ಕೊರಟಗೆರೆ : ಕೊರಟಗೆರೆ ತಾಲೂಕಿನಲ್ಲಿ ಕದ್ದ 7 ಕುರಿಗಳು ದೂರದ ಚಿತ್ರದುರ್ಗ ಸಂತೆಯಲ್ಲಿ ಮಾರಿದರೂ ಮತ್ತೆ ತಾಲೂಕಿನ ಅಕ್ಕಿರಾಂಪುರ ಸಂತೆಯಲ್ಲಿ ಪತ್ತೆಯಾಗಿ ಮಾಲೀಕರನ್ನು ಸೇರಿದ ಘಟನೆ ನಡೆದಿದೆ.
ತಾಲೂಕಿನ ತುಂಬಾಡಿಯ ಹನುಮೇಶ್ ನ 2, ಮಲ್ಲೇಶ್ ಪುರದ ಮುರಳಿಧರ್ ರವರಿಂದ 2, ರಾಮಕೃಷ್ಣಯ್ಯ ಎಂಬುವರ 3 ಕುರಿಗಳು ಸೇರಿದಂತೆ ಒಟ್ಟು 7 ಕುರಿಗಳನ್ನ ಕಳೆದ 5 ದಿನಗಳ ಹಿಂದೆ ಕದ್ದು ಅಕ್ಕಿ ರಾಂಪುರ ಸಂತೆಯಲ್ಲಿ ಮಾರಾಟ ಮಾಡುತ್ತಿರುವಾಗ ಪಕ್ಕದ ಮನೆಯವರೂಬ್ಬರು ಅನುಮಾನಗೊಂಡು ತಮ್ಮೂರಿನ ಕದ್ದ ಕುರಿಗಳಿವು ಎಂದು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಕೆಂಪಯ್ಯ ಎಂಬ ಅರಸಾಪುರ ಗ್ರಾಮದ ಗಿರಚೀಕನಹಳ್ಳಿ ಗ್ರಾಮದ ವ್ಯಾಪಾರಿಯು ಚಿತ್ರದುರ್ಗದ ಕುರಿ ಸಂತೆಯಲ್ಲಿ ಕೊಂಡು ಕೊರಟಗೆರೆ ಅಕ್ಕಿರಾಂಪುರ ಸಂತೆಯಲ್ಲಿ ಮಾರಾಟ ಮಾಡುವಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕಳ್ಳತನವಾದ ಮನೆಯ ಪಕ್ಕದ ವ್ಯಕ್ತಿ ಕುರಿಗಳನ್ನ ಗಮನಿಸಿ ದೂರವಾಣಿ ಮೂಲಕ ಕಳವಾದ ಕುರಿ ಮಾಲೀಕರಿಗೆ ವಿಚಾರ ಮುಟ್ಟಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಸಂತೆಯಲ್ಲಿ ಮಾಲೀಕರ ಕಂಡು ಕೊಡಲೇ ಕುರಿಗಳು ಅರಚಿಕೊಂಡು ಮಾಲೀಕನ ಬಳಿ ಓಡಿ ಹೋಗಿವೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.