Advertisement

ಅಡೆತಡೆಗಳ ದಾಟಿ ಅಪ್ಪನನ್ನು ಉಳಿಸಿಕೊಂಡಳು

12:24 AM Dec 20, 2020 | sudhir |

ನಾಲ್ಕು ತಿಂಗಳುಗಳ ಹಿಂದೆ ಅದೊಂದು ಬೆಳ ಗ್ಗೆ ಫೋನ್‌ ಬಂತು. ಹಲೋ ಅನ್ನುತ್ತಿದ್ದಂತೆಯೇ- “ಸಾರ್‌, ನಾನು ಸೀಮಾ. ನಮ್ಮ ತಂದೆಗೆ ಸೀರಿಯಸ್‌ ಆಗಿದೆ. ಖಾಸಗಿ ಆಸ್ಪತ್ರೆಗೆ ಸೇರಿಸಿದ್ದೇನೆ. ಐಸಿಯುನಲ್ಲಿ ಇ¨ªಾರೆ. ಆಗಲೇ ಹತ್ತು ದಿನ ಆಯ್ತು. ಡಾಕ್ಟರ್‌ ಏನೂ ಹೇಳ್ತಾ ಇಲ್ಲ. ದಿನೇದಿನೆ ಅಪ್ಪನ ಆರೋಗ್ಯ ಹದಗೆಡ್ತಾ ಇದೆ. ಅಪ್ಪ ನಿಗೆ ಈಗಿನ್ನೂ 57 ವರ್ಷ. ಇಷ್ಟು ಬೇಗ ಅವರನ್ನು ಕಳೆದುಕೊಳ್ಳಲು ನಾನು ರೆಡಿ ಇಲ್ಲ. ಸ್ವಲ್ಪ ಮುತುವರ್ಜಿಯಿಂದ ನೋಡಿಕೊಳ್ಳುವಂತೆ ಡಾಕ್ಟರ್‌ಗಳಿಗೆ ಹೇಳಬಹುದಾ? ಪ್ಲೀಸ್‌…’ ಎಂದರಾಕೆ.

