ಹೌದು, ನಾವು ನೀವು ಎಲ್ಲರೂ ಸೇರಿದಂತೆ ಸಾಮಾನ್ಯರು ಕಷ್ಟದಲ್ಲಿರುವುದು, ಸಂಕಷ್ಟವನ್ನು ಅನುಭವಿಸುವುದು ಕಂಡಿದ್ದೇವೆ. ಆಡಳಿತದ ಧೋರಣೆಯಲ್ಲಿ ಚಿತ್ರಹಿಂಸೆಯನ್ನು ಅನುಭವಿಸಿದ ಎಷ್ಟೋ ಮಂದಿ ಇದ್ದಾರೆ. ಆದರೇ, ಇದೊಂದು ವಿಚಾರ ತೀರಾ ಅಪರೂಪದ ಘಟನೆ.
ದುಬೈ ಯುವರಾಣಿಯ ದಯನೀಯ ಸ್ಥಿತಿ ಇದು, ಮಾತ್ರವಲ್ಲ.. ಆಕೆ ಪಡುತ್ತಿರುವ ವ್ಯಥೆ ಕೂಡ ಹೌದು.
ದುಬೈನ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಪುತ್ರಿ,ಯುವರಾಣಿ ಲತೀಫಾ ಅವರು ಮೂರು ವರ್ಷಗಳ ಹಿಂದೆ ತಂದೆಯ ಕಿರುಕುಳದಿಂದ ಬೇಸತ್ತು ದುಬೈನಿಂದ ಹಡಗಿನಲ್ಲಿ ಪರಾರಿಯಾಗಿದ್ದಳು. ಆದರೆ ಆಕೆಯ ಅದೃಷ್ಟ ಕೈಕೊಟ್ಟಿದ್ದು ಭಾರತದ ಗೋವಾದಲ್ಲಿ…ಹೌದು ಹಡಗಿನಲ್ಲಿದ್ದ ದುಬೈ ಯುವರಾಣಿಯನ್ನು ಭಾರತೀಯ ವಿಶೇಷ ಪಡೆ ಬಂಧಿಸಿತ್ತು!
ಓದಿ : ಅಪ್ಪನ ಹೆಸರಿನಲ್ಲಿ ನನಗೆ ಅವಕಾಶ ಬೇಡ…ಸ್ವಪ್ರತಿಭೆಯಿಂದ ಸಾಧಿಸುವೆ : ನಟಿ ಟೀನಾ
2018 ರಲ್ಲಿ ಅಪ್ಪನ ಹಿಡಿತದಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡಲು ಯತ್ನಿಸಿದ ದುಬೈನ ದೊರೆ ಮಗಳು “ಹಡಗಿನಲ್ಲಿ ಭಾರತದ ಕಮಾಂಡೋಗಳಿಂದ ಬಂಧನಕ್ಕೊಳಗಾದೆ” ಎಂದು ಮಂಗಳವಾರ ಬಿಬಿಸಿ ಪ್ರಸಾರ ಮಾಡಿದ ವಿಡಿಯೋದಲ್ಲಿ ಅಲವತ್ತುಕೊಂಡಿದ್ದಾಳೆ.
ಶೇಖಾ ಲತೀಫಾ ಅವರು ಮಾರ್ಚ್ 2018 ರಲ್ಲಿ ದುಬೈನಿಂದ ಪರಾರಿಯಾದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
“ನಾನು ಒತ್ತೆಯಾಳು ಆಗಿದ್ದೇನೆ” “ಈ ಪರಿಸ್ಥಿತಿಯಲ್ಲಿ ಬದುಕುಳಿಯುತ್ತೇನೆ ಎನ್ನುವುದು ನನಗೆ ತಿಳಿದಿಲ್ಲ” ಎಂದು ಸೆರೆಹಿಡಿದ ಸುಮಾರು ಒಂದು ವರ್ಷದ ನಂತರ ರಹಸ್ಯವಾಗಿ ಪಡೆದ ಫೋನ್‌ನಲ್ಲಿ ಶೇಖಾ ಲತಿಫಾ ವಿಲ್ಲಾದ ಸ್ನಾನಗೃಹವೊಂದರಲ್ಲಿ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಬಿಬಿಸಿ ಹೇಳಿದೆ.
