Advertisement

ಇವಳು ಪಾರ್ವತಮ್ಮನ ಮಗಳು

09:13 AM Apr 29, 2019 | Lakshmi GovindaRaj |

ಕನ್ನಡ ಚಿತ್ರರಂಗದಲ್ಲಿ ಪಾರ್ವತಮ್ಮ ಎಂದರೆ ಮೊದಲು ನೆನಪಿಗೆ ಬರುವ ಹೆಸರು ಅಂದರೆ ಅದು ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್‌. ಈಗ ಈ ವಿಷಯ ಯಾಕೆ ಎಂಬ ಪ್ರಶ್ನೆಗೆ ಈಗಾಗಲೇ “ಡಾಟರ್‌ ಅಫ್ ಪಾರ್ವತಮ್ಮ’ ಹೆಸರಿನ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಹಾಗಾಗಿ ಈ ಶೀರ್ಷಿಕೆಗೊಂದು ಮಹತ್ವ ಇದ್ದೇ ಇದೆ.

Advertisement

ಅಂದಹಾಗೆ, ಈ ಚಿತ್ರದ ಟೈಟಲ್‌ “ಡಾಟರ್‌ ಆಫ್ ಪಾರ್ವತಮ್ಮ’ ಅಂತಿದ್ದರೂ, ಇದು ನಿರ್ಮಾಪಕರಾದ ಪಾರ್ವತಮ್ಮ ಅವರಿಗೆ ಸಂಬಂಧಿಸಿದ್ದಲ್ಲ. ಚಿತ್ರದ ಕಥೆಗೆ ಹೋಲಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಚಿತ್ರಕ್ಕೆ ಇಂಥದ್ದೊಂದು ಟೈಟಲ್‌ ಇಟ್ಟುಕೊಂಡಿದೆ.

ಇನ್ನು ಈ ಚಿತ್ರದಲ್ಲಿ ಪಾರ್ವತಮ್ಮನ ಪಾತ್ರದಲ್ಲಿ ಹಿರಿಯ ನಟಿ ಸುಮಲತ ಅಂಬರೀಶ್‌ ಕಾಣಿಸಿಕೊಂಡರೆ, ಪಾರ್ವತಮ್ಮನ ಮಗಳ ಪಾತ್ರಕ್ಕೆ ಹರಿಪ್ರಿಯಾ ಇದ್ದಾರೆ. ಸದ್ಯ ತನ್ನ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರ ಮೇ 24ರಂದು ಬಿಡುಗಡೆಯಾಗುತ್ತಿದೆ.

ಎನರ್ಜಿಟಿಕ್‌ ಟೈಟಲ್‌!: ಸಾಮಾನ್ಯವಾಗಿ ಯಾವುದೇ ಮಕ್ಕಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರೆ, ನಮ್ಮ ಸುತ್ತಮುತ್ತಲಿನ ಸಮಾಜ ಮೊದಲು ಅವರ ಹೆತ್ತವರ ಹೆಸರಿನಿಂದ ಗುರುತಿಸುತ್ತದೆ. ಈ ಚಿತ್ರದಲ್ಲೂ ಕೂಡ, ಒಬ್ಬ ಹುಡುಗಿಯೊಬ್ಬಳು ತನ್ನ ಕೆಲಸದ ಮೂಲಕ ಸಾಧನೆ ಮಾಡುತ್ತಿರುವಾಗ, ಪಾರ್ವತಮ್ಮ ಎಂಬ ಅವಳ ತಾಯಿಯ ಮೂಲಕ ಅವಳನ್ನು ಗುರುತಿಸುತ್ತಾರೆ.

ಮೊದಲು ಈ ಟೈಟಲ್‌ ಇಡುವಾಗ ನಮಗೂ ಸ್ವಲ್ಪ ಭಯವಿತ್ತು. ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಭಯವಿತ್ತು. ಆದರೆ ಟೈಟಲ್‌ ಅನೌನ್ಸ್‌ ಆದ ನಂತರ ಎಲ್ಲಾ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗೋದಕ್ಕೆ ಶುರುವಾಯ್ತು. ಪಾರ್ವತಮ್ಮ ಎಂಬ ಹೆಸರಿನಲ್ಲೇ ಸಾಕಷ್ಟು ಎನರ್ಜಿ, ಪಾಸಿಟಿವ್‌ ವೈಬ್ರೇಷನ್ಸ್‌ ಇರೋದ್ರಿಂದ ಚಿತ್ರಕ್ಕೆ ಕೂಡ ಡಾಟರ್‌ ಆಫ್ ಪಾರ್ವತಮ್ಮ ಎಂದು ಟೈಟಲ್‌ ಇಡಲಾಗಿದೆ. ಅನ್ನೋದು ಚಿತ್ರತಂಡದ ಮಾತು.

