ಶಿಡ್ಲಘಟ್ಟ: ತಾಲೂಕಿನ ಕಂಬದಹಳ್ಳಿಯ ರೈತ ಸುರೇಂದ್ರಗೌಡ ಅವರ ರಾಂಬುಲೇಟ್ ತಳಿಯ ಕುರಿ ಮೂರು ಮರಿಗಳಿಗೆ ಜನ್ಮನೀಡಿದೆ.
ಪಶು ಇಲಾಖೆಯ ಅಧಿಕಾರಿಗಳ ಪ್ರಕಾರ, ಕುರಿಗಳು ಒಂದು ಇಲ್ಲವೇ ಎರಡು ಮರಿಗೆ ಜನ್ಮ ನೀಡುತ್ತವೆ. ಆದರೆ ಮೂರು ಅಥವಾ ನಾಲ್ಕು ಮರಿಗಳಿಗೆ ಜನ್ಮ ನೀಡುವುದು ಅಪರೂಪದ ಸಂಗತಿಯಾಗಿದೆ. ಮನೆ ಮಂದಿ ಖುಷಿಗೊಂಡಿದ್ದರೆ, ಊರ ಜನ ಕುತೂಹಲದಿಂದ ಕುರಿಮರಿಗಳನ್ನು ಬಂದು ನೋಡುತ್ತಿದ್ದಾರೆ.
ವಿಶೇಷವೆಂದರೆ ಈ ಕುರಿ ಮೂರು ವರ್ಷಗಳಿಂದ ಪ್ರತಿ ವರ್ಷವೂ ಮೂರು ಮೂರು ಮರಿಗಳಿಗೆ ಜನ್ಮ ನೀಡುತ್ತಿದ್ದು, ತಾಯಿ ಕುರಿ ಸೇರಿದಂತೆ ಸುರೇಂದ್ರಗೌಡ ಅವರ ಬಳಿ ಒಟ್ಟು ಹತ್ತು ಕುರಿಗಳಿವೆ.
2020 ರಲ್ಲಿ 15 ಸಾವಿರ ರೂಗಳನ್ನು ಕೊಟ್ಟು ರಾಂಬುಲೇಟ್ ತಳಿಯ ಈ ಕುರಿಯನ್ನು ತಂದೆ 2020 ರಲ್ಲಿ ಮೂರು ಮರಿಗಳಿಗೆ ಜನ್ಮಕೊಟ್ಟಿತು, ನಂತರ 2021 ರಲ್ಲಿ ಕೂಡ ಮೂರು ಮರಿಗಳಿಗೆ ಜನ್ಮಕೊಟ್ಟಿತು. ಇದೀಗ ಈಗ ಸಹ ಮೂರು ಮರಿಗಳಿಗೆ ಜನ್ಮಕೊಟ್ಟಿದೆ. ಈಗ ತಾಯಿ ಕುರಿ ಮತ್ತು ಒಂಬತ್ತು ಮರಿಗಳು ನಮ್ಮೊಂದಿಗಿವೆ ಎಂದು ರೈತ ಸುರೇಂದ್ರಗೌಡ ಸಂತಸ ವ್ಯಕ್ತಪಡಿಸಿದರು.