Advertisement

ನಾವು ಪತ್ರಕರ್ತರಿಗೆ ಇರುವ ಪ್ಲಸ್‌ ಪಾಯಿಂಟ್‌ ಏನೆಂದರೆ, ಹೆಚ್ಚಿನ ಆಸ್ಪತ್ರೆಗಳಲ್ಲಿ ಯಾರಾದರೂ ಒಬ್ಬ ಡಾಕ್ಟರ್‌ ಪರಿಚಯ ಇದ್ದೇ ಇರುತ್ತದೆ. ಹಾಗಾಗಿ, “ಇಂಥವರು ನಮ್ಮ ಕಡೆಯ ಪೇಷಂಟ್‌. ಅವರನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಮನವಿ ಮಾಡುವುದು ಸುಲಭ. ಈ ಲೆಕ್ಕಾಚಾರದಿಂದಲೇ- “ಅದಕ್ಕೇನಂತೆ? ನೀವು ಹೇಳಿದ ಆಸ್ಪತ್ರೆಯಲ್ಲಿ ಪರಿಚಯದ ಡಾಕ್ಟರ್‌ ಇದ್ದಾರೆ. ಅವರಿಗೆ ಒಂದು ಮಾತು ಹೇಳ್ಳೋಣ. ಚಿಂತೆ ಮಾಡಬೇಡಿ’ ಎಂದು ಸೀಮಾ ಅವರಿಗೆ ಭರವಸೆ ನೀಡಿದ್ದಾಯಿತು. ಏನು ತೊಂದರೆ ಅಂತ ಆಸ್ಪತ್ರೆಗೆ ಸೇರಿಸಿದ್ರಿ? ಪೇಷಂಟ್ಗೆ ಏನೇನು ಸಮಸ್ಯೆಗಳಿವೆ ಎಂದು ಕೇಳಿದಾಗ ಸೀಮಾ ಹೇಳಿದ್ದಿಷ್ಟು: “ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿ ಅಪ್ಪನಿಗೂ- ನನಗೂ ಜ್ವರ ಬಂತು. ಮನೆಗೆ ಹತ್ತಿರವಿದ್ದ ಖಾಸಗಿ ಆಸ್ಪತ್ರೆಗೆ ಚೆಕಪ್‌ಗೆ ಅಂತ ಹೋದ್ವಿ. ಕೊರೊನಾ ಟೆಸ್ಟ್‌ ಮಾಡಿದ್ರು. ಇಬ್ಬರಿಗೂ ಪಾಸಿಟಿವ್‌ ಬಂತು. ಅವತ್ತೇ ಇಬ್ರೂ ಅಡ್ಮಿಟ್‌ ಆದ್ವಿ. ಅಪ್ಪನಿಗೆ ಜ್ವರ ಬಿಟ್ರೆ ಬೇರೇನೂ ತೊಂದರೆ ಇರಲಿಲ್ಲ. ಐದು ದಿನದ ಅನಂತರ ನನಗೆ ನೆಗೆಟಿವ್‌ ಅಂತ ರಿಪೋರ್ಟ್‌ ಬಂತು. ಡಿಸಾcರ್ಜ್‌ ಕೂಡ ಆಯ್ತು. ಆದ್ರೆ ಅಪ್ಪನಿಗೆ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ತು. ಅವರಿಗೆ ವೆಂಟಿಲೇಶನ್‌ ಅಳವಡಿಸಿ, ಐಸಿಯುಗೆ ಹಾಕಿದ್ದಾರೆ. ಅವತ್ತಿಂದ ಅಪ್ಪನ ಆರೋಗ್ಯ ದಿನೇದಿನೆ ಹದಗೆಡ್ತಾ ಇದೆ. ಡಾಕ್ಟರ್‌ಗೆ ಕೇಳಿದರೆ-“ಉಸಿರಾಟದ ಸಮಸ್ಯೆ ಇದೆ. ಕೋಮಾ ಸ್ಟೇಜ್‌ನಲ್ಲಿದ್ದಾರೆ. ಟ್ರೀಟ್ಮೆಂಟ್‌ ಕೊಡ್ತಾ ಇದೀವಿ. ಹೀಗೇ ಆಗುತ್ತೆ ಅಂತ ಗ್ಯಾರಂಟಿ ಕೊಡಲು ಆಗಲ್ಲ ಅಂತಿದ್ದಾರೆ…’

ಸೀಮಾ, ಸಾಫ್ಟ್ವೇರ್‌ ಎಂಜಿನಿಯರ್‌. ಈಕೆ ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳು. ವರ್ಷದ ಹಿಂದಷ್ಟೇ ಮದುವೆಯಾಗಿದೆ. ಹೆತ್ತವರ ಮನೆಗೆ ಹತ್ತಿರದಲ್ಲೇ ಈಕೆಯ ಮನೆಯೂ ಇದೆ. ಕೊರೊನಾ ಕಾರಣಕ್ಕೆ ಎಲ್ಲ ಕಂಪೆನಿಗಳೂ “ಸಂಬಳ ಕಡಿತ’ದ ನಿಯಮ ತಂದವಲ್ಲ; ಸೀಮಾರ ಕಂಪೆನಿಯೂ ಅದನ್ನು ಪಾಲಿಸಿತು. ಅಪ್ಪ-ಮಗಳು ಆಸ್ಪತ್ರೆಗೆ ದಾಖಲಾದದ್ದು ಈ ಸಂದರ್ಭದಲ್ಲಿಯೇ.
ಆನಂತರದಲ್ಲಿ ಪರಿಚಯದ ವೈದ್ಯರಿಗೆ ಹೇಳಿದ್ದಾಯಿತು. ಏನೇನೂ ಪ್ರಯೋಜನವಾಗಲಿಲ್ಲ. ಚಾನ್ಸಸ್‌ 50-50 ಎಂಬ ಧಾಟಿಯಲ್ಲಿ ವೈದ್ಯರೇ ಮಾತಾಡತೊಡಗಿದರು. “ಆಗಿದ್ದಾಗಲಿ ಎಂದು ದೇವರ ಮೇಲೆ ಭಾರ ಹಾಕಿ ಇದ್ದುಬಿಡೋಣ’ ಎಂದು ತೀರ್ಮಾನಿಸಿ 4 ದಿನ ಕಳೆದಿರಲಿಲ್ಲ. ಆಗಲೇ ಸೀಮಾ ಮತ್ತೆ ಕಾಲ್‌ ಮಾಡಿ ಗಾಬರಿಯಿಂದ ಹೇಳಿದರು: “ಸಾರ್‌, ಅಪ್ಪ ಈಗಲೂ ಕೋಮಾದಲ್ಲೇ ಇದ್ದಾರೆ. ಅವರ ಆರೋಗ್ಯದಲ್ಲಿ ಸ್ವಲ್ಪವೂ ಸುಧಾರಣೆ ಯಾಗಿಲ್ಲ. ಆಸ್ಪತ್ರೆಯ ಬಿಲ್‌ ಈಗಾಗಲೇ 10 ಲಕ್ಷ ಆಗಿಬಿಟ್ಟಿದೆ. ಅಷ್ಟು ಹಣವನ್ನು ಹೇಗೆ ಹೊಂದಿಸುವುದು? ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿಸಬಹುದಾ? ದಯವಿಟ್ಟು ಏನಾದರೂ ಐಡಿಯಾ ಕೊಡಿ…’