ಬಿಬಿಸಿ ಬಿಡುಗಡೆ ಮಾಡಿದ ವೀಡಿಯೊಗಳು ಶೇಖಾ ಲತಿಫಾ ಬಿಂಟ್ ಮೊಹಮ್ಮದ್ ಅಲ್ ಮಕ್ತೌಮ್ ಅವರನ್ನು “ಜೈಲಾನ್ನಾಗಿ ಪರಿವರ್ತಿಸಿದ ವಿಲ್ಲಾ” ದಲ್ಲಿ ಇರಿಸಿರುವುದಾಗಿ ತಿಳಿಸಿದೆ.
ಈ ವಿಲ್ಲಾ ಯುನೈಟೆಡ್ ಅರಬ್ ಎಮಿರೇಟ್ಸ್ನ ಗಗನ ಚುಂಬಿ ಕಟ್ಟಡದಿಂದ ಕೂಡಿರುವ ಪ್ರದೇಶದಲ್ಲಿದೆ. ಆಕೆಯ ತಂದೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಯುಎಇ ಅನುವಂಶಿಕವಾಗಿ ಆಳಿದ ಪ್ರಧಾನಮಂತ್ರಿ ಮತ್ತು ಉಪಾಧ್ಯಕ್ಷರಾಗಿದ್ದಾರೆ.
“ಈ ವಿಲ್ಲಾವನ್ನು ಜೈಲಾಗಿ ಪರಿವರ್ತಿಸಲಾಗಿದೆ.””ಯಾವುದೇ ತಾಜಾ ಗಾಳಿಯನ್ನು ಪಡೆಯಲು ನಾನು ಹೊರಗೆ ಹೋಗಲು ಕೂಡ ಸಾಧ್ಯವಿಲ್ಲ” ಎಂದು ಲತೀಫಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
“ನಾನು ಯಾವಾಗ ಬಿಡುಗಡೆಯಾಗುತ್ತೇನೆ ಮತ್ತು ನಾನು ಬಿಡುಗಡೆಯಾದಾಗ ಪರಿಸ್ಥಿತಿಗಳು ಹೇಗಿರುತ್ತವೆ ಎಂದು ನನಗೆ ತಿಳಿದಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.
“ಪ್ರತಿ ದಿನ ನನ್ನ ಸುರಕ್ಷತೆ ಮತ್ತು ನನ್ನ ಜೀವದ ಬಗ್ಗೆ ನಾನು ಚಿಂತೆ ಮಾಡುತ್ತೇನೆ”ಎಂದು ವೀಡಿಯೋದಲ್ಲಿ ಯುವರಾಣಿ ಆತಂಕದಿಂದ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾಳೆ.
2018 ರಲ್ಲಿ ಸ್ನೇಹಿತೆಯೋರ್ವಳ ಸಹಾಯದಿಂದ ಲತೀಫಾ ಹಡಗಿನ ಮೂಲಕ ಪಲಾಯನ ಗೈದಿದ್ದರು. ಆಕೆಯನ್ನು ಗೋವಾದಲ್ಲಿ ಭಾರತದ ಕಮಾಂಡೋಗಳು ಸೆರೆಹಿಡಿದಿದ್ದರು.
