Advertisement

ಮೈ ಹೂಂ ಶಾನ್‌.. ಮೈ ಹೂಂ ಡಾನ್‌…!

01:25 PM Feb 27, 2017 | Team Udayavani |

ಹುಬ್ಬಳ್ಳಿ: ಕುಡಿನೋಟವೇ ಮನಮೋಹಕ…ಒಡನಾಟವೇ ಬಲು ರೋಚಕ….., ಏನೋ ಒಂಥರಾ… ಏನೋ ಒಂಥರಾ.. ಈ ಪ್ರೀತಿಯು, ಈ ರೀತಿಯು ಶುರುವಾದ ಆನಂತರ…… ಕನ್ನಡ ಹಾಡುಗಳಲ್ಲದೇ ತುನೆ ಮುಝೆ ಪೆಹೆಚಾನಾ ನಹಿ.. ಜಾನಾ ಮೈ ಅಂಜಾನಾ ನಹಿ…..ಮೈ ಹೂಂ…ಡಾನ್‌ ಬಿಡುವಿಲ್ಲದೇ ಪ್ರಸಿದ್ಧ ಗೀತೆಗಳನ್ನು ಪ್ರಸ್ತುತ ಪಡಿಸುವ ಮೂಲಕ ಹಿನ್ನೆಲೆ ಗಾಯನ ಕ್ಷೇತ್ರದ ಡಾನ್‌ ಎಂಬುದನ್ನು ಗಾಯಕ ಶಾನ್‌ ನಿರೂಪಿಸಿದರು.

Advertisement

ಬಾಲಿವುಡ್‌ ಹಾಡುಗಳೊಂದಿಗೆ ಸ್ಯಾಂಡಲ್‌ವುಡ್‌ ಹಾಡುಗಳನ್ನು ಹಾಡುವ ಮೂಲಕ ಸಹಸ್ರಾರು ಪ್ರೇಕ್ಷಕರನ್ನು ರಂಜಿಸಿದರು. ಕೆಎಲ್‌ಇ ಶತಮಾನೋತ್ಸವದ ಪ್ರಯುಕ್ತ ಕೆಎಲ್‌ಇ ಜಿಮ್‌ಖಾನಾ ಮೈದಾನದಲ್ಲಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಬಿ.ವಿ. ಭೂಮರೆಡ್ಡಿ ಕಾಲೇಜ್‌ ಆಫ್ ಎಂಜಿನೀಯರಿಂಗ್‌ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮವನ್ನು ಶಾನ್‌ ರೋಚಕವಾಗಿಸಿದರು.

ಕಾರ್ಯ ಕ್ರಮವನ್ನು ಕಾಲೇಜು ವಿದ್ಯಾರ್ಥಿಗಳು, ಪಾಲಕರು, ಬೋಧಕ ಸಿಬ್ಬಂದಿ ಆನಂದಿಸಿದರು. ಶಾನ್‌ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಮೈ ಹೂಂ ಡಾನ್‌ ಹಾಡಿನ ಮೂಲಕ ತಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಡಿನ ಕೊನೆಗೆ ಮೈ ಹೂಂ ಡಾನ್‌ ಮೈ ಹೂಂ ಶಾನ್‌ ಎಂದು ಹಾಡಿದಾಗ ಪ್ರೇಕ್ಷಕರು “ಹೋ’ ಎಂದು ಕೂಗಿದರು. 

ಡಾನ್‌ ಹಾಗೂ ಬಾಡಿಗಾರ್ಡ್‌ ಚಿತ್ರಗಳ ಪ್ರಸಿದ್ಧ ಗೀತೆಗಳನ್ನು ಪ್ರಸ್ತುತಪಡಿಸಿದ ನಂತರ “ನೋ ಕಿಡ್ಡಿಂಗ್‌’ ಎಂಬ ಆಂಗ್ಲ ಗೀತೆಯನ್ನು ಹಾಡಿ ಯುವ ಸಮುದಾಯದ ಗಮನ ಸೆಳೆದರು.  ಕನ್ನಡದ ಪ್ರೇಕ್ಷಕರಿಗಾಗಿ ಎರಡು ಗೀತೆಗಳನ್ನು ಹಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಂತರ ಹಿಂದಿ ಹಾಡುಗಳ ಗಾಯನ ಮುಂದುವರಿಸಿದರು.

ಇತ್ತೀಚಿನ ಚಿತ್ರಗಳ ಹಾಡುಗಳಿಗೆ ಹೆಚ್ಚು ಆದ್ಯತೆ ನೀಡಿದ ಶಾನ್‌ ಯುವ ಜನರನ್ನು ಗುರಿಯಾಗಿಟ್ಟುಕೊಂಡು ಹಾಡಿದರು. ಹಾಡುಗಳ ಮಧ್ಯೆ ನೃತ್ಯ ಮಾಡುತ್ತ, ಪ್ರೇಕ್ಷಕರು ಹಾಡುವಂತೆ, ನೃತ್ಯ ಮಾಡುವಂತೆ ಪ್ರೇರೇಪಿಸಿದರು. ಹಾಡಿನ ಮಧ್ಯೆಯೇ ತಮ್ಮ ಸಂಗೀತ ತಂಡದ ಸದಸ್ಯರನ್ನು ಒಬ್ಬೊಬ್ಬರಾಗಿ ಪರಿಚಯಿಸಿದ ಶಾನ್‌, ಪಾರ್ಟ್‌ನರ್‌, ಲಗೇ ರಹೊ ಮುನ್ನಾಭಾಯ್‌, ವೆಲ್‌ಕಮ್‌ ಚಿತ್ರಗಳ ಹಾಡುಗಳನ್ನು ಹಾಡಿ ರಂಜಿಸಿದರು.

Advertisement

ಬಿಡುವಿಲ್ಲದೇ ಹಾಡುಗಳನ್ನು ಹಾಡಿದ್ದು ಶಾನ್‌ ವಿಶೇಷತೆ. ಮೈದಾನದಾದ್ಯಂತ ಪ್ರೇಕ್ಷಕರು ನಿಂತಿದ್ದರಿಂದ ಕಿವಿ ಗಡಚಿಕ್ಕುವ ಧ್ವನಿವರ್ಧಕಗಳ ವ್ಯವಸ್ಥೆ ಮಾಡಲಾಗಿತ್ತು. ಡ್ರೋನ್‌ ಮೂಲಕ ಶಾನ್‌ ಕಾರ್ಯಕ್ರಮದ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಾನ್‌ ಕಾರ್ಯಕ್ರಮವನ್ನು ಆಸ್ವಾದಿಸಲು ಹಲವು ಗಣ್ಯರು ಆಗಮಿಸಿದ್ದರು. 

ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ| ಅಶೋಕ ಶೆಟ್ಟರ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಂಕ್ರಣ್ಣ ಮುನವಳ್ಳಿ, ಮೋಹನ ಲಿಂಬಿಕಾಯಿ, ಉದ್ಯಮಿ ಆನಂದ ಸಂಕೇಶ್ವರ ಮೊದಲಾದವರು ಪಾಲ್ಗೊಂಡಿದ್ದರು. ಶಾನ್‌ ಕಾರ್ಯಕ್ರಮಕ್ಕೂ ಮುನ್ನ ಕೆಎಲ್‌ಇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next