ಗೆಳೆಯರ ನೆರವಿನಿಂದ, ತತ್‌ಕ್ಷಣವೇ ಆರೋಗ್ಯ ಸಚಿವರ ಪಿ.ಎ.ಯನ್ನು ಸಂಪರ್ಕಿಸಿ, ಅವರಿಗೆ ವಿಷಯ ತಿಳಿಸಿದ್ದಾಯಿತು. 12 ದಿನದ ಚಿಕಿತ್ಸೆಗೆ 10 ಲಕ್ಷ ಬಿಲ್‌ ಮಾಡಿದ್ದಾರೆ. ಅದನ್ನು ಕಡಿಮೆ ಮಾಡಿಸಬಹುದಾ? ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿಸಬಹುದಾ ಎಂದು ಕೇಳಿದ್ದಕ್ಕೆ ಅವರೆಂದರು: “ಬಿಬಿಎಂಪಿ ಕಡೆಯಿಂದ ದಾಖಲಾಗಿದ್ದರೆ ಮಾತ್ರ ನಮಗೆ ಎಲ್ಲ ಮಾಹಿತಿ ಸಿಗುತ್ತೆ. ಆಗಷ್ಟೇ ನಾವು ಏನಾದರೂ ಸಹಾಯ ಮಾಡಬಹುದು. ಹಾಗಲ್ಲದೆ ನೇರವಾಗಿ ದಾಖಲಾಗಿದ್ದರೆ ನಾವು ಏನು ಮಾಡಲೂ ಆಗಲ್ಲ… ಸಾರಿ…’ ದುರಾದೃಷ್ಟ ಎಂಬಂತೆ, ಸೀಮಾ ಮತ್ತು ಅವರ ತಂದೆ, ಖಾಸಗಿ ಆಸ್ಪತ್ರೆಗೆ ನೇರವಾಗಿ ದಾಖಲಾಗಿದ್ದರು. ಬರೀ ಜ್ವರ ಅಲ್ಲವಾ? ಒಂದೆರಡು ದಿನದಲ್ಲಿ ವಾಸಿಯಾಗುತ್ತೆ ಎಂಬ ಅಂದಾಜು ಇಲ್ಲಿ ದುಬಾರಿಯಾಗಿ ಪರಿಣಮಿಸಿತ್ತು.