“ಭಾರತದ ಕಮಾಂಡೋಗಳು ನನ್ನನ್ನು ಒಂದು ಕೋಣೆಗೆ ಕರೆದೊಯ್ದರು, ಅಲ್ಲಿ ನಾಲ್ಕೈದು ಮಂದಿ ಇದ್ದರು. ನಾನು ನನಗೆ ರಾಜಕೀಯ ಆಶ್ರಯ ನೀಡಿ ಎಂದು ಕೇಳಿಕೊಂಡೆ. ದುಬೈಗೆ ಮರಳಲು ನಾನು ಇಚ್ಛಿಸುವುದಿಲ್ಲ ಎಂದು ಹೇಳಿಕೊಂಡೆ”ಎಂದು ಲತಿಫಾ ವಿವರಿಸಿದ್ದಾರೆ.
ಆದರೆ ಭಾರತೀಯ ಕಮಾಂಡೋಗಳು ನನ್ನ ಬೇಡಿಕೆಯನ್ನು ಮನ್ನಿಸಲೇ ಇಲ್ಲ.ನಂತರ ನಾನು ಒಂಟಿಯಾಗಿದ್ದೆ. ಬಂಧನದಲ್ಲಿದ್ದೆ. ಯಾವುದೇ ವೈದ್ಯಕೀಯ ಚಿಕಿತ್ಸೆ ನನಗೆ ನೀಡಿರಲಿಲ್ಲ. ನಂತರ “ನನ್ನ ವಿರೋಧದ ನಡುವೆಯೇ ನನ್ನನ್ನು ಬಲವಂತವಾಗಿ ಜೆಟ್ ನಲ್ಲಿ ದುಬೈಗೆ ಕರೆತರಲಾಯಿತು ಎಂದು ಲತೀಫಾ ವೀಡಿಯೋದಲ್ಲಿ ತಿಳಿಸಿದ್ದಾರೆ.
ಟೀನಾ ಜೌಹೈನನ್ ಯಾರು..? ಆಕೆಯ ಪಾತ್ರವೇನು…
ಭಾರತದ ಕಮಾಂಡೋಗಳು ಸೆರೆ ಹಿಡಿದಿದ್ದ ಹಡಗಿನಲ್ಲಿ “ಲತೀಫಾ ಮಲಗಿದ್ದಾಗ ಅವಳ ಎರಡು ಕೈಗಳನ್ನು ಹಿಂದಕ್ಕೆ ಕಟ್ಟಲಾಗಿತ್ತು.. ನಾನು ಅವರಲ್ಲಿ ರಾಜಕೀಯ ಆಶ್ರಯ ನೀಡಿ ಎಂದು ಕೇಳಿಕೊಂಡೆ, ಆದರೇ ನನ್ನ ಮಾತುಗಳನ್ನು ಕೇಳುವುದಕ್ಕೆ ತಯಾರಿರಲಿಲ್ಲ” ಎಂದು ಯುವರಾಣಿ ಲತೀಫಾ ಗೆಳತಿ ಟೀನಾ ಜೌಹೈನನ್ ಬಿಬಿಸಿಗೆ ವಿವರಿಸಿದ್ದಾರೆ.
ಇನ್ನು, 2010 ರಲ್ಲಿ ದುಬೈನ ಕಾಪೂಯೈರಾ ಎಂಬ ಸಮರ ಕಲೆ ಅಭ್ಯಾಸ ಮಾಡುವಾಗ ಲತೀಫಾಳನ್ನು ಜೌಹೈನನ್ ಭೇಟಿ ಮಾಡಿದ್ದಳು. ಆಗ ಲತೀಫಾ, ನನ್ನ ಬಳಿ ಅಪ್ಪನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವೆಯಾ ಎಂದು ಕೇಳಿಕೊಂಡಿದ್ದಳು ಎಂದು ವಿವರಿಸಿದ್ದಾರೆ.
