ಅವಳೆಂದರೆ……. ಬರವಣಿಗೆಗೆ ಮೀರಿದ ಬದುಕು. ಗುಳಿ ಕೆನ್ನೆಯ ಮಾಯಾಂಗನೆ ಮನದಿ ಹೊಕ್ಕು ನವ ಚಿತ್ತಾರ ಮೂಡಿಸಿದವಳು. ಕ್ಷಣ ಕಾಲ ಮನ ಸುಮ್ಮನಿದ್ದರೂ ಮರಳಿ ಅವಳದೇ ಧ್ಯಾನ. ಸುಂದರತೆಗೂ ಮೀರಿದ ಸೊಗಸು ಅವಳ ನಡವಳಿಕೆ. ನಗುವ ಬೀದಿಯಲ್ಲಿ ನವ ರಂಗವಲ್ಲಿ ಚೆಲ್ಲಿ ನಿಮಿಷ ನಿಮಿಷಕೂ ಅವಳ ಉಸಿರಿನ ಜೊತೆ ಸೇರುವ ತವಕ. ನಯನಗಳು ಅರಳಲು ಅದರಲ್ಲೇ ಮುಳುಗೈಳುವ ಭಾವ. ತುಟಿಯಂಚಿನ ರಂಗೇ ಸಾಕು ಅವಳ ಸನಿಹ ಬಯಸಲು. ಹುಸಿ ಮುನಿಸಿನಲಿ ಮಗುವ ಮೀರಿಸುವಳು.
ಅವಳೇ ಹಾಗೆ ಬೇಡವೆಂದರೂ ಜಪದಲ್ಲಿ ಮುಳುಗುವ ಹಾಗೆ ಮಾಡುವವಳು. ಬಾನಂಗಳದಿ ಹಾರುವ ಬಾಲಂಗೋಚಿಗೂ ಅವಳ ಕೈ ಬೆರಳ ಸೋಕಿ ತುಸು ಮೇಲೆರುವ ಬಯಕೆ. ಮುಂಜಾನೆಯ ಇಬ್ಬನಿಗೂ ಅವಳ ಅಂದ ಕಣ್ತುಂಬಿಕೊಳ್ಳುವ ಇರಾದೆ. ಭೂರಮೆಯ ಮಡಲಿಗೆ ತಿಳಿ ಬೆಳದಿಂಗಳ ನೀಡುವ ಚಂದ್ರನಿಗೂ ಅವಳ ಜೊತೆ ಸ್ನೇಹ ಮಾಡುವ ತವಕ.
ತಂಗಾಳಿಯ ತಂಪಿಗೂ ಅವಳ ಜೊತೆ ತೇಲುವ ಆಸೆ. ಶಾಂತವಾಗಿ ಹರಿಯುವ ನದಿಯೂ ಅವಳ ಅಂದಕೆ ಅಭಿಮಾನಿ. ಅವನೊಲವಿನ ತೇರಲಿ ನಿತ್ಯವೂ ಅವಳದೇ ಮೆರವಣಿಗೆ. ಅವಳೊಂದು ನೋಟಕೆ ಅವನಲ್ಲೂ ನಾಚಿಕೆಯ ಭಾವ. ಮನದಿ ಮೂಡುವ ಭಾವಗಳೆಲ್ಲ ಜೊತೆ ಸೇರಿ ಅವಳೊಲವಿನ ದಾರಿ ಸಂಧಿಸಲು,ಹೃದಯ ಬಡಿತ ಏರುಪೇರು.
ಹಿತವಾದ ಹಾದಿಯಲಿ ನವ ರಾಗ ಆಲಾಪ ಮೂಡಿ ಸಂಗೀತ ರೂಪು ತಾಳುತಿರೆ ಮನದಿ ಪುಳಕ. ಮುದ್ದು ಮೊಗದ ರಾಜಕುಮಾರಿಗೆ ಮನ ದಾಸನಾಗಿದೆ. ಬದುಕೆಂಬ ಉಸಿರಿಗೆ ಅವಳ ಹೆಸರೇ ಸದಾ ಹಸಿರಾಗಿದೆ. ಅವಳ ಒಲವ ಗತಿಯಲ್ಲಿ ಮನ ಚಲಿಸಬಯಸಿದೆ.ಎಲ್ಲ ಮೀರಿ ಅವಳ ಸಾಂಗತ್ಯ ನೀಡಿದ ಸಂಭ್ರಮ ಮತ್ತೆಲ್ಲೂ ಸಿಗದಾಗಿದೆ.
ಸಂಗೀತಾ ಪಿ.
ಪಂಚಲಿಂಗ