ನಮ್ಮೆದುರು ಈಗ ಎರಡು ಆಯ್ಕೆಗಳಿದ್ದವು. ಮೊದಲನೆಯದು- ರಿಸ್ಕ್ ತಗೊಂಡು ಬೇರೊಂದು ಆಸ್ಪತ್ರೆಗೆ ದಾಖಲಿಸುವುದು. ಎರಡನೆಯದು- ಈಗಿರುವ ಆಸ್ಪತ್ರೆಯನ್ನೇ ನಂಬಿಕೊಂಡು ಚಿಕಿತ್ಸೆಗೆ ಅಗತ್ಯವಿರುವ ಹಣ ಹೊಂದಿಸುವುದು. ಈ ಸಂಬಂಧವಾಗಿ ತಜ್ಞರ ಸಲಹೆ ಕೇಳಿದಾಗ ಅವರೆಂದರು: “ಪೇಷೆಂಟ್‌ ಕೋಮಾದಲ್ಲಿ ಇದ್ದಾರೆ. ಉಸಿರಾಟದ ತೊಂದರೆಯೂ ಇದೆ. ಇಂಥ ಸಂದರ್ಭದಲ್ಲಿ ಬೇರೊಂದು ಆಸ್ಪತ್ರೆಗೆ ಶಿಫ್ಟ್ ಮಾಡುವುದು ಒಳ್ಳೆಯದಲ್ಲ. ಹಣವನ್ನು ಹೇಗಾದರೂ ತರಬಹುದು. ಜೀವ ತರಲು ಆಗಲ್ಲ. ಅರ್ಥ ಆಯ್ತಾ? ಈ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಯಲಿ. ಹೇಗಾದರೂ ಮಾಡಿ ದುಡ್ಡು ಹೊಂದಿಸಿಕೊಳ್ಳಿ…’
ಈ ವೇಳೆಗೆ ಬಿಲ್‌ನ ಮೊತ್ತ 22 ದಿನಕ್ಕೆ 15 ಲಕ್ಷ ಆಗಿಬಿಟ್ಟಿತ್ತು. ಐಸಿಯುನಲ್ಲಿ ಇದ್ದಾರೆಂದು ದಿನಕ್ಕೆ 50 ಸಾವಿರ ರುಪಾಯಿ ಬಿಲ್‌ ಮಾಡುತ್ತಿದ್ದರು. “ಇಷ್ಟೊಂದು ಹಣ ಕೊಡಲು ಆಗಲ್ಲ, ಚಿಕಿತ್ಸೆ ನಿಲ್ಲಿಸಿ…’ ಅಂದರೆ ರೋಗಿಯ ಪ್ರಾಣಕ್ಕೇ ಸಂಚಕಾರ ಬರಬಹುದು. ಚಿಕಿತ್ಸೆ ಮುಂದುವರಿದರೆ, ಮುಂದೊಮ್ಮೆ ಹಣ ಪಾವತಿಸುವುದೇ ಕಷ್ಟವಾಗಬಹುದು! ಇದು ಒಂದು ರೀತಿ- ಎರಡು ಅಲುಗಿನ ಕತ್ತಿಯ ಮೇಲೆ ನಿಂತಂಥ ಅನುಭವ. ಇದೆಲ್ಲ ಗೊತ್ತಿದ್ದೂ ಸೀಮಾ ಹೇಳಿದ್ದು ಒಂದೇ ಮಾತು- “ಸಾರ್‌, ಕೊರೊನಾ ಕಾರಣಕ್ಕೆ ನನಗೂ ಸಂಬಳ ಕಡಿತ ಆಗಿದೆ. ಸೇವಿಂಗ್ಸ್‌, ಇನ್ಶೂರೆನ್ಸ್‌, ಎಫ್.ಡಿ., ಒಡವೆ ಮಾರಾಟ -ಹೀಗೆಲ್ಲ ಮಾಡಿದ್ರೂ 15 ಲಕ್ಷ ಆಗುತ್ತೆ. ಇನ್ನೂ 15 ದಿನ ಆಸ್ಪತ್ರೆಯಲ್ಲೇ ಇರಬೇಕು. ಉಳಿಸಿಕೊಳ್ಳಲು ಪ್ರಯತ್ನಿಸೋಣ. ಆಸ್ಪತ್ರೆಯ ಒಟ್ಟು ಬಿಲ್‌ 32 ಲಕ್ಷ ಆಗಬಹುದು ಅಂದಿದ್ದಾರೆ. ಅಂದರೆ, ಇನ್ನೂ 17 ಲಕ್ಷ ಬೇಕು. ಜೀವ ಪಣಕ್ಕಿಟ್ಟಾದರೂ ಅಪ್ಪನನ್ನು ಉಳಿಸ್ಕೋತೀನಿ ಸಾರ್‌. ಈಗ ಒಂದೊಂದು ರುಪಾಯಿ ಕೂಡ ನನಗೆ ಮುಖ್ಯ. ಯಾರ ಬಳಿ ಸಹಾಯ ಕೇಳುವುದು ಸಾರ್‌?’

