest news.

Next