Advertisement
ದೋಷಾರೋಪ ಹೊರಿಸಿದ ಸಿಬಿಐ ವಿಶೇಷ ಕೋರ್ಟಿನ ನ್ಯಾಯಾಧೀಶ ಎಚ್.ಎಸ್.ಮಹಾಜನ್ ಅವರು ಫೆ.1ರಿಂದ ವಿಚಾರಣೆ ಆರಂಭವಾಗಬೇಕೆಂದು ಆದೇಶ ನೀಡಿದ್ದಾರೆ. ಇಂದ್ರಾಣಿ ಮುಖರ್ಜಿ, ಪೀಟರ್ ಮುಖರ್ಜಿ, ಸಂಜೀವ್ ಖನ್ನಾ ವಿರುದ್ಧ ವಂಚನೆ, ಅಪಹರಣ, ವಿಚಾರಣೆ ವೇಳೆ ತಪ್ಪು ಮಾಹಿತಿ ನೀಡಿಕೆ, ಕೊಲೆ ಮತ್ತು ಸಾಕ್ಷ್ಯ ನಾಶಗಳ ಆರೋಪಗ ಳನ್ನು ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಹೊರಿಸಿದೆ. ಇಂದ್ರಾಣಿ ಮತ್ತು ಸಂಜೀವ್ ಖನ್ನಾ ವಿರುದ್ಧ ಶೀನಾ ಬೋರಾ ಮತ್ತು ಆಕೆಯ ಸಹೋದರ ಮಿಖಾಯಿಲ್ ಬೋರಾ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ಇದರ ಜತೆಗೆ ಇಂದ್ರಾಣಿ ವಿರುದ್ಧ ದಾಖಲೆಗಳ ನೀಡಿಕೆಯಲ್ಲಿ ವಂಚನೆ ಆರೋಪವನ್ನೂ ಹೊರಿಸಲಾಗಿದೆ.
ಆರೋಪಪಟ್ಟಿ ಸಲ್ಲಿಕೆ ವೇಳೆ ಇಂದ್ರಾಣಿ ಮುಖರ್ಜಿ ಪತಿ ಪೀಟರ್ ಮುಖರ್ಜಿಯಿಂದ ವಿಚ್ಛೇದನ ಬೇಕೆಂದು ಮನವಿ ಮಾಡಿದರು. ಈ ಬಗ್ಗೆ ಅರ್ಜಿ ಸಲ್ಲಿಸಲು ಅನುಮತಿ ನೀಡಬೇಕೆಂದು ವಿಶೇಷ ಕೋರ್ಟ್ ಮುಂದೆ ಅರಿಕೆ ಮಾಡಿಕೊಂಡರು. ಅದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಧೀಶ ಎಚ್.ಎಸ್.ಮಹಾ ಜನ್, “ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಲು ಕೋರ್ಟಿಂದ ಅನುಮತಿ ಪಡೆಯಬೇಕಾಗಿಲ್ಲ’ ಎಂದು ಹೇಳಿದರು. ಆ ವಿಚಾರ ಏನಿದ್ದರೂ ಪತಿ-ಪತ್ನಿಯ ನಡುವೆ ಚರ್ಚೆಯಾಗಬೇಕು. ಅದಕ್ಕೂ ಕೋರ್ಟಿಗೂ ಸಂಬಂಧವಿಲ್ಲ ಎಂದು ನ್ಯಾಯಾಧೀಶರು ಹೇಳಿದರು.