Advertisement

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕುವುದು, ಪತ್ರಿಕೆಗಳಿಗೆ ಪತ್ರ ಬರೆದು ಸಹಾಯ ಕೇಳುವುದು, ಅಸಹಾಯಕರ ನೆರವಿಗೆಂದೇ ಕೆಲಸ ಮಾಡುವ “ಮಿಲಾಪ್‌’ ಸಂಸ್ಥೆಯ ಮೊರೆ ಹೋಗುವುದು, ಫೇಸ್‌ಬುಕ್‌ನಲ್ಲಿ ದಿನಕ್ಕೆರಡು ಪೋಸ್ಟ್‌ ಹಾಕುತ್ತಾ “ಆ್ಯಕ್ಟೀವ್‌’ ಆಗಿರುವ ಸಚಿವರಲ್ಲಿಯೂ ವಿನಂತಿಸುವುದು, ಆ ರೋಗಿ ಇರುವ ಏರಿಯಾದ ಕಾರ್ಪೊರೇಟರ್‌ ಅಥವಾ ಶಾಸಕರ ಬಳಿ ಚಿಕಿತ್ಸೆಗೆ ಒಂದಷ್ಟು ನೆರವು ಕೇಳುವುದು -ಇವೆಲ್ಲ ದಾರಿಗಳಿದ್ದವು.

ನಮ್ಮದು ಅದೆಂಥಾ ಬ್ಯಾಡ್‌ಲಕ್‌ ಎಂದರೆ- ಕೊರೊನಾ ಕಾರಣ ದಿಂದ “ವಾಚಕರ ವಾಣಿ’ಯಲ್ಲಿ ಸಹಾಯ ಕೇಳುವ ಪತ್ರಗಳ ಪ್ರಕಟ ಣೆಯೇ ನಿಂತುಹೋಗಿತ್ತು. ಕೆಲಸ ಹೋಗಿದೆ/ನಮಗೂ ಸಂಬಳ ಕಡಿ ತ ಆಗಿದೆ ಎನ್ನುತ್ತಾ ಗೆಳೆಯ-ಗೆಳತಿಯರು ಕೈ ಎತ್ತಿದರು. ಫೇಸ್‌ಬುಕ್‌ನಲ್ಲಿ ಆ್ಯಕ್ಟಿವ್‌ ಆಗಿರುವ ಸಚಿವರು ಕರೆ ಸ್ವೀಕರಿಸಲಿಲ್ಲ. ವಾಟ್ಸ್‌ ಆಪ್‌ಗ್ೂ ಉತ್ತರಿಸಲಿಲ್ಲ. ಕಾರ್ಪೊರೇಟರ್‌ಗಳು ಕೈಗೇ ಸಿಗಲಿಲ್ಲ.

ಹೀಗೇ ದಿನಗಳು ಉರುಳುತ್ತಿದ್ದವು. ಒಂದೊಂದು ದಿನ ಕಳೆದಾಗಲೂ ಆಸ್ಪತ್ರೆಯ ಬಿಲ್‌ನ ಮೊತ್ತದಲ್ಲಿ 50 ಸಾವಿರ ರೂ. ಹೆಚ್ಚಾಗುತ್ತಿತ್ತು! ಯಾರಲ್ಲಿ ಸಾಲ ಕೇಳುವುದು? ಎಷ್ಟೂಂತ ದುಡ್ಡು ಹೊಂದಿಸುವುದು ಎಂಬುದೇ ಗೊತ್ತಾಗದ ಸ್ಥಿತಿ. ಈ ಸಂದರ್ಭದಲ್ಲೇ ಸೀಮಾ ಮತ್ತೂಂದು ಯೋಚನೆಯೊಂದಿಗೆ ಬಂದರು. “ಸಾರ್‌, ಎಷ್ಟೋ ಜನ ಸಿನೆಮಾ ಸ್ಟಾರ್‌ಗಳು ರೋಗಿಗಳಿಗೆ ಸಹಾಯ ಮಾಡಿದ್ರು ಅಂತ ನ್ಯೂಸ್‌ ಬರ್ತದಲ್ಲ; ಆ ಥರದ ಸಹಾಯವನ್ನು ನಾನೂ ಕೇಳ್ತೇನೆ. ಹಾಗೇ ನ್ಯೂಸ್‌ ಚಾನೆಲ್‌ಗ‌ಳಲ್ಲೂ ಸಹಾಯಕ್ಕಾಗಿ ರಿಕ್ವೆಸ್ಟ್‌ ಮಾಡ್ತೀನಿ. ಚಾನೆಲ್‌ನ ಮುಖ್ಯಸ್ಥರು ಹಾಗೂ ಹೀರೋಗಳ ನಂಬರ್‌ ಇದ್ರೆ ದಯವಿಟ್ಟು ಕೊಡ್ತೀರಾ? ಪೈಸೆ ಪೈಸೆ ಭಿಕ್ಷೆ ಬೇಡಿದರೂ ಪರವಾಗಿಲ್ಲ. ಅಪ್ಪನನ್ನು ಉಳಿಸ್ಕೋಬೇಕು. ಯಾರಾದರೂ 100 ರೂ. ಸಹಾಯ ಮಾಡಿದ್ರೂ ನನ್ನ ಕಷ್ಟ ಸ್ವಲ್ಪ ಕಡಿಮೆ ಆಗುತ್ತೆ…’