Advertisement

ರಿಲೀಸ್‌ಗೂ ಮೊದಲೇ ಬಿಗ್‌ ರೆಸ್ಪಾನ್ಸ್‌…: ಸುಮಾರು ಒಂದು ವರ್ಷಗಳ ಹಿಂದೆ ಸೆಟ್ಟೇರಿದ್ದ ಡಾಟರ್‌ ಆಫ್ ಪಾರ್ವತಮ್ಮ ಚಿತ್ರ ತನ್ನ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರೋದಕ್ಕೆ ರೆಡಿಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಫ‌ಸ್ಟ್‌ಲುಕ್‌, ಪೋಸ್ಟರ್‌ ಮತ್ತು ಟೀಸರ್‌ಗಳಿಗೆ ಚಿತ್ರರಂಗದಿಂದ ಮತ್ತು, ಚಿತ್ರ ಪ್ರೇಮಿಗಳಿಂದ ದೊಡ್ಡ ಪ್ರತಿಕ್ರಿಯೆ ಸಿಗುತ್ತಿದೆ.

ಚಿತ್ರದ ಆಡಿಯೋ ಹಕ್ಕುಗಳನ್ನು ಪುನೀತ್‌ ರಾಜಕುಮಾರ್‌ ಒಡೆತನದ ಪಿಆರ್‌ಕೆ ಆಡಿಯೋ ಖರೀದಿಸಿದೆ. ಸದ್ಯ ಚಿತ್ರದ ಪ್ರಮೋಷನಲ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ ಮೇ ಮೊದಲ ವಾರದಲ್ಲಿ ಚಿತ್ರದ ಲಿರಿಕಲ್‌ ವೀಡಿಯೋ ಬಿಡುಗಡೆ ಮಾಡುವ ಪ್ಲಾನ್‌ ಹಾಕಿಕೊಂಡಿದೆ.

ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌…: ಇನ್ನು “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಚಿತ್ರತಂಡ, ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ ಚಿತ್ರ ಎನ್ನುತ್ತದೆ. ಒಂದು ಚಿತ್ರದಲ್ಲಿ ಇರಬೇಕಾದ ಸೆಂಟಿಮೆಂಟ್‌, ಎಮೋಷನ್ಸ್‌, ಲವ್‌, ಆ್ಯಕ್ಷನ್ಸ್‌, ಕಾಮಿಡಿ, ಥ್ರಿಲ್ಲರ್‌ ಎಲಿಮೆಂಟ್ಸ್‌ ಎಲ್ಲವೂ ಚಿತ್ರದಲ್ಲಿದೆ. ಎರಡು ಫೈಟ್ಸ್‌, ಭರ್ಜರಿ ಚೇಸ್‌ ದೃಶ್ಯಗಳು ಚಿತ್ರದಲ್ಲಿದೆ.

ಅಮ್ಮ-ಮಗಳು ಕಂಬಿನೇಷನ್‌ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ. ಇಡೀ ಚಿತ್ರದಲ್ಲಿ ಎಲ್ಲೂ ಕೆಟ್ಟ ಪದ ಪ್ರಯೋಗ ಮಾಡಿಲ್ಲ. ಅಶ್ಲೀಲ ದೃಶ್ಯಗಳಿಲ್ಲ. ಇತ್ತೀಚೆಗೆ ಚಿತ್ರವನ್ನು ನೋಡಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಕೂಡ ಚಿತ್ರದ ಯಾವುದೇ ದೃಶ್ಯ, ಸಂಭಾಷಣೆಗಳಿಗೆ ಆಕ್ಷೇಪವೆತ್ತದೆ ಚಿತ್ರಕ್ಕೆ ಯು ಸರ್ಟಿಫಿಕೇಟ್‌ ನೀಡಿದೆ. ಹಾಗಾಗಿ ಒಂದೇ ಮಾತಿನಲ್ಲಿ ಹೇಳ್ಳೋದಾದ್ರೆ ಡಾಟರ್‌ ಆಫ್ ಪಾರ್ವತಮ್ಮ ಇಡೀ ಕುಟುಂಬ ಕುಳಿತು ನೋಡಬಹುದಾದ ಚಿತ್ರ ಅನ್ನೋದು ಚಿತ್ರತಂಡದ ಮಾತು.

