ಬೆಳ್ತಂಗಡಿ : ಮೂವತ್ತು ವರ್ಷಗಳಿಂದ ಪುಟ್ಟ ಮನೆಯಲ್ಲಿ ವಾಸವಾಗಿದ್ದ ಬಡ ಕುಟುಂಬವೊಂದು ಮಳೆಯಿಂದ ಮನೆ ಕಳೆದುಕೊಂಡು ಒಂದೂವರೆ ವರ್ಷದಿಂದ ಟಾರ್ಪಾಲು ಕೆಳಗೆ ನರಕ ಯಾತನೆ ಅನುಭವಿಸುತ್ತಿದೆ. ಜತೆಗೆ ಈ ಕುಟುಂಬಕ್ಕೆ ಮತದಾನದ ಹಕ್ಕೂ ಇಲ್ಲ !
ಬೆಳ್ತಂಗಡಿ ತಾ| ಶಿರ್ಲಾಲು ಗ್ರಾಮದ ವಾಸು ಮೊಗೇರ-ಉಷಾ ದಂಪತಿ ಹಾಗೂ ನಾಲ್ಕು ಮಕ್ಕಳು ಮನೆ ಕಳೆದುಕೊಂಡು ಶೋಚನೀಯ ಬದುಕು ಸಾಗಿಸುತ್ತಿದ್ದಾರೆ. ಮಳೆಗೆ ಮಣ್ಣಿನ ಗೋಡೆಯ ಮನೆ ಧರಾಶಾಯಿಯಾಗಿದ್ದು ಪಕ್ಕದಲ್ಲೇ ತಾತ್ಕಾಲಿಕ ಟಾರ್ಪಾಲಿನ ಹೊದಿಕೆಯ ಗುಡಿಸಲಿನಲ್ಲೇ ನರಕಸದೃಶ ಜೀವನ ನಡೆಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳಾಗಲೀ ಸ್ಥಳೀಯ ಪಂ. ಆಗಲೀ ಈ ಕುರಿತು ಗಮನ ಹರಿಸದೇ ಇರುವುದು ವಿಷಾದನೀಯ.
ಮಕ್ಕಳಲ್ಲಿ ಅಪೌಷ್ಠಿಕತೆ
ಇಬ್ಬರು ಮಕ್ಕಳಾದ ಅನುಷಾ (6), ಆಶ್ವಿತಾ (7) ಸವ ಣಾಲು ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮತ್ತಿಬ್ಬರು ಅಶ್ವತ್ಥ್ (2) ಸುಮನಾ (4) ಸ್ಥಳೀಯ ಅಂಗನವಾಡಿ ತೆರಳುತ್ತಿದ್ದು, ಒಂದು ಮಗು ಅಪೌಷ್ಠಿಕತೆಯಿಂದ ಬಳಲುತ್ತಿದೆ ಎಂಬುದನ್ನು ಸ್ಥಳೀಯ ಗ್ರಾ.ಪಂ. ಪಿಡಿಒ ತಿಳಿಸಿದ್ದಾರೆ. ಈಗಾಗಲೇ ಆಶ್ರಯವಂಚಿತ ಮಕ್ಕಳು ಶಿಕ್ಷಣದಿಂದಲೂ ವಿಮುಖ ರಾಗುವ ಆತಂಕದಲ್ಲಿದ್ದಾರೆ.
ಅಸುರಕ್ಷಿತ ಗುಡಿಸಲು
100 ಚದರಡಿಯಲ್ಲಿ ಟಾರ್ಪಾಲು ಹೊದಿಕೆ ಹಾಕಿ 6 ಮಂದಿ ವಾಸವಾಗಿದ್ದು, ಬಾಗಿಲು ಇಲ್ಲದೆ ಬದುಕು ಅಸುರಕ್ಷಿತವಾಗಿದೆ.