ಉಹುಂ, ಇದರಿಂದಲೂ ಪ್ರಯೋಜನವಾಗಲಿಲ್ಲ. ಚಿತ್ರ ನಟರ ಪಿ.ಎ.ಗಳು, “ಆಮೇಲಿಂದ ನಾವೇ ನಿಮಗೆ ಕಾಲ್‌ ಮಾಡ್ತೇವೆ’ ಅಂದವರು ಅನಂತರ ಅಡ್ರೆಸ್ಸಿಗೇ ಇರಲಿಲ್ಲ. “10-20 ಸಾವಿರ ಆದ್ರೆ ಹೇಗಾದರೂ ಕೊಡಿಸಬಹುದು. ನೀವು ಕೊಟ್ಟಿರೋ ಬಿಲ್‌ನಲ್ಲಿ ಲಕ್ಷ ಅಂತ ಇದೆ. ಇಂಥದಕ್ಕೆ, ಅದರಲ್ಲೂ ವಯಸ್ಸಾದ ರೋಗಿಗಳಿಗೆ ಸಹಾಯ ಮಾಡಲು ಯಾರೂ ಮುಂದೆ ಬರಲ್ಲ’ ಎಂದು
ಚಾನೆಲ್‌ನ ಗೆಳೆಯರೂ ಕೈಚೆಲ್ಲಿದರು. ಕಡೆಯ ಪ್ರಯತ್ನ ಎಂಬಂತೆ, ದಾನ-ಧರ್ಮಕ್ಕೆ ಹೆಸರಾದ ಸಂಸ್ಥೆಗೆ ಫೋನ್‌ ಮಾಡಿದರೆ- “ನಾವೀಗ ಆ ಥರಾ ಸಹಾಯ ಮಾಡೋದನ್ನು ನಿಲ್ಲಿಸಿದ್ದೇವೆ’ ಎಂಬ ಉತ್ತರ ಬಂತು. ಪೈಸೆ ಪೈಸೆಯ ರೂಪದಲ್ಲಿ ಸಹಾಯಕ್ಕೆ ಬರಬಹುದು ಎಂದು ನಂಬಿದ್ದವರೆಲ್ಲಾ ಕೈಚೆಲ್ಲಿದ್ದರು! “ಇನ್ನೂ ಎಷ್ಟು ಕಡೆ ಕೈ ಒಡ್ಡುತ್ತೀಯಾ? ನಮ್ಮ ಹಣೆಬರಹ ಇದ್ದಂತೆ ಆಗಲಿ. ಸುಮ್ಮನಿರು’ ಎಂದು ಈ ವೇಳೆಗೆ ಸೀಮಾಗೂ ಬಂಧುಗಳು ಬುದ್ಧಿ ಹೇಳಿದ್ದರು!