ಓದಿ : ರೈತರ ಪ್ರತಿಭಟನೆಯನ್ನು ಪಶ್ಚಿಮ ಬಂಗಾಲಕ್ಕೆ ವಿಸ್ತರಿಸುತ್ತೇವೆ : ಟಿಕಾಯತ್
“ಸ್ಕೈ ಡೈವಿಂಗ್ ಅಪಘಾತದಲ್ಲಿ ಆಕೆ ತನ್ನ ಸ್ನೇಹಿತನನ್ನು ಕಳೆದುಕೊಂಡಿದ್ದಳು. ಆಕೆ ಅದರಿಂದ ಖಿನ್ನತೆಗೆ ಒಳಗಾಗಿದ್ದಳು. ಅಪ್ಪನ ಹಿಡಿತದಿಂದಾಗಿ ಸ್ವಲ್ಪವೂ ಆಕೆಗೆ ಸ್ವಾತಂತ್ರ್ಯ ಇಲ್ಲದಂತಾಗಿತ್ತು.”
ಪಲಾಯನಕ್ಕೆ ಯತ್ನಿಸಿದ ವಿಚಾರವನ್ನು ಕೂಡ ಜೌಹೈನನ್ ವಿವರಿಸಿದ್ದಾರೆ. “ಪಲಾಯನ ಮಾಡಲು ಯೋಚಿಸಿದ ದಿನ ನಾವಿಬ್ಬರು ದುಬೈನ ಕೆಫೆಯೊಂದರಲ್ಲಿ ಭೇಟಿಯಾಗಿದ್ದೆವು. ಅಲ್ಲಿ ಲತೀಫಾ ತನ್ನ ಬಟ್ಟೆಬದಲಾಯಿಸಿಕೊಂಡಿದ್ದಳು.
ತನ್ನ ಮೊಬೈಲ್ ಸಂಪರ್ಕವನ್ನು ತೆಗೆದು ಹಾಕಿದ್ದ ನಂತರ ನಾವು ಓಮನ್ನತ್ತ ಕಾರಿನಲ್ಲಿ ಪ್ರಯಾಣ ಬೆಳೆಸಿದೆವು.”ಆ ಸಂದರ್ಭ ಲತೀಫಾ ಮತ್ತು ಜೌಹೈನನ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.
ಇದು ಅತ್ಯಂತ ಭಯಾನಕವಾಗಿತ್ತು…!
“ನಾವು ಅರೇಬಿಯನ್ನಿಂದ ಭಾರತದ ಕರಾವಳಿಯತ್ತ ಹೊರಟೆವು. ಹಡಗಿನಲ್ಲಿದ್ದ 8ನೇ ದಿನದಂದು ಭಾರತದ ಕಮಾಂಡೋಗಳು ನಮ್ಮನ್ನು ಅತ್ಯಾಧುನಿಕ ಗನ್ನೊಂದಿಗೆ ಸುತ್ತುವರಿದಿದ್ದರು. ಆ ಸ್ಥಿತಿ ಭಯಾನಕವಾಗಿತ್ತು.”
“ಗನ್ ಹಿಡಿದು ನಮ್ಮನ್ನು ಗದರಿಸಿದ್ದು, ನಿಮ್ಮನ್ನು ಸಾಯಿಸುತ್ತೇವೆ ಎಂದು ಬೆದರಿಸಿದ್ದರು. ಆ ಕ್ಷಣ ನನ್ನ ಪಾಲಿಗೆ ಅತ್ಯಂತ ಭಯಾನಕವಾಗಿತ್ತು. ನಾನು ಮತ್ತು ಲತೀಫಾ ತುಂಬಾ ಹೆದರಿದ್ದೆವು.”
“ನಾನು ಅವರಲ್ಲಿ ರಾಜಕೀಯ ಆಶ್ರಯ ನೀಡುವಂತೆ ಕೇಳಿಕೊಂಡೆ. ಅವರು ನನ್ನ ಕೋರಿಕೆ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಲತೀಫಾಳ ಕೈಗಳನ್ನು ಕಟ್ಟಿ ಹಾಕಲಾಗಿತ್ತು. ಆಕೆ ಸಂಪೂರ್ಣ ಬಳಲಿದ್ದಳು. ಕೊನೆಗೆ ಆಕೆಯನ್ನು ಎಳೆದು ಕೊಂಡು ಹೋದರು. ಆ ದೃಶ್ಯ ತುಂಬಾ ಶೋಚನೀಯವಾಗಿತ್ತು.”
