Advertisement

ಡೈಲಿ ಡೋಸ್; ಪ್ರಣಾಳಿಕೆ ಮೇಲೆ ಶೀನಪ್ಪನವರ ಅನಾಲಿಸಿಸ್‌;ಈ 200 ಯೂನಿಟ್‌ ಅಂದ್ರೆ ಎಷ್ಟಪ್ಪಾ?

12:37 PM Mar 28, 2023 | Team Udayavani |

ನಮ್ಮ ಹಳ್ಳಿಯ ಶೀನಪ್ಪನವರು ಮೊನ್ನೆಯಿಂದ ಲೆಕ್ಕ ಹಾಕ್ತಾ ಇರೋದು ಒಂದೇ. ಅದೇನೆಂದರೆ, “ಈ 200 ಯೂನಿಟ್‌ ಕರೆಂಟ್‌ ಅಂದರೆ ಎಷ್ಟು?’ ಅಂತ. ಮೊನ್ನೆ ಮನೆ ಹತ್ತಿರ ಲೈನ್‌ ಸರಿ ಮಾಡಲಿಕ್ಕೆ ಬಂದ ಲೈನ್‌ಮ್ಯಾನ್‌ ನ್ನು ತಡೆದು ನಿಲ್ಲಿಸಿ, “ಅಲ್ಲಪ್ಪ, ಈ 200 ಯೂನಿಟ್‌ ಎಂದರೆ ಎಷ್ಟಪ್ಪ?’ ಎಂದು ಕೇಳಿದ್ದರು. ಪಾಪ, ಲೈನ್‌ಮ್ಯಾನ್‌ಗೆ ಹೇಗೆ ವಿವರಿಸೋದು ಅಂತ ಗೊತ್ತಾಗಲಿಲ್ಲ. ಅಜ್ಜ, ನನಗೆ ಇನ್ನೂ ಎರಡು ಲೈನ್‌ಗೆ ಹೋಗೋದಿದೆ. ನಾಳೆ ಬಂದು ಹೇಳ್ತೀನಿ ಎಂದು ಹೇಳಿ ಹೋದ.

Advertisement

ಶೀನಪ್ಪನವರು ಮಾತ್ರ ಬೆರಳು ಲೆಕ್ಕದಲ್ಲಿ ದಿನವಿಡೀ ಲೆಕ್ಕ ಹಾಕ್ತಾ ಇದ್ದರು. ಹತ್ತೋ, ಇಪ್ಪತ್ತೋ ಲೆಕ್ಕ ಹಾಕುವಷ್ಟರಲ್ಲಿ ಹಿಂದಿನದ್ದು ಮರೆತು ಹೋಗ್ತಾ ಇತ್ತು. ಮತ್ತೆ ಶುರು ಮಾಡ್ತಾ ಇದ್ದರು. ಹಾಗಾಗಿ ರಾತ್ರಿ 9ಕ್ಕೆ ಮಲಗಲಿಕ್ಕೆ ಹೋಗುವಾಗಲೂ 30 ದಾಟಿರಲಿಲ್ಲ.

ಮಾರನೆಯ ದಿನ ಆ ಲೈನ್‌ಮ್ಯಾನ್‌ ಬಂದ. ಬರುವಾಗಲೇ ಒಂದು ಯಾರಧ್ದೋ ಲೈಟ್‌ ಬಿಲ್‌ ತಂದಿದ್ದ. ಅದನ್ನು ತೋರಿಸುತ್ತಾ, “ನೋಡಿ, ಅಜ್ಜ ಈ ಬಿಲ್‌ನ ಮನೆಯವರು ಒಂದು ತಿಂಗಳಲ್ಲಿ 150 ಯೂನಿಟ್‌ ಬಳಸಿದ್ದಾರೆ. ಇದಕ್ಕೆ ಇನ್ನೂ 50 ಯೂನಿಟ್‌ ಸೇರಿಸಬೇಕು’ ಎಂದ. ಶೀನಪ್ಪನವರಿಗೆ ಅರ್ಥ ಆದಂತೂ ಆಯಿತು, ಅರ್ಥ ಆಗದಂತೂ ಆಯಿತು.

ಯಾವುದಕ್ಕೂ ಇರಲಿ ಅಂತ ಶೀನಪ್ಪ, “ತಮ್ಮ, ಇವರ ಮನೆಯಲ್ಲಿ ಎಷ್ಟು ಬಲ್ಪು ಇರ್ಬಹುದು ಗೊತ್ತಾ?’ ಎಂದು ಕೇಳಿದರು. ಲೈನ್‌ಮ್ಯಾನ್‌ಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. “ಒಂದು ಇಪ್ಪತ್ತು ಇರಬಹುದು’ ಎಂದ. “ಹಾಗಾದರೆ ಹೊಸ ಸರಕಾರ ಬಂದರೆ ನಮ್ಮ ಮನೆಗೆ 30 ಬಲ್ಪು ಹಾಕ್ಬೇಕಾಗುತ್ತಲ್ಲಪ್ಪ’ ಎಂದು ಶೀನಪ್ಪ ಲೆಕ್ಕ ಒಪ್ಪಿಸಿದರು.
– ಡಾ| ಗಂಪತಿ

Advertisement

Udayavani is now on Telegram. Click here to join our channel and stay updated with the latest news.

Next