ಪಾರ್ವತಮ್ಮ ಆಗಿ ಸುಮಲತ, ಮಗಳಾಗಿ ಹರಿಪ್ರಿಯ: “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರದ ಮುಖ್ಯ ಕೇಂದ್ರ ಬಿಂದು ಎಂದರೆ ಹಿರಿಯ ನಟಿ ಸುಮಲತ ಮತ್ತು ಹರಿಪ್ರಿಯ. ಚಿತ್ರದಲ್ಲಿ ಸುಮಲತ ಪಾರ್ವತಮ್ಮನಾಗಿ ಕಾಣಿಸಿಕೊಂಡರೆ, ಹರಿಪ್ರಿಯ ಮಗಳಾಗಿ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ, ಈ ಚಿತ್ರ ಹರಿಪ್ರಿಯ ಸಿನಿ ಕೆರಿಯರ್‌ನ 25ನೇ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಹರಿಪ್ರಿಯ ಸಿಐಡಿ ಅಧಿಕಾರಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇಲ್ಲಿಯವರೆಗೆ ಯಾವ ಚಿತ್ರಗಳಲ್ಲೂ ಕಾಣಿಸಿಕೊಂಡಿರದ ಡಿಫ‌ರೆಂಟ್‌ ಲುಕ್‌ನಲ್ಲಿ ಹರಿಪ್ರಿಯ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಉಳಿದಂತೆ ಸೂರಜ್‌ ಗೌಡ, ಪ್ರಭು, ತರಂಗ ವಿಶ್ವ, ರಾಘವೇಂದ್ರ, ಶ್ರೀಧರ್‌, ಸುಧಿ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ನುರಿತ ತಂತ್ರಜ್ಞರ ಕೈಯಲ್ಲಿ ಮೂಡಿಬಂದ ಚಿತ್ರ: ದಿಶಾ ಎಂಟರ್‌ಟೈನ್ಮೆಂಟ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರವನ್ನು ಶಶಿಧರ್‌ ಕೆ.ಎಂ, ಕೃಷ್ಣ, ಮಧು, ಸಂದೀಪ್‌ ಜಂಟಿಯಾಗಿ ನಿರ್ಮಿಸಿದ್ದಾರೆ.

ಈ ಹಿಂದೆ “ರಣ ವಿಕ್ರಮ’, “ಜೆಸ್ಸಿ’, “ನಟರಾಜ ಸರ್ವಿಸ್‌’ ಸೇರಿದಂತೆ ಹಲವು ಚಿತ್ರಗಳಿಗೆ ಸಹ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಶಂಕರ್‌. ಜೆ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅರೂಲ್‌ ಕೆ. ಸೋಮಸುಂದರಂ ಛಾಯಾಗ್ರಹಣ, ಸುರೇಶ್‌ ಆರ್ಮುಗಂ ಸಂಕಲನ, ಪ್ರಗತಿ ರಿಷಭ್‌ ಶೆಟ್ಟಿ ಕಾಸ್ಟೂéಮ್‌, ಮಿಧುನ್‌ ಮುಕುಂದನ್‌ ಸಂಗೀತ ಸಂಯೋಜನೆ ಇದೆ.

24 ರಂದು 150 ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ರಿಲೀಸ್‌: ಸದ್ಯ ಡಾಟರ್‌ ಆಫ್ ಪಾರ್ವತಮ್ಮ ಚಿತ್ರಕ್ಕೆ ಸಿಗುತ್ತಿರುವ ಭರ್ಜರಿ ರೆಸ್ಪಾನ್ಸ್‌ ನೋಡಿ ಖುಷಿಯಾಗಿರುವ ಚಿತ್ರತಂಡ ಇದೇ ಮೇ 24ರಂದು ರಾಜ್ಯದಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next