ವಿಧಾನಸಭೆ: ರಾಜ್ಯದ ಸಹಕಾರ ಸಂಘಗಳಲ್ಲಿ ರೈತರು ಮಾಡಿರುವ ಸಾಲದ ಪೈಕಿ ಕನಿಷ್ಠ ಒಂದು ಲಕ್ಷ ರೂ.ವರೆಗೆ
ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು. ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲ ಮನ್ನಾ
ಬಗ್ಗೆಯೂ ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಆಗ್ರಹಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, 50 ಸಾವಿರ ರೂ. ಸಾಲಮನ್ನಾದಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ರೈತರು ಸಂಕಷ್ಟದಲ್ಲಿದ್ದು, 1 ಲಕ್ಷ ರೂ.ವರೆಗೆ ಸಹಕಾರ ಸಂಘಗಳ ಸಾಲಮನ್ನಾ ಮಾಡಬೇಕಿತ್ತು ಎಂದು ಹೇಳಿದರು. ಉತ್ತರ ಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲ ಸಹ ಮನ್ನಾ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರವು ಆ ವಿಚಾರದಲ್ಲಿ ಕೇಂದ್ರದತ್ತ ಬೆಟ್ಟು ಮಾಡುತ್ತಿದೆ ಎಂದರು.
ನಾವು ತೀರಿಸ್ತೀವಿ: ಹೇಗಿದ್ದರೂ ನೀವು ಮತ್ತೂಮ್ಮೆ ಅಧಿಕಾರಕ್ಕೆ ಬರುವುದಿಲ್ಲ. ನಾವೇ ಬಂದು ನೀವು ಮಾಡಿರುವ ಸಾಲ ತೀರಿಸಬೇಕು. ಮಾಡುವುದಂತೂ ಮಾಡಿದ್ದೀರಿ. 1 ಲಕ್ಷ ರೂ.ವರೆಗಿನ ಸಹಕಾರ ಸಂಘದ ಸಾಲ, ರಾಷ್ಟ್ರೀಕೃತ ಬ್ಯಾಂಕುಗಳ ಸಾಲವನ್ನೂ ಮಾಡಿಬಿಡಿ. ಹೊರೆಯಾದರೆ ನಾವು ಬಂದು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ತೊಗರಿ ಬೆಳೆದ ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ತೊಗರಿ ಖರೀದಿಸುತ್ತಿಲ್ಲ. ಹೀಗಾದರೆ ರೈತರು ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದರು. ಇದಕ್ಕೆ ಕಾಂಗ್ರೆಸ್‌ನ ಶಿವಾನಂದ ಪಾಟೀಲ್ ಸಹ ಧ್ವನಿಗೂಡಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಟಿ.ಬಿ.ಜಯಚಂದ್ರ, ಬೆಂಬಲ ಬೆಲೆಯಡಿ ತೊಗರಿ ಖರೀದಿಗೆ ಕೇಂದ್ರದ ಸಹಕಾರವೂ ಬೇಕಾಗುತ್ತದೆ. ಕೇಂದ್ರ ನಮಗೆ ಅನುಮತಿ ಕೊಟ್ಟಿರುವುದೇ 26.50 ಲಕ್ಷ ಕ್ವಿಂಟಾಲ್ ಖರೀದಿಗೆ. ಅಷ್ಟು ಖರೀದಿಸಲಾಗಿದೆ. ಇನ್ನೂ ರೈತರ ಬಳಿ 40 ಲಕ್ಷ ಕ್ವಿಂಟಾಲ್‌ಗಳಷ್ಟು ದಾಸ್ತಾನಿದೆ. ಕೃಷಿ ಸಚಿವ ಕೃಷ್ಣ ಬೈರೇಗೌಡರೂ ದೆಹಲಿಗೆ ಹೋಗಿ ಬಂದಿದ್ದಾರೆ. ಕೇಂದ್ರದಿಂದ ಅನುಮತಿ ಕೊಡಿಸಿ ಎಂದು ಆಗ್ರಹಿಸಿದರು. ಮಾತು ಮುಂದುವರಿಸಿದ ಜಗದೀಶ ಶೆಟ್ಟರ್, ಕೇಂದ್ರದ ಬಳಿ ಹೋಗುವ ವಿಚಾರದಲ್ಲಿ ನಾವು ಮುಕ್ತವಾಗಿದ್ದೇವೆ. ನೀವೂ ಬನ್ನಿ ಜತೆಗೂಡಿ ಹೋಗೋಣ ಎಂದು ಹೇಳಿದರು.