ಉಪ್ಪಿನಂಗಡಿ: ಅಂತರ್ ಜಿಲ್ಲಾ ಕಳ್ಳತನ ಪ್ರಕರಣಗಳ ಆರೋಪಿತನನ್ನು ಉಪ್ಪಿನಂಗಡಿ ಪೊಲೀಸರು ಆ. 27ರಂದು ಬಂಧಿಸಿದ್ದಾರೆ.
ಕಡಬ ತಾಲೂಕು ಐತ್ತೂರು ಗ್ರಾಮದ ಕಾಯರ್ತಡ್ಕ ನಿವಾಸಿ ಅಬ್ದುಲ್ ಹಮೀದ್ (27) ಬಂಧಿತ ಆರೋಪಿ. 2023ರ ಅ. 10ರಂದು ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಉಪಯೋಗಿಸುವ ಕೆ.ಎನ್.ಆರ್. ಸಂಸ್ಥೆಯ ಕಬ್ಬಿಣದ ಶೀಟ್‌ಗಳನ್ನು ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಈತನನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ಕೌಕ್ರಾಡಿ ಗ್ರಾಮದ ಪೆರಿಯಶಾಂತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ. ಅಲ್ಲದೇ ಈತನ ಮೇಲೆ ಮಂಗಳೂರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ, ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಚೋದನೆ, ದಾವಣಗೆರೆ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ, ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದವಾಗಿ ಸಿಲುಕಿದ ಪ್ರಕರಣ, ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣ, ಕಡಬ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕಳವು ಪ್ರಕರಣ, ಬೆಂಗಳೂರು ಕೊತ್ನಲೂರು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ, ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಪ್ರಕರಣಗಳು ದಾಖಲಾಗಿವೆ.
ಈ ಎಲ್ಲಾ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಈತನ ಮೇಲೆ ವಾರಂಟ್ ಜಾರಿಯಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನಿರ್ದೇಶನದಂತೆ ನಡೆದ ಈ ಪತ್ತೆ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ರುಕಾ¾ ನಾಯ್ಕ, ಎಚ್‌ಸಿ ಹಿತೋಶ್, ಸಿಬಂದಿ ಹೇಮರಾಜ್, ಗಿರೀಶ್ ರೈ, ಶಿವರಾಜ್ ಟಕ್ಕಳಿಕೆ, ಕಡಬ ಠಾಣೆಯ ರಾಜು ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.