ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಗೋಕುಲ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶ (ಉದ್ಯಮನಗರ)ದಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಹಾಗೂ ರವಿನಗರ ಬಳಿಯ ತೋಳನಕೆರೆಯಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಸೋಮವಾರ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉದ್ಯಮದಾರರು ಸಚಿವರೊಂದಿಗೆ ಮಾತನಾಡಿ, ಸಿಸಿ ರಸ್ತೆ ಕಾಮಗಾರಿಗಾಗಿ ರಸ್ತೆ ಅಗೆದಿದ್ದರಿಂದ ಕೆಲವು ಕೈಗಾರಿಕೆಗಳು ರಸ್ತೆಯಿಂದ ಎತ್ತರ ಮಟ್ಟದಲ್ಲಿ ಆಗಿವೆ. ಇನ್ನು ಕೆಲವು ಕೈಗಾರಿಕೆಗಳು ರಸ್ತೆ ಎತ್ತರವಾಗಿದ್ದಕ್ಕೆ ನೆಲ ಮಟ್ಟಕ್ಕೆ ಹೋಗಿವೆ. ಇದರಿಂದ ಕೈಗಾರಿಕೆಗಳಿಗೆ ಭಾರವಾದ ಯಂತ್ರಗಳನ್ನು ತರಲು ತೀವ್ರ ತೊಂದರೆ ಆಗುತ್ತದೆ. ಅಲ್ಲದೆ ರಸ್ತೆಯ ಮಧ್ಯ ಭಾಗದಲ್ಲಿಯೇ ಒಳಚರಂಡಿ ಮಾರ್ಗ ಇರುವುದರಿಂದ ಹಾಗೂ ಒಳಚರಂಡಿಯ ಮುಚ್ಚಳ ಭಾಗ ಸಿಸಿ ರಸ್ತೆಯಿಂದ ತಳಮಟ್ಟದಲ್ಲಿರುವುದರಿಂದ ಪದೇ ಪದೇ ಅದು ಕಟ್ಟಿಕೊಂಡು ಸಮಸ್ಯೆಯಾಗುವ ಸಾಧ್ಯತೆಯಿದೆ. ಕಾರಣ ಗುತ್ತಿಗೆದಾರರು ಅದನ್ನು ಸರಿಪಡಿಸಿ ಸಿಸಿ ರಸ್ತೆ ಕಾಮಗಾರಿ ನಡೆಸಬೇಕು. ಇಲ್ಲವಾದರೆ ಮಳೆಗಾಲದಲ್ಲಿ ತುಂಬಾ ಸಮಸ್ಯೆಯಾಗುತ್ತದೆ ಎಂದು ಸಚಿವರಲ್ಲಿ ಕೋರಿದರು.
ಅದಕ್ಕೆ ಸಚಿವರು ಎಲ್ಲ ನ್ಯೂನತೆ ಸರಿಪಡಿಸಿಕೊಂಡು ಸಿಸಿ ರಸ್ತೆ ನಿರ್ಮಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ತೋಳನಕೆರೆಯಲ್ಲಿ ನಡೆಯುತ್ತಿರುವ ಉದ್ಯಾನವನ, ಎಸ್‌ಟಿಪಿ ಪ್ಲಾಂಟ್ ಹಾಗೂ ಇನ್ನಿತರೆ ಕಾಮಗಾರಿಗಳನ್ನು ಪರಿಶೀಲಿಸಿ ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಿ. ಕೆರೆಗೆ ಸುತ್ತಮುತ್ತಲಿನ ಭಾಗಗಳಿಂದ ಕೊಳಚೆ ನೀರು ಹರಿದು ಬಾರದಂತೆ ತಡೆ ಹಿಡಿಯಬೇಕು ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.
ತೋಳನಕೆರೆ ಹಿತರಕ್ಷಣಾ ಸಮಿತಿಯವರು, ಕೆರೆಯ ಸುತ್ತ ಕಾಯಿಪಲ್ಲೆ ಮಾರಾಟಕ್ಕೆ ಅವಕಾಶ ಕೊಡಬೇಡಿ. ಬೇಕಾದರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಮಳಿಗೆಗಳನ್ನು ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದು ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಪಾಲಿಕೆಯಿಂದಾಗಲಿ, ನಮ್ಮಿಂದಾಗಲಿ ಯಾವುದೇ ರೀತಿ ಮಾರುಕಟ್ಟೆ ನಿರ್ಮಿಸಲು ಯೋಚಿಸಿಲ್ಲವೆಂದರು.
ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿ ಶಕೀಲ ಅಹ್ಮದ ಮೊದಲಾದವರಿದ್ದರು.