ಬೆಳಗಾವಿ: ಜಿಲ್ಲೆಗೆ ಹೊಸದಾಗಿ ಮಂಜೂರಾಗಿರುವ ಗಂಟಲು ದ್ರವ ಮಾದರಿ ಪರೀಕ್ಷಾ ಪ್ರಯೋಗಾಲಯ ಕೇಂದ್ರದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಶನಿವಾರ ಭೆಟ್ಟಿ ನೀಡಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.
ನೆಹರು ನಗರದ ಕೇಂದ್ರ ಸರಕಾರದ ಆರೋಗ್ಯ ಸಂಶೋಧನಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಐಸಿಎಂಆರ್ ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಕೇಂದ್ರದ ಆವರಣದಲ್ಲಿ ಈ ಕೊವಿಡ್-19 ಪರೀಕ್ಷಾ ಪ್ರಯೋಗಾಲಯ ಕಾರ್ಯ ನಿರ್ವಹಿಸಲಿದ್ದು, ಅದರ ಮುಂದಿನ ಪ್ರಕ್ರಿಯೆ ಕುರಿತು ಸಚಿವರು ಸಂಸ್ಥೆಯ ನಿರ್ದೇಶಕ ಜೊತೆ ಸಮಾಲೋಚನೆ ನಡೆಸಿದರು.
ಪ್ರಯೋಗಾಲಯ ಮಂಜೂರಾಗಿರುವುದರಿಂದ ಅಗತ್ಯ ಸಾಮಗ್ರಿ ಹಾಗೂ ಕಿಟ್ ತರಿಸಿಕೊಂಡು ತಕ್ಷಣವೇ ಗಂಟಲು ಮಾದರಿ ಪರೀಕ್ಷೆ ಕಾರ್ಯ ಆರಂಭಿಸಬೇಕು ಎಂದು ಸಚಿವ ಜಗದೀಶ ಶೆಟ್ಟರ ನಿರ್ದೇಶನ ನೀಡಿದರು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಪ್ರಯೋಗಾಲಯ ಆರಂಭಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದಿಂದ ಎಲ್ಲ ನೆರವು ನೀಡಲಾಗಿದೆ. ಇದಲ್ಲದೆ ಇನ್ನೂ ಹೆಚ್ಚಿನ ನೆರವು ಬೇಕಿದ್ದರೆ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ| ದೇವಪ್ರಸಾದ ಚಟ್ಟೋಪಾಧ್ಯಾಯ ಮಾತನಾಡಿ, ಗಂಟಲು ದ್ರವದ ಮಾದರಿ ಪರೀಕ್ಷೆಯ ಕಿಟ್ ಹಾಗೂ ಇನ್ನುಳಿದ ಸಾಮಗ್ರಿಗಳು ಸೋಮವಾರ ಬರಲಿವೆ. ತಕ್ಷಣದಿಂದಲೇ ಪರೀಕ್ಷೆ ಕಾರ್ಯ ಆರಂಭಿಸಲಾಗುವುದು ಎಂದರು.
ಜಿಪಂ ಸಿಇಒ ರಾಜೇಂದ್ರ ಕೆ.ವಿ ಮಾತನಾಡಿ, ಕಡಿಮೆ ಅವಧಿಯಲ್ಲಿ ಹೆಚ್ಚು ಪರೀಕ್ಷೆಗಳನ್ನು ಮಾಡಲು ಅನುಕೂಲವಾಗುವಂತೆ ಸ್ವಯಂಚಾಲಿತ ಯಂತ್ರ ಪೂರೈಕೆಗೆ ಆದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅತೀಕ್ ಮೋಹನ್, ಕೋವಿಡ್-19 ನಿಯಂತ್ರಣಾ ಕ್ರಮಗಳ ಉಸ್ತುವಾರಿ ರಾಜೇಂದ್ರ ಚೋಳನ್ ಇದ್ದರು.