ದಿನಗಳು ಉರುಳುತ್ತಿದ್ದವು. ಮನೆಯಿಂದಲೇ ಕೆಲಸ ಮಾಡುತ್ತಾ, ಅಮ್ಮನಿಗೂ ಸಮಾಧಾನ ಹೇಳುತ್ತ, ಅಪ್ಪನ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾ ಪೈಸೆಗೆ ಪೈಸೆ ಕೂಡಿಸುವ ಕೆಲಸದಲ್ಲಿ ಮಗ್ನಳಾದಳು ಸೀಮಾ. ಅದೊಂದು ರಾತ್ರಿ ಭಾವುಕಳಾಗಿ- “ನಿಮ್ಮಂಥವರ ಹಾರೈಕೆಯ ಫ‌ಲವಾಗಿ ಅಪ್ಪನಿಗೆ ಪ್ರಜ್ಞೆ ಬಂದಿದೆ ಸರ್‌. ಇಷ್ಟು ದಿನ ದುಃಖ ಅಂತ ಅಳ್ತಾ ಇದ್ದೆ. ಈಗ ಸಂತೋಷ ತಡೆಯಲಾಗದೆ ಅಳ್ತಾ ಇದ್ದೇನೆ. ಅಣ್ಣ-ತಮ್ಮ ಅಂತ ನಾಲ್ಕಾರು ಜನ ಇದ್ರೆ ಅವರ ಜತೆ ಜವಾಬ್ದಾರಿ ಮತ್ತು ಫೀಲಿಂಗ್ಸ್‌ ಹಂಚಿಕೊಂಡು ಹಗುರಾಗಬಹುದು. ಆದರೆ ಮನೆಯಲ್ಲಿ ಮಗ- ಮಗಳು ಎರಡೂ ಪಾತ್ರದಲ್ಲಿ ನಾನೇ ಇದ್ದೆ. ನನಗೆ ಸಮಾಧಾನದ ಹೆಗಲು ಬೇಕು ಅನ್ನಿಸಿದಾಗೆಲ್ಲ ನಿಮಗೆ ಮೆಸೇಜ್‌ ಮಾಡಿಬಿಡ್ತಿದ್ದೆ. ಸಾರಿ…’ ಎಂದು ಮೆಸೇಜ್‌ ಹಾಕಿದ್ದಳು. ಹೀಗೇ ಮತ್ತೂ 15 ದಿನಗಳು ಕಳೆದ ಮೇಲೆ ಆಕೆಯಿಂದ ಹೀಗೊಂದು ಮೆಸೇಜ್‌ ಬಂತು: “”ಅಂತೂ ಪವಾಡ ನಡೆದು ಹೋಯ್ತು ಅಂಕಲ್‌. ನಿಮ್ಮೆಲ್ಲರ ಹಾರೈಕೆಯ ಫ‌ಲವಾಗಿ ಅಪ್ಪನನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಇವತ್ತು ಡಿಸ್‌ಚಾರ್ಜ್‌ ಆಯ್ತು. ಫಿಸಿಯೋಥೆರಪಿಗೆ ಹೇಳಿ¨ªಾರೆ. ಬ್ಯಾಂಕ್‌ಲಿ ಪರ್ಸನಲ್‌ ಲೋನ್‌ ತಗೊಂಡು ಆಸ್ಪತ್ರೆ ಬಿಲ್‌ ಕಟ್ಟಿದೆ. ಕಣ್ಣಮುಂದೆ ಅಪ್ಪ ಇದ್ದಾರಲ್ಲ; ಆ ಖುಷಿಯಲ್ಲಿ 10 ವರ್ಷ ದುಡಿದು ಆ ಸಾಲ ತೀರಿಸ್ತೀನಿ…”

ಇನ್ನೂ 30 ವರ್ಷ ದಾಟದ ಸೀಮಾ, ಅಪ್ಪನನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟ, ಬದುಕನ್ನು, ಸವಾಲುಗಳನ್ನು ಎದುರಿಸಿದ ರೀತಿ ಕಂಡು ಮೆಚ್ಚುಗೆ ಮತ್ತು ಬೆರಗು ಒಟ್ಟಿಗೇ ಆಯಿತು. ಆಕೆಯ ಧೈರ್ಯಕ್ಕೆ ಅಭಿನಂದಿಸುತ್ತಾ-“ನಂಬಿದವರೆಲ್ಲ ಕೈಬಿಟ್ಟಿದ್ದು ನಮ್ಮ ದುರಾದೃಷ್ಟ. ದೇವರು ನಿನ್ನ ಕೈಹಿಡಿದದ್ದು ಮಾತ್ರ ಅದೃಷ್ಟ’ ಅಂದೆ.

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next