Advertisement

ಶಿಡ್ಲಘಟ್ಟ : ಅವಧಿ ಮುಗಿದ ಮಾತ್ರೆಗಳು ರೋಗಿಗಳಿಗೆ…ಈ ಆಸ್ಪತ್ರೆ ಸುಧಾರಿಸಲು ದೇವರೇ ಬರಬೇಕು

08:07 PM May 15, 2022 | Team Udayavani |

ಶಿಡ್ಲಘಟ್ಟ : ಹೆಸರಿಗೊಂದು ಸರ್ಕಾರಿ ಆಸ್ಪತ್ರೆ ಇಲ್ಲಿ ಅವಧಿ ಮೀರಿದ ಗುಳಿಗೆಗಳು, ಆಗತಾನೆ ಸ್ವಚ್ಛಗೊಳಿಸಿದ ಶೌಚಾಲಯ, ಆರೋಗ್ಯ ಮೇಳದ ನೆಪದಲ್ಲಿ ಜಾಗ ಖಾಲಿ ಮಾಡಿದ ವೈದ್ಯರು.
ಹೌದು, ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಶಶಿಧರ್‍ಶಟ್ಟಿ ಅವರು ಶಿಡ್ಲಘಟ್ಟ ನಗರದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅವ್ಯವಸ್ಥೆಗಳನ್ನು ಕಣ್ಣಾರೆ ಕಂಡು ಆಸ್ಪತ್ರೆಯ ವೈದ್ಯರು ಮತ್ತು ದಾದಿಯರನ್ನು ತರಾಟೆಗೆ ತೆಗೆದುಕೊಂಡು ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ ಆಸ್ಪತ್ರೆಗಳನ್ನು ಹೀಗೆ ನಿರ್ವಹಣೆ ಮಾಡುವುದ ಎಂದು ಪ್ರಶ್ನಿಸಿ ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬಡವರು ಬರುತ್ತಾರೆ ನಿಮ್ಮ ಕೈಮುಗಿದು ಕೇಳಿಕೊಳ್ಳುತ್ತೇನೆ ಬಡವರಿಗೆ ಉತ್ತಮ ಚಿಕಿತ್ಸೆ ನೀಡಿ ಸಾಧ್ಯವಾಗಿಲ್ಲ ಅಂದರೆ ರಾಜಿನಾಮೆ ಕೊಟ್ಟು ಮನೆಗಳಿಗೆ ತೆರಳಿ ಎಂದು ಖಡಕ್ಕಾಗಿ ಸೂಚಿಸಿದರು.

Advertisement

ಮೊದಲಿಗೆ ಆಸ್ಪತ್ರೆಗೆ ಭೇಟಿ ನೀಡಿದ ನ್ಯಾಯಾಧೀಶರು ಮಹಿಳಾ ಮತ್ತು ಪುರುಷರ ಹಾಗೂ ಬಾಣಂತಿಯರ ವಾರ್ಡ್‍ಗೆ ಭೇಟಿ ನೀಡಿ ಚಿಕಿತ್ಸೆಗಾಗಿ ದಾಖಲಾಗಿರುವ ರೋಗಿಗಳಿಗೆ ವೈದ್ಯರು ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು ಕೆಲವರು ಚಿಕಿತ್ಸೆ ನೀಡುತ್ತಿದ್ದಾರೆ ಎಂದಾಗ ಸುಳ್ಳು ಹೇಳುತ್ತಿದ್ದೀರ ಎಂದು ಮರು ಪ್ರಶ್ನೆ ಹಾಕಿ ವ್ಯವಸ್ಥೆಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ವಾರ್ಡ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಾಸಿಗೆಗಳ ವ್ಯವಸ್ಥೆಯನ್ನು ವೀಕ್ಷಿಸಿ ಕೆಂಡಕಾರಿದರು ನಂತರ ರೋಗಿಗಳಿಗಾಗಿ ಮೀಸಲಾಗಿರುವ ಶೌಚಾಲಯಕ್ಕೆ ತೆರಳಿದ ನ್ಯಾಯಾಮೂರ್ತಿಗಳು ಆಗತಾನೇ ಸ್ವಚ್ಚಗೊಳಿಸಿರುವುದನ್ನು ಕಂಡು ನಾವು ಬರುತ್ತಿದ್ದೇವೆ ಎಂದು ಮಾಹಿತಿಯನ್ನು ಅರಿತು ಸ್ವಚ್ಚಗೊಳಿಸಿದ್ದೀರಾ ಎಂದು ಪ್ರಶ್ನಿಸಿ ಶೌಚಾಲಯದಲ್ಲಿ ಅನೈರ್ಮಲ್ಯವನ್ನು ಕಂಡು ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ : ಶೀಘ್ರದಲ್ಲಿ ‘ಕೆಜಿಎಫ್ 3’ ಚಿತ್ರೀಕರಣ ಪ್ರಾರಂಭಿಸುವುದಿಲ್ಲ: ಕಾರ್ಯಕಾರಿ ನಿರ್ಮಾಪಕ