ಅಪಾಯದ ಜೀವನ
ನೆಲದಲ್ಲೇ ನಿದ್ರಿಸುತ್ತಿದ್ದು, ಪಕ್ಕ ದಲ್ಲೇ ಅಡುಗೆ ಮಾಡುತ್ತಿದ್ದಾರೆ. ರಾತ್ರಿ ಸೀಮೆಎಣ್ಣೆ ದೀಪದಲ್ಲೇ ಬದುಕು ಸಾಗಿಸುತ್ತಿದ್ದು, ಅನಾಹುತ ಸಾಧ್ಯತೆ ಇದೆ. ಕಳೆದ 30 ವರ್ಷಗಳಿಂದ ಸ್ಥಳೀಯ ಫಲ್ಗುಣಿ ನದಿ ನೀರಿನ ಆಶ್ರಯ ಪಡೆಯುತ್ತಿದ್ದು, ಬೇಸಗೆಯಲ್ಲಿ ನೀರಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾ.ಪಂ. ನೀರಿನ ಸೌಲಭ್ಯ ಕಲ್ಪಿಸಿಲ್ಲ.
ಆಧಾರ್ ಕಾರ್ಡ್, ಪಡಿತರ ಚೀಟಿ ಇಲ್ಲ
ವಾಸು ಬಳಿ 20 ವರ್ಷಗಳ ಹಿಂದಿನ ಪಡಿತರ ಚೀಟಿಯಿದೆ. ಆದರೆ ವಾಸು, ಪತ್ನಿ ಮಕ್ಕಳ ಹೆಸರಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಇಲ್ಲ. ಕಳೆದ 10 ವರ್ಷಗಳಿಂದ ಯಾವುದೇ ಚುನಾವಣೆಯಲ್ಲಿ ಈ ದಂಪತಿ ಮತದಾನ ಮಾಡಿಲ್ಲ.
ಗುಡಿಸಲೇ ನಮಗೆ ಗತಿ
ನಾನು ಕೂಲಿ ಕೆಲಸ ಮಾಡುತ್ತಿದ್ದು, ಮನೆ ನಿರ್ಮಿಸಲು ದುಡ್ಡಿಲ್ಲ. ಇದರ ಜತೆಗೆ ಮಕ್ಕಳನ್ನೂ ಸಾಕಬೇಕು. ಹೀಗಾಗಿ ಗುಡಿಸಲೇ ನಮಗೆ ಗತಿಯಾಗಿದೆ. ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕವೂ ಸಮರ್ಪಕವಾಗಿಲ್ಲ.
– ವಾಸು ಮೊಗೇರ, ಸಂತ್ರಸ್ತರು
ಶೀಘ್ರದಲ್ಲಿ ಶೆಡ್ ನಿರ್ಮಾಣ
ಮಾಹಿತಿ ತಿಳಿದು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಪಂ. ವತಿಯಿಂದ ತಾತ್ಕಾಲಿಕ ವಾಸ್ತವ್ಯಕ್ಕಾಗಿ ಸಿಮೆಂಟ್ ಗೋಡೆಯ ಶೆಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಪ.ಜಾ./ಪ.ಪಂ. ಅನುದಾನದಲ್ಲಿ ಸಾಧ್ಯವಾದಷ್ಟು ಸಹಾಯ ಕಲ್ಪಿಸಲು ಚಿಂತಿಸಲಾಗಿದೆ. ಚುನಾವಣೆ ಬಳಿಕ ಕುಟುಂಬಕ್ಕೆ ಆಧಾರ್, ಮತದಾರರ ಚೀಟಿ, ಪಡಿತರ ಚೀಟಿ ಕೊಡಿಸುವ ಜವಾಬ್ದಾರಿ ವಹಿಸಿದ್ದೇನೆ.
- ರಾಜು, ಪಿಡಿಒ, ಶಿರ್ಲಾಲು ಗ್ರಾ.ಪಂ.