ಓದಿ : ಕೇರಳ ವಿಧಾನಸಭಾ ಚುನಾವಣೆ; ಮೆಟ್ರೋ ಮ್ಯಾನ್ ಶ್ರೀಧರನ್ ಬಿಜೆಪಿ ಸೇರ್ಪಡೆ
ಜೌಹೈನನ್ ಲತೀಫಾಳನ್ನು ಕಂಡಿದ್ದು ಅದೇ ಕೊನೆಯ ಬಾರಿ. ಅದಾದ ಮೇಲೆ ಮತ್ತೆ ಕಂಡಿಲ್ಲ. ಎಮಿರೆಟ್ಸ್ ಗೆ ತಲುಪಿರಬಹುದು ಎಂದು ಆಕೆ ನಂಬಿದ್ದಳು.
ಜೌಹೈನನ್ ಅವರನ್ನು ಕೂಡ ಹಡಗಿನಲ್ಲಿ ವಾಪಸ್ ಕರೆತರಲಾಯಿತು. ಮೂರು ವಾರಗಳ ಕಾಲ ರಾಷ್ಟ್ರೀಯ ಭದ್ರತಾ ಕಾರಾಗೃದಲ್ಲಿ ಇರಿಸಲಾಯಿತು. ಅಲ್ಲಿ ಆಕೆಗೆ ಬೆದರಿಸುವುದು, ಹೆದರಿಸುವುದು ಎಲ್ಲವೂ ಕೂಡ ನಡೆದಿತ್ತು. ವಿಚಾರಣೆಯ ನಂತರ ಆಕೆಯನ್ನು ಬಿಡುಗಡೆ ಮಾಡಲಾಯಿತು.
ಇತ್ತೀಚಿನ ಬ್ರಿಟನ್ ಪ್ರಕರಣದ ಭಾಗವಾಗಿ ಜೌಹೈನೆನ್ ಲಂಡನ್ ನ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ಹೇಳಿಕೆ ನೀಡಿದ್ದರು ಮತ್ತು ಇದು ನಿಜವೆಂದು ದೃಢಪಟ್ಟಿತು.
“ಲತೀಫಾಗೆ ಸಂಬಂಧಿಸಿದ ಸಾಕ್ಷ್ಯಗಳ ಒಟ್ಟಾರೆ ಮೌಲ್ಯಮಾಪನ ಮಾಡುವಾಗ, ಟೀನಾ ಜೌಹೈನೆನ್ ಅವರ ಸಾಕ್ಷ್ಯವನ್ನು ಏಕ ಪ್ರಾಮುಖ್ಯತೆ(singular importance) ಎಂದು ನಾನು ಪರಿಗಣಿಸುತ್ತೇನೆ” ಎಂದು ನ್ಯಾಯಾಧೀಶ ಆಂಡ್ರ್ಯೂ ಮೆಕ್ಫಾರ್ಲೇನ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
2012 ರಲ್ಲೂ ಲತೀಫಾ ತನ್ನ 16 ನೇ ವಯಸ್ಸಿನಲ್ಲೂ ಕೂಡ ಪಲಾಯನ ಆಗುವುದಕ್ಕೆ ಪ್ರಯತ್ನ ಪಟ್ಟಿದ್ದರು. ಆದರೇ, ಸುಲಭವಾಗಿ ಪತ್ತೆಯಾಗಿದ್ದರು.
ಸಂಗ್ರಹ ಬರಹ : ಶ್ರೀರಾಜ್ ವಕ್ವಾಡಿ
ಓದಿ : ಗಾಂಧಿ ಕುಟುಂಬದ ಆಪ್ತ, ಮಾಜಿ ಕೇಂದ್ರ ಸಚಿವ ಕ್ಯಾಪ್ಟನ್ ಸತೀಶ್ ಶರ್ಮಾ ನಿಧನ