ಅವಧಿ ಮೀರಿದ ಗುಳಿಗೆಗಳು: ಆಸ್ಪತ್ರೆಯಲ್ಲಿ ವಾರ್ಡ್‍ನಲ್ಲಿ ರೋಗಿಗಳಿಗೆ ತುರ್ತಾಗಿ ನೀಡಲು ಇಟ್ಟುಕೊಂಡಿದ್ದ ಗುಳಿಗೆಗಳನ್ನು (ಮಾತ್ರೆಗಳನ್ನು) ಪರಿಶೀಲನೆ ಮಾಡುವಾಗ ಅವಧಿ ಮೀರಿದ ಗುಳಿಗೆಗಳನ್ನು ಕಂಡು ಅತಂಕ ವ್ಯಕ್ತಪಡಿಸಿದರು ಆಸ್ಪತ್ರೆ ಒಂದು ರೀತಿಯ ಬಡವರ ಪಾಲಿಗೆ ದೇವಸ್ಥಾನ ಇಂತಹ ಜಾಗದಲ್ಲಿ ನಿಮ್ಮಿಂದ ಈ ರೀತಿ ಪ್ರಮಾದವಾಗುವುದು ಆಕ್ಷಮ್ಯ ಅಪರಾಧವೆಂದು ಅಸಮಾಧಾನ ವ್ಯಕ್ತಪಡಿಸಿ ನಿಮ್ಮ ಕುಟುಂಬದವರಿಗೆ ಅವಧಿ ಮೀರಿದ ಮಾತ್ರೆಗಳನ್ನು ನೀಡುತ್ತಿದ್ದರಾ ಎಂದು ಪ್ರಶ್ನಿಸಿ ನಿಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಳ್ಳಿ ಇಲ್ಲದಿದ್ದ ಪಕ್ಷದಲ್ಲಿ ತಮ್ಮ ವಿರುದ್ದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಎಚ್ಚರಿಸಿದರು.

Advertisement

ಜಿಲ್ಲಾ ನ್ಯಾಯಾಧೀಶರಿಗೆ ಸೂಚನೆ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆ ಸ್ಥಿತಿ ನಿಜವಾಗಲು ಚಿಂತಾಜನಕವಾಗಿದೆ ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ 15 ಜನ ವೈದ್ಯರು ಕೆಲಸ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಆರೋಗ್ಯ ಮೇಳಕ್ಕೆ ಮೂರು ಜನ ವೈದ್ಯರು ತೆರಳಿದ್ದಾರೆ ಆದರೆ ಇಬ್ಬರು ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ ದಂತ, ಆಯೂಷ್ ಮತ್ತು ಡಯಾಲಿಸಿಸ್ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ ತಾವು ಸಕ್ರೀಯವಾಗಿ ಇದ್ದು ಕಾಲಕಾಲಕ್ಕೆ ನಮಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಮೂರ್ತಿ ಲಕ್ಷ್ಮೀಕಾಂತ್ ಮಿಸ್ಕೀನ್ ಅವರಿಗೆ ಸೂಚನೆ ನೀಡಿದರು.

ಸಾರ್ವಜನಿಕ ಆಸ್ಪತ್ರೆಯನ್ನು ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನ್ಯಾಯಾಧೀಶರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಸ್ಪತ್ರೆ ಮತ್ತು ಕಾರಾಗೃಹಗಳಲ್ಲಿ ಅವ್ಯವಸ್ಥೆಗಳ ಆಗರ ಆಗಿರುವ ಕುರಿತು ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಇವತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆ ಮತ್ತು ಅಲ್ಲಿನ ಕಾರಾಗೃಹ ಹಾಗು ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅವ್ಯವಸ್ಥೆಗಳನ್ನು ಕಣ್ಣಾರೆ ಕಂಡಿದ್ದೇನೆ ಚಿಂತಾಮಣಿ ಆಸ್ಪತ್ರೆ ಸ್ಥಿತಿ ಮಾತ್ರ ಶೋಚನೀಯವಾಗಿದೆ ಕಾರಾಗೃಹದಲ್ಲಿ ಸ್ವಚ್ಚತೆ ಇಲ್ಲ ಅಲ್ಲಿನ ಖೈದಿಗಳಿಗೆ ನೀಡುತ್ತಿರುವ ಆಹಾರ ತೃಪ್ತಿದಾಯಕವಾಗಿಲ್ಲ ಇನ್ನು ಶಿಡ್ಲಘಟ್ಟ ಆಸ್ಪತ್ರೆಯಲ್ಲಿ ಅವಧಿ ಮೀರಿದ ಗುಳಿಗೆಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ ಇಲ್ಲಿಯೂ ಸಹ ಸ್ವಚ್ಚತೆ ಮರೀಚಿಕೆಯಾಗಿದೆ ಬಹುತೇಕ ವೈದ್ಯರು ಆರೋಗ್ಯ ಮೇಳದ ನೆಪದಲ್ಲಿ ಗೈರು ಹಾಜರಾಗಿದ್ದಾರೆ ಇವೆಲ್ಲಾ ಅವ್ಯವಸ್ಥೆಗಳ ಕುರಿತು ಸರ್ಕಾರಕ್ಕೆ ಸಮಗ್ರವಾಗಿ ವರದಿ ಸಲ್ಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಲಕ್ಷ್ಮೀಕಾಂತ್ ಮಿಸ್ಕೀನ್ ಹಾಗೂ ಆಸ್ಪತ್ರೆಯ ಇಬ್